ಮಂಡ್ಯ: ಕನಿಷ್ಠ ಮಾಸಿಕ ಗೌರವಧನ 12 ಸಾವಿರ ರೂ. ನಿಗದಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಳಿಗೆ ಒತ್ತಾಯಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಮಾವಣೆಗೊಂಡ ಕಾರ್ಯಕರ್ತೆಯರು, ಬಳಿಕ ಮೆರವಣಿಗೆ ಮೂಲಕ ತೆರಳಿ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿದರು.
ಆರೋಗ್ಯ ಇಲಾಖೆಯಡಿ ಆಶಾ ಕಾರ್ಯಕರ್ತೆಯರು ಮಹತ್ತರವಾದ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಹಳ್ಳಿ, ನಗರದ ಬೇರುಮಟ್ಟದಲ್ಲಿ ಹಲವು ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಆದರೂ, ಪ್ರತಿ ತಿಂಗಳು ವೇತನವಿಲ್ಲದೇ ಪರದಾಡುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿವಿಧ ಬೇಡಿಕೆಗಳು: ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುವ ಪ್ರೋತ್ಸಾಹ ಧನ ಸೇರಿಸಿ ಮಾಸಿಕ 12 ಸಾವಿರ ರೂ. ಗೌರವಧನ ನಿಗದಿಗೊಳಿಸಬೇಕು. 9 ತಿಂಗಳಿನಿಂದ ಬಾಕಿಯಿರುವ ಎಂಸಿಟಿಎಸ್ ಸೇವೆಗಳ ಪ್ರೋತ್ಸಾಹ ಧನವನ್ನು ಪ್ರತಿ ಕಾರ್ಯಕರ್ತೆಯರಿಗೆ 3 ಸಾವಿರ ರೂ. ನೀಡಬೇಕು. ಆಶಾ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಬೇಕು. ನಿವೃತ್ತಿಯಾದವರಿಗೆ ಮಾಸಿಕ ಪಿಂಚಣಿ ಜತೆಗೆ ನಿವೃತ್ತಿ ಪರಿಹಾರ ನೀಡಬೇಕು. ಪ್ರಧಾನಮಂತ್ರಿ ಜೀವನಜ್ಯೋತಿ ಯೋಜನೆ ಮತ್ತು ಸುರಕ್ಷಾ ಬಿಮಾ ಯೋಜನೆ ಜಾರಿಗೊಳಿಸಬೇಕು. ಹೆರಿಗೆ ರಜೆ ಜತೆಗೆ ಮಾಸಿಕ ಗೌರವಧನ ನೀಡುವುದೂ ಸೇರಿದಂತೆ 13 ಬೇಡಿಕೆಗಳು ಈಡೇರಿಸಬೇಕೆಂದು ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಸಲಹೆಗಾರ್ತಿ ಟಿ.ಸಿ.ರಮ್ಯಾ, ಜಿಲ್ಲಾಧ್ಯಕ್ಷೆ ಪುಷ್ಪಾ, ಕಾರ್ಯದರ್ಶಿ ಶೋಭಾ ಇತರರಿದ್ದರು.