ವರದಿ: ಹೇಮರಡ್ಡಿ ಸೈದಾಪುರ
ಹುಬ್ಬಳ್ಳಿ: ಕೋವಿಡ್ ನಂತರದಲ್ಲಿ ಮಕ್ಕಳ ಕಲಿಕಾ ಸಾಮರ್ಥ್ಯದ ಮೌಲ್ಯಮಾಪನಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳೇ ಮುಂದಾಗಿದ್ದು, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಅಧಿಕಾರಿಗಳು ದಿಢೀರ್ ತೆರಳಿ ವಿದ್ಯಾರ್ಥಿಗಳನ್ನು ಲಿಖೀತ ಪರೀಕ್ಷೆಗೆ ಒಳಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇದಕ್ಕಾಗಿ ಹಲವು ತಂಡಗಳನ್ನು ರಚಿಸಿ ಫಲಿತಾಂಶ ಕಡಿಮೆಯಿರುವ ಶಾಲೆಗಳನ್ನು ಗುರುತಿಸಿ ಮೌಲ್ಯಮಾಪನ ವಿಶ್ಲೇಷಣೆ ಕಾರ್ಯ ಕೈಗೊಂಡಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿ ಒಂದೂವರೆ ವರ್ಷಗಳ ನಂತರ 6-10 ನೇ ವಿದ್ಯಾರ್ಥಿಗಳಿಗೆ ಭೌತಿಕ ತರಬೇತಿ ಆರಂಭವಾಗಿವೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳ ಕಲಿಕೆ ಕುಂಠಿತಗೊಳ್ಳಬಾರದು ಎನ್ನುವ ಕಾರಣಕ್ಕೆ ಆನ್ ಲೈನ್, ಆಫ್‌ಲೈನ್, ಪಾಲಕರೊಂದಿಗೆ ಶಾಲೆಗೆ ಬಂದು ಸಮಸ್ಯೆ ಪರಿಹಾರ, ವಿದ್ಯಾಗಮ ಏನೆಲ್ಲಾ ಕಸರತ್ತು ಮಾಡಿದರೂ ಈ ಎಲ್ಲಾ ವಿಧಾನಗಳಿಂದ ದೂರ ಉಳಿದ ವಿದ್ಯಾರ್ಥಿಗಳ ಸಂಖ್ಯೆಯೂ ಇದೆ. 10ನೇ ತರಗತಿ ಹೊರತುಪಡಿಸಿ ಉಳಿದ ಯಾವ ತರಗತಿಗಳಿಗೆ ಎರಡು ವಾರ್ಷಿಕ ಪರೀಕ್ಷೆ, ಕಿರು ಪರೀಕ್ಷೆಗಳು ನಡೆದಿಲ್ಲ. ಹೀಗಾಗಿ ಒಂದೂವರೆ ವರ್ಷದ ಬಳಿಕ ವಿದ್ಯಾರ್ಥಿಗಳ ಕಲಿಕಾ ಮಟ್ಟ ಯಾವ ಹಂತದಲ್ಲಿದೆ ಎನ್ನುವ ಮೌಲ್ಯಮಾಪನಕ್ಕೆ ಜಿಲ್ಲಾ ಶಿಕ್ಷಣ ಇಲಾಖೆ ಮುಂದಾಗಿದೆ.
ಪ್ರತಿ ತಂಡ ಮೂರು ಶಾಲೆಗೆ ಭೇಟಿ: ಕಲಿಕಾ ಮಟ್ಟದ ಪರೀಕ್ಷೆ ಹೊಣೆಯನ್ನು ಶಾಲೆಗಳಿಗೆ ನೀಡದೆ ನೇರವಾಗಿ ಅಧಿಕಾರಿಗಳೇ ಕೈಗೊಳ್ಳುತ್ತಿದ್ದಾರೆ. ಇದಕ್ಕಾಗಿ ಡಯಟ್ 10, ಜಿಲ್ಲಾ ಶಿಕ್ಷಣ ಇಲಾಖೆ 3, ಬಿಇಒ 5 ಹೀಗೆ ಒಟ್ಟು 17 ತಂಡಗಳನ್ನು ರಚಿಸಿ ಕ್ಲಸ್ಟರ್, ಬ್ಲಾಕ್‌ಗಳನ್ನು ಹಂಚಿಕೆ ಮಾಡಿಕೊಂಡಿದ್ದಾರೆ. ಪ್ರತಿಯೊಂದು ತಂಡದಲ್ಲಿ ಶಿಕ್ಷಣಾಧಿಕಾರಿಗಳು, ಹಿರಿಯ ಉಪನ್ಯಾಸಕರು, ವಿಷಯ ಪರಿವೀಕ್ಷಕರು, ಸಹಾಯಕ ಯೋಜನಾಧಿಕಾರಿಗಳು, ಶೈಕ್ಷಣಿಕ ಮೇಲ್ವಿಚಾರಣಾಧಿಕಾರಿಗಳಿದ್ದಾರೆ. ಗುರುತಿಸಿದ ಶಾಲೆಗಳಿಗೆ ದಿಢೀರ್ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಲಿಖೀತ ಪರೀಕ್ಷೆ ನಡೆಸುತ್ತಿದ್ದಾರೆ. ಪ್ರತಿಯೊಂದು ತಂಡ ಕನಿಷ್ಟ ಮೂರು ಶಾಲೆಗಳಿಗೆ ಭೇಟಿ ನೀಡಿ ಮೌಲ್ಯಮಾಪನಕ್ಕೆ ಒಳಪಡಿಸುವ ಗುರಿ ಹೊಂದಿದ್ದು, ಇಲ್ಲಿಯವರೆಗೆ 92 ಶಾಲೆಗಳಲ್ಲಿ ಪರೀಕ್ಷೆ ನಡೆಸಿದ್ದಾರೆ.
ಆಯಾ ಶಾಲೆಗಳಿಗೆ ಫಲಿತಾಂಶ: ಮೌಲ್ಯಮಾಪನಕ್ಕೆ ಒಳಪಡಿಸಲು ಆಯಾ ತರಗತಿಗಳಿಗೆ ಪೂರಕವಾಗಿ ಇಲ್ಲಿಯವರೆಗೆ ಮುಗಿದಿರುವ ಪಾಠಗಳ ಮೇಲೆ ಅ ಧಿಕಾರಿಗಳೇ ಪ್ರಶ್ನೆಪತ್ರಿಕೆ ಸಿದ್ಧಪಡಿಸುತ್ತಾರೆ. ಅತ್ಯಂತ ಸರಳ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇನ್ನೂ ಕೆಲವು ಕಡೆ ಮೌಖೀಕ ಪರೀಕ್ಷೆಯನ್ನು ಕೂಡ ಅಧಿಕಾರಿಗಳು ನಡೆಸಿದ್ದಾರೆ. ಹೀಗೆ ಪರೀಕ್ಷೆ ನಡೆಸಿದ ನಂತರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸಿ ಫಲಿತಾಂಶವನ್ನು ಶಾಲೆಗೆ ಕಳುಹಿಸಿ ಆಗಿರುವ ಅಂತರ, ಅದಕ್ಕೆ ಬೇಕಾಗಿರುವ ಅಂಶಗಳನ್ನು ಸೂಚಿಸಿ ಇವುಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲು ತಿಳಿಸಲಾಗುತ್ತಿದೆ. ಪುನಃ ಎರಡು ತಿಂಗಳ ನಂತರ ಪರೀಕ್ಷೆ ನಡೆಸುವ ಉದ್ದೇಶ ಹೊಂದಿದ್ದಾರೆ.
ಮೊದಲ ಹಂತದಲ್ಲಿ ಒಂದು ತಂಡ 3-4 ಶಾಲೆಗಳ ಗುರಿ ಹಾಕಿಕೊಂಡಿದ್ದು, ಪ್ರಮುಖವಾಗಿ ಸರಕಾರಿ ಹಾಗೂ ಅನುದಾನಿತ ಶಾಲೆಗಳು ಇವರ ಗುರಿಯಾಗಿದೆ. ಅದರಲ್ಲೂ ಗ್ರಾಮೀಣ ಹಾಗೂ ಕಡಿಮೆ ಫಲಿತಾಂಶ ಇರುವ ಶಾಲೆಗಳನ್ನು ಗುರುತಿಸಿ ಮೌಲ್ಯಮಾಪನ ಮಾಡಲಾಗುತ್ತಿದೆ. ಇಲ್ಲಿಯವರೆಗೆ ಸುಮಾರು 2970 ವಿದ್ಯಾರ್ಥಿಗಳು ಮೌಲ್ಯಮಾಪನಕ್ಕೆ ಒಳಗಾಗಿದ್ದಾರೆ. ಪರೀಕ್ಷೆಗೊಳಗಾದ ಪ್ರತಿಯೊಬ್ಬ ವಿದ್ಯಾರ್ಥಿ ಯಾವ ವಿಷಯದಲ್ಲಿ ಕಲಿಕೆ ಸಾಮರ್ಥ್ಯ ಹೊಂದಿದ್ದಾನೆ ಎನ್ನುವ ವಿಶ್ಲೇಷಣೆ ಮಾಡುತ್ತಾರೆ. ಮೌಲ್ಯಮಾಪನದ ನಂತರ ಆಯಾ ಶಾಲೆಯ ವಿದ್ಯಾರ್ಥಿಗಳ ಕಲಿಕೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾರ್ಗದರ್ಶನ ನೀಡುವ ಕೆಲಸ ಆಯಾ ತಂಡಗಳು ನಡೆಸುತ್ತಿವೆ. ಈ ಕಾರ್ಯವನ್ನು ಇಲಾಖೆ ಗಂಭೀರವಾಗಿ ತೆಗೆದುಕೊಂಡು ಆಳವಾಗಿ ಕೆಲಸ ಮಾಡುತ್ತಿದೆ ಎನ್ನುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು.