Advertisement

ಉಪ್ಪಿನಂಗಡಿ ಆಸ್ಪತ್ರೆಗೆ ಕಾಯಂ ವೈದ್ಯರನ್ನು ನಿಯೋಜಿಸಿ

12:39 PM Jun 02, 2018 | Team Udayavani |

ಉಪ್ಪಿನಂಗಡಿ: ಮಳೆಗಾಲದ ಆರಂಭದಲ್ಲಿ ಸಾಂಕ್ರಾಮಿಕ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದು, ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳಿಲ್ಲದೆ ರೋಗಿಗಳು ಕಂಗೆಡುವಂತಾಗಿದೆ.

Advertisement

ಈ ಹಿಂದೆ ಈ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾ| ನೈನಾ ಫಾತಿಮಾ ವೈಯಕ್ತಿಕ ಕಾರಣದಿಂದ ರಾಜೀನಾಮೆ ನೀಡಿದ್ದು, ಈಗ ಆಸ್ಪತ್ರೆಯಲ್ಲಿ ಕಾಯಂ ವೈದ್ಯರಿಲ್ಲದೆ ರೋಗಿಗಳಿಗೆ ಸೇವೆ ನೀಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಪ್ರಭಾರ ನೆಲೆಯಲ್ಲಿ ಸುತ್ತಮುತ್ತಲ ಸರಕಾರಿ ವೈದ್ಯರನ್ನು ನಿಯೋಜಿಸಲಾಗುತ್ತಿದ್ದರೂ ವಾರದ ಮೊದಲ ನಾಲ್ಕು ದಿನ ಯಾರೊಬ್ಬ ವೈದ್ಯರೂ ಆಗಮಿಸದೆ, ರೋಗಿಗಳು ಕಾಯುವ ಸ್ಥಿತಿ ನಿರ್ಮಾಣವಾಗಿದೆ.

ನಿಯುಕ್ತಿಗೊಂಡ ವೈದ್ಯರು ಅವರವರ ಕಾರ್ಯದೊತ್ತಡದಿಂದ ಬರಲು ಅಸಾಧ್ಯವಾದರೆ, ಇನ್ನು ಕೆಲ ವೈದ್ಯರು ಉನ್ನತ ವ್ಯಾಸಂಗಕ್ಕಾಗಿ ರಜೆಯ ಮೇಲೆ ತೆರಳುತ್ತಿ ರುವುದರಿಂದ ಕರ್ತವ್ಯಕ್ಕೆ ಹಾಜರಾಗಲು ಅಸಮರ್ಥರಾಗಿದ್ದಾರೆ. ಶುಕ್ರವಾರ ಅಳಕೆಯ ವೈದ್ಯರು ಆಗಮಿಸಿದ್ದರು. ಅವರೂ ಉನ್ನತ ವ್ಯಾಸಂಗಕ್ಕೆ ತೆರಳುತ್ತಿದ್ದಾರೆ. ಮತ್ತೆ ಇಲ್ಲಿ ನಿಯೋಜನೆಯ ಮೇರೆಗೆ ವೈದ್ಯರ ಲಭ್ಯತೆಯೂ ಇಲ್ಲದಂತಾಗುವ ಭೀತಿ ಕಾಡತೊಡಗಿದೆ.

ವೈದ್ಯರ ಗೈರುಹಾಜರಿಗೆ ನಾನಾ ಕಾರಣಗಳಿದ್ದರೂ ಬಡ ರೋಗಿಗಳಂತೂ ಕಾಡುವ ಅನಾರೋಗ್ಯಕ್ಕೆ ಸೂಕ್ತ ಔಷದೋಪಚಾರ ಲಭಿಸದೆ ಸಂಕಷ್ಟಕ್ಕೆ ತುತ್ತಾಗುತ್ತಿದ್ದಾರೆ. ದಿನಂಪತ್ರಿ 150ರಿಂದ 200 ರೋಗಿಗಳು ಆಸ್ಪತ್ರೆಗೆ ಬಂದು, ಕಾದು ನಿರಾಶರಾಗಿ ಹಿಂತಿರುಗುವಂತಾಗಿದೆ.

ಆಗ್ರಹ
ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿರುವ ಈ ಆಸ್ಪತ್ರೆಗೆ ಸುಸಜ್ಜಿತ ಕಟ್ಟಡಗಳ ನಿರ್ಮಾಣ ಭರದಿಂದ ನಡೆಯುತ್ತಿದ್ದು, ಅತ್ಯವಶ್ಯಕವಾಗಿರುವ ವೈದ್ಯರ ನೇಮಕಾತಿ ಇಲ್ಲದೆ ಆಸ್ಪತ್ರೆ ಪ್ರಯೋಜನಕ್ಕೆ ಲಭಿಸುತ್ತಿಲ್ಲ. ಡೆಂಗ್ಯೂ ಜ್ವರ ವ್ಯಾಪಕವಾಗಿ ಕಾಣಿಸಿಕೊಂಡ ಈ ಪರಿಸರದಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುವಂತಾಗಲು ಕಾಯಂ ನೆಲೆಯ ವೈದ್ಯರ ನೇಮಕಾತಿ ಆಗಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next