Advertisement

ವೃದ್ಧಾಪ್ಯದಲ್ಲಿ ನೆರವು: ಸಣ್ಣ ವ್ಯಾಪಾರಿಗಳಿಗೂ ಪಿಂಚಣಿ ಯೋಜನೆ

12:37 AM Nov 07, 2019 | mahesh |

ಉಡುಪಿ: ದೇಶದ ಸಣ್ಣ ವ್ಯಾಪಾರಿಗಳಿಗೆ ವೃದ್ಧಾಪ್ಯದಲ್ಲಿ ನೆರವಾಗಲು ಕೇಂದ್ರ ಸರಕಾರ ಪ್ರಧಾನ ಮಂತ್ರಿ ಲಘು ವ್ಯಾಪಾರಿ ಮಾನ್‌-ಧನ್‌ (ಪಿಎಂ ಎಲ್‌ವೈಎಂ) ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿದೆ. ಭಾರತೀಯ ಜೀವವಿಮಾ ನಿಗಮವು ಪಿಂಚಣಿ ನಿಧಿಯ ವ್ಯವಸ್ಥಾಪನೆ ಹೊಣೆ ಹೊತ್ತಿದೆ. ಕೇಂದ್ರ ಕಾರ್ಮಿಕ ಸಚಿವಾಲಯದ ಸುಪರ್ದಿಯಲ್ಲಿ ಜಾರಿಗೊಳ್ಳುತ್ತಿದೆ.

Advertisement

ಯಾರು ಅರ್ಹರು?
* ಸಣ್ಣ ಅಂಗಡಿ ಮಾಲಕರು, ಚಿಲ್ಲರೆ ವ್ಯಾಪಾರಸ್ಥರು, ಅಕ್ಕಿ ಗಿರಣಿ-ಎಣ್ಣೆ ಗಿರಣಿ ಮಾಲಕರು, ವರ್ಕ್‌ಶಾಪ್‌ ಮಾಲಕರು, ಕಮಿಷನ್‌ ಏಜೆಂಟ್‌, ರಿಯಲ್‌ ಎಸ್ಟೇಟ್‌ ಬ್ರೋಕರ್‌, ಹೊಟೇಲ್‌- ರೆಸ್ಟೋರೆಂಟ್‌- ಸಣ್ಣ ವ್ಯಾಪಾರ ಸಂಸ್ಥೆಗಳ ಮಾಲಕರು.

* ವಾರ್ಷಿಕ ವಹಿವಾಟು 1.5 ಕೋ.ರೂ.ಗಿಂತ ಹೆಚ್ಚಿಗೆ ಇರದ ಸಣ್ಣ ವ್ಯಾಪಾರಿಗಳು.

*18ರಿಂದ 40 ವರ್ಷದ ವರೆಗಿನವರು.
* ಸಂಘಟಿತ ವಲಯದಲ್ಲಿರಬಾರದು ಅಥವಾ ಭವಿಷ್ಯನಿಧಿ, ಇಎಸ್‌ಐ, ಎನ್‌ಪಿಎಸ್‌ ಯೋಜನೆಯಡಿ ಸೇರಿರಬಾರದು.

* ಆರ್ಥಿಕ ಸದೃಢರು, ಆದಾಯ ತೆರಿಗೆ ಪಾವತಿದಾರರು, ಸರಕಾರಿ ನೌಕರರಾಗಿರಬಾರದು.

Advertisement

* ಅಟಲ್‌ ಪಿಂಚಣಿ ಯೋಜನೆ, ವೃದ್ಧಾಪ್ಯ ವೇತನ, ವಿಧವಾ ಮಾಸಾಶನ ಪಡೆಯುವವರೂ ಅರ್ಜಿ ಸಲ್ಲಿಸಬಹುದು.

* ಕೇಂದ್ರ ಸರಕಾರದ ಪ್ರಧಾನಮಂತ್ರಿ ಶ್ರಮ ಯೋಗಿ ಮಾನ-ಧನ್‌ ಯೋಜನೆಗೆ (ಪಿಎಂಎಸ್‌ವೈಎಂ) ಹೆಸರು ನೋಂದಾಯಿಸಿದ ಅಸಂಘಟಿತ ವಲಯದ ಕಾರ್ಮಿಕರಾಗಿರಬಾರದು.

ಪಾವತಿ ಕ್ರಮ
18ರಿಂದ 40 ವರ್ಷದ ವರೆಗೆ ಒಟ್ಟು 23 ವಯೋಮಾನದ ವರ್ಗಗಳಿಗೆ ಪ್ರತ್ಯೇಕ ದೇಣಿಗೆ ಮೊತ್ತ ನಮೂದಿಸಲಾಗಿದೆ. 18ನೇ ವಯಸ್ಸಿನವರು 55 ರೂ., 40ನೇ ವಯಸ್ಸಿನವರು 200 ರೂ. ಪಾವತಿಸಬೇಕು. ಈ ನಡುವಿನವರಿಗೆ ಪ್ರತ್ಯೇಕ ಮೊತ್ತ ನಿಗದಿಪಡಿಸಲಾಗಿದೆ. ಇದಕ್ಕೆ ಸಮನಾದ ಮೊತ್ತವನ್ನು ಕೇಂದ್ರ ಸರಕಾರ ಭರಿಸಲಿದೆ. ಒಂದು ಬಾರಿ ಸೇರಿದರೆ 60 ವರ್ಷದವರೆಗೆ ಚಂದಾದಾರರು ಪ್ರತಿ ತಿಂಗಳು ದೇಣಿಗೆ ಮೊತ್ತವನ್ನು ಬ್ಯಾಂಕ್‌ ಮೂಲಕ ಆನ್‌ಲೈನ್‌ನಲ್ಲಿ ಪಾವತಿಸಬೇಕು. ಚಂದಾದಾರರು ಕಟ್ಟಿದ ಮೊತ್ತ ಒಂದೇ ವರ್ಷದಲ್ಲಿ ಬರುತ್ತದೆ.

ನೋಂದಣಿ ಕ್ರಮ
* ದೇಶದಲ್ಲಿ ಸುಮಾರು 3.5 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳಿವೆ. ಚಂದಾದಾರರು ಸಮೀಪದ ಸಿಎಸ್‌ಸಿಗಳಿಗೆ ತೆರಳಿ ನೋಂದಾಯಿಸಬೇಕು.

* ಉಳಿತಾಯ/ ಜನಧನ್‌ ಬ್ಯಾಂಕ್‌ ಖಾತೆ ಮತ್ತು ಆಧಾರ್‌ ಸಂಖ್ಯೆ ಹೊಂದಿರಬೇಕು.

* ಸ್ವಯಂ ಘೋಷಣೆ ಮೂಲಕ ನೋಂದಣಿ. ಆದಾಯ ಮತ್ತು ವಯಸ್ಸು ವಿವರಗಳಿಗೆ ಪ್ರತ್ಯೇಕ ದಾಖಲಾತಿ ಬೇಡ. ವಾರ್ಷಿಕ ವಹಿವಾಟಿನ ಕುರಿತು ಸ್ವಯಂ ಪ್ರಮಾಣೀಕರಣ, ಆಧಾರ್‌ ಸಂಖ್ಯೆಯೇ ದಾಖಲಾತಿ.

* ನೋಂದಣಿಯಾಗುವಾಗಲೇ ದೇಣಿಗೆ ಮೊತ್ತ ಬ್ಯಾಂಕ್‌ ಖಾತೆಯಿಂದ ಜಮೆ ಆಗಲಿದೆ.

60 ವರ್ಷಕ್ಕೆ 3 ಸಾವಿರ ರೂ. ಪಿಂಚಣಿ ಆರಂಭ
60 ವರ್ಷವಾದ ಬಳಿಕ ಕನಿಷ್ಠ 3,000 ರೂ. ಮಾಸಿಕ ಪಿಂಚಣಿ ಜೀವಿತದ ಕೊನೆಯವರೆಗೆ ದೊರೆಯಲಿದೆ. ಇದು ಭವಿಷ್ಯದಲ್ಲಿ ಏರಿಕೆಯಾಗಲೂಬಹುದು. ಈಗ ಖಾತ್ರಿ ಪಡಿಸಿದ ಮೊತ್ತ 3,000 ರೂ. ಚಂದಾದಾರ ಮೃತಪಟ್ಟರೆ ನಾಮಿನಿಗೆ ಅರ್ಧಾಂಶ ಪಿಂಚಣಿ ದೊರೆಯಲಿದೆ. 60 ವರ್ಷದೊಳಗೆ ಮೃತಪಟ್ಟರೆ ಯೋಜನೆಯನ್ನು ಮುಂದುವರಿಸಲು ನಾಮಿನಿಗೆ ಅವಕಾಶವಿದೆ. ಯೋಜನೆಯಿಂದ ನಿರ್ಗಮಿಸಿದರೆ ಪಾವತಿಸಿದ ಮೊತ್ತವನ್ನು ಹಿಂದಿರುಗಿಸಲಾಗುವುದು. ಒಂದು ವರ್ಷದೊಳಗೆ ಅರ್ಧಕ್ಕೆ ನಿಲ್ಲಿಸಿದಲ್ಲಿ ಮುಂದೆ ದಂಡ ಶುಲ್ಕ ಇಲ್ಲದೆ, ಒಂದು ವರ್ಷದ ಅನಂತರವಾದರೆ ಸಾಮಾನ್ಯ ದಂಡ ಶುಲ್ಕ ಪಾವತಿಸಿ ಮುಂದುವರಿಸಲು ಅವಕಾಶವಿದೆ.

ಪಿಎಂ ಎಲ್‌ವೈಎಂ ಪಿಂಚಣಿಯನ್ನು ಸಣ್ಣ ವ್ಯಾಪಾರಿಗಳ ಸಾಮಾಜಿಕ ಭದ್ರತೆಗಾಗಿ ರೂಪಿಸಲಾಗಿದೆ. ಸಣ್ಣ ವ್ಯಾಪಾರಿಗಳು ಸಿಎಸ್‌ಸಿಗಳಲ್ಲಿ ಹೆಸರು ನೋಂದಾಯಿಸುವ ಮೂಲಕ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು.
– ಶವಿನ್‌ ಪೂಜಾರಿ, ಪ್ರಶಾಂತ್‌
ನಿತೀಶ್‌ ಶೆಟ್ಟಿಗಾರ್‌, ಗೋವರ್ಧನ್‌ ಎಚ್‌.,  ದ.ಕ. ಮತ್ತು ಉಡುಪಿ ಜಿಲ್ಲಾ ವ್ಯವಸ್ಥಾಪಕರು, ಸಿಎಸ್‌ಸಿ.

ಜನರಿಗಿನ್ನೂ ಅರಿವಿಲ್ಲ
ದೇಶದ ವಿವಿಧೆಡೆ ಇರುವ ಸಿಎಸ್‌ಸಿಗಳಲ್ಲಿ ನೋಂದಾಯಿಸಬಹುದು. ದೇಶದಲ್ಲಿ ಸುಮಾರು 3 ಕೋಟಿ ಸಣ್ಣ ವ್ಯಾಪಾರಿಗಳಿದ್ದಾರೆಂದು ಅಂದಾಜಿಸಲಾಗಿದೆ. ಇದುವರೆಗೆ 3,198 ಜನರು ಮಾತ್ರ ನೋಂದಾಯಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಕೇವಲ 342 ಜನರು, ಇದರಲ್ಲಿ ದ.ಕ.ದಲ್ಲಿ 10, ಉಡುಪಿಯಲ್ಲಿ 15 ಜನರು ನೋಂದಾಯಿಸಿಕೊಂಡಿದ್ದಾರೆ. ಯೋಜನೆ ಜು.22ರಂದು ಆರಂಭವಾದ ಕಾರಣ ಜನರಲ್ಲಿ ಜಾಗೃತಿ ಮೂಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next