Advertisement

ಅಪಘಾತದಲ್ಲಿ ನೆರವು: ಜೀವರಕ್ಷಕ ಪ್ರಶಸ್ತಿಗೆ ಅರ್ಜಿ ಆಹ್ವಾನ 

09:28 AM Dec 08, 2017 | |

ಮಂಗಳೂರು: ರಾಜ್ಯದಲ್ಲಿ ರಸ್ತೆ ಅಪಘಾತ ನಡೆದ ಸಂದರ್ಭದಲ್ಲಿ ಗಾಯಾಳುಗಳಿಗೆ ನೆರವಾದವರಿಗೆ ನೀಡಲಾಗುವ ಜೀವರಕ್ಷಕ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 

Advertisement

2015ರ ರಸ್ತೆ ಅಪಘಾತ ಸಮೀಕ್ಷೆಯ ಪ್ರಕಾರ ಅಪಘಾತ ಹಾಗೂ ಸಾವುಗಳ ಸಂಖ್ಯೆಯಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿ ತೃತೀಯ ಸ್ಥಾನದಲ್ಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಯಲ್ಲಿ “ಮುಖ್ಯಮಂತ್ರಿ ಸಾಂತ್ವನ ಹರೀಶ್‌ ಯೋಜನೆ’ಯನ್ನು ಜಾರಿಗೊಳಿಸಲಾಗಿದೆ. ಯೋಜನೆಯನ್ನು ಪರಿಣಾಮಕಾರಿಯಾಗಿಸಲು, ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು, ಜೀವ ಉಳಿಸಲು ನೆರವಾಗುವವರಿಗೆ “ಜೀವ ರಕ್ಷಕ ಪ್ರಶಸ್ತಿ’ ನೀಡಲು ನಿರ್ಧರಿಸಲಾಗಿದೆ. 

ಕರ್ನಾಟಕ ರಾಜ್ಯ ವ್ಯಾಪ್ತಿಯೊಳಗೆ ನಡೆದ ರಸ್ತೆ ಅಪಘಾತಗಳಲ್ಲಿ ಗಾಯಾಳುಗಳಿಗೆ ಸಹಾಯ ಮಾಡಲು ಶ್ರಮಿಸುವ ಯಾವುದೇ ವಯಸ್ಸಿನ/ಯಾವುದೇ ರಾಷ್ಟ್ರೀಯತೆಯ ವ್ಯಕ್ತಿ ಅಥವಾ ರಸ್ತೆ ಅಪಘಾತ ಗಾಯಾಳುಗಳಿಗೆ ನೆರವಾದ ಅಥವಾ ಜೀವ ಉಳಿಸಲು ಶ್ರಮಿಸಿದ ವ್ಯಕ್ತಿ ಪ್ರಶಸ್ತಿಗಾಗಿ ಸ್ವತಃ ಅಥವಾ ಸಾಕ್ಷಿಯಾದ ವ್ಯಕ್ತಿಯಿಂದ ನಾಮಕರಣಗೊಳ್ಳಬಹುದು. ಪ್ರಶಸ್ತಿಯನ್ನು ಒಂದು ವರ್ಷದಲ್ಲಿ ಎರಡು ಬಾರಿ ನೀಡಲಾಗುವುದು. ನಾಮಕರಣ/ಅರ್ಜಿಗಳನ್ನು ಜನವರಿಯಿಂದ ಜುಲೈವರೆಗೆ ಹಾಗೂ ಆಗಸ್ಟ್‌ನಿಂದ ಡಿಸೆಂಬರ್‌ವರೆಗೆ ಸ್ವೀಕರಿಸಲಾಗುವುದು. ಪ್ರಶಸ್ತಿಗಳನ್ನು ಪ್ರತೀ ವರ್ಷ ಆ. 15ರ ಸ್ವಾತಂತ್ರ್ಯ  ದಿನಾಚರಣೆ ಮತ್ತು ಜ. 26ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ನೀಡಲಾಗುವುದು.

ದ.ಕ. ಜಿಲ್ಲೆಯಲ್ಲಿ ಜೀವರಕ್ಷಕ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಡಿ. 23 ಕೊನೆಯ ದಿನ. ಹೆಚ್ಚಿನ ಮಾಹಿತಿ ಮತ್ತು ಅರ್ಜಿ ನಮೂನೆಯನ್ನು ಜಿಲ್ಲಾ ಸಂಯೋಜಕರು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಂಗಳೂರು ಇವರಿಂದ ಪಡೆಯಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next