Advertisement

Assembly Session ಕ್ರೈಸ್‌ ವಸತಿ ಶಾಲೆಗಳಲ್ಲಿ 5 ವರ್ಷಗಳಲ್ಲಿ 92 ಮಕ್ಕಳ ಸಾವು

12:36 AM Dec 07, 2023 | Team Udayavani |

ಬೆಳಗಾವಿ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ (ಕ್ರೈಸ್‌)ಯ ವಸತಿ ಶಾಲೆಗಳಲ್ಲಿ ಕಳೆದ 5 ವರ್ಷಗಳಲ್ಲಿ 92 ಮಕ್ಕಳ ಸಾವು ಪ್ರಕರಣಗಳು ವರದಿಯಾಗಿದ್ದು, ಈ ಬಗ್ಗೆ ನಾಗರಿಕ ಹಕ್ಕು ನಿರ್ದೇಶನಾಲಯದಿಂದ ಸಮಗ್ರ ತನಿಖೆ ನಡೆಸುವಂತೆ ಸರಕಾರಕ್ಕೆ ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಶಿಫಾರಸು ಮಾಡಿದೆ.

Advertisement

ವಿಧಾನಮಂಡಲದ ಉಭಯ ಸದನಗಳಲ್ಲಿ ಬುಧವಾರ ಮಂಡನೆಯಾದ ಸಮಿತಿಯ ಮಧ್ಯಾಂತರ ವರದಿಯಲ್ಲಿ ಈ ಬಗ್ಗೆ ಉಲ್ಲೇಖವಿದ್ದು, ಕಳೆದ 5 ವರ್ಷಗಳಲ್ಲಿ 92 ಮಕ್ಕಳು ಸಾವನ್ನಪ್ಪಿದ್ದು, ಈ ಪೈಕಿ 29 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಇನ್ನುಳಿದ ಮಕ್ಕಳು ಮನೆಗೆ ಹೋಗುವ ದಾರಿಯಲ್ಲಿ ಸಾವನ್ನಪ್ಪಿರುವುದು ಪತ್ತೆಯಾಗಿದೆ. ಈ ಪ್ರಕರಣಗಳು ಏಕೆ ಸಂಭವಿಸಿದವು? ಹೇಗೆ ಸಂಭವಿಸಿದವು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಪೋಷಕರು ಸ್ಥಳಕ್ಕೆ ತಲುಪುವ ಮೊದಲೇ ಮಕ್ಕಳ ಶವ ಸಂರಕ್ಷಿಸಿಟ್ಟಿದ್ದರಿಂದ ಅವರಿಗೂ ಸ್ಪಷ್ಟ ಮಾಹಿತಿ ಇಲ್ಲ. ಹೀಗಾಗಿ ಈ ಬಗ್ಗೆ ನಾಗರಿಕ ಹಕ್ಕು ನಿರ್ದೇಶನಾಲಯದಿಂದ ಸಮಗ್ರ ತನಿಖೆ ನಡೆಸಬೇಕು. ಜತೆಗೆ ವಸತಿ ಶಾಲೆಗಳಲ್ಲಿನ ಮಕ್ಕಳು, ಅವರ ಪೋಷಕರು ಹಾಗೂ ಶಿಕ್ಷಕರಿಗೆ ಇಲಾಖೆ ಹಂತದಲ್ಲಿಯೇ ಕೌನ್ಸೆಲಿಂಗ್‌ ಮಾಡಿಸಬೇಕು.

ಇದಿಷ್ಟೇ ಅಲ್ಲದೆ, ಬಹಳಷ್ಟು ಕಡೆಗಳಲ್ಲಿ ಟೆಂಡರ್‌ಗೂ ಮೊದಲು ನೀಡುವ ಮಾದರಿಯಂತೆ ಆಹಾರವನ್ನು ಪೂರೈಸುತ್ತಿಲ್ಲ. ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ ಆಹಾರ ಪದಾರ್ಥಗಳನ್ನು ಅಧಿಕಾರಿಗಳು ಪರಿಶೀಲಿಸಿದಾಗ ಪ್ಲಾಸ್ಟಿಕ್‌ ಫೋಮ್‌ ಪತ್ತೆಯಾಗಿದೆ. ಇಂತಹ ಪ್ರಕರಣಗಳ ಹಿಂದೆ ಪ್ರಭಾವಿಗಳಿದ್ದಾರೆ. ಆಹಾರ ಗುಣಮಟ್ಟ ಪರಿಶೀಲನೆಗೆ ಮಾರ್ಗಸೂಚಿ ಹೊರಡಿಸಿ ಜಿಲ್ಲಾ ಮಟ್ಟದಲ್ಲಿ ಹಿರಿಯ ಅಧಿಕಾರಿಗಳಿಂದ ಪರಿಶೀಲಿಸಬೇಕು.

ಕ್ರೈಸ್‌ ಸಂಸ್ಥೆಯಿಂದ ಬಡಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದನ್ನು ಬಿಟ್ಟು, ಸಾವಿರಾರು ಕೋಟಿ ರೂ.ಗಳ ಕಟ್ಟಡ ನಿರ್ಮಾಣ ಕಾಮಗಾರಿ ಮಾಡಲಾಗಿದೆ. ಸುಮಾರು 9 ಸಾವಿರ ಕೋಟಿ ರೂ. ಮೊತ್ತದ 52 ಕಾಮಗಾರಿಗಳು ಪ್ರಗತಿಯಲ್ಲಿದೆ. 1100 ಕೋಟಿ ರೂ. ಮೌಲ್ಯದ ಬಿಲ್‌ಗ‌ಳು ಬಾಕಿ ಇದ್ದು, ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್‌ ಕನ್ಸಲ್ಟೆನ್ಸಿ(ಪಿಎಂಸಿ)ಯನ್ನು ಮುಚ್ಚಲು ಕ್ರಮ ವಹಿಸಿದೆ. ಇನ್ನು ಮುಂದೆ ಕ್ರೈಸ್‌ ಶಾಲೆಗಳ ನಿರ್ಮಾಣಕ್ಕೆ ಲೋಕೋಪಯೋಗಿ, ಪಿಆರ್‌ಇಡಿಯಂತಹ ಸರ್ಕಾರಿ ಸಂಸ್ಥೆಗಳಿಂದ ಮಾಡಿಸಬೇಕು. ಹೊಸ ಕಟ್ಟಡ ನಿರ್ಮಾಣಕ್ಕೂ ಮೊದಲೇ ಶಿಕ್ಷಕರ ನೇಮಕ, ಮೂಲಸೌಕರ್ಯದ ಅಂದಾಜು ಪಟ್ಟಿ ತಯಾರಿಸಿ ಅನುಮೋದನೆ ಪಡೆಯಬೇಕು.

ವಾರದ 5 ದಿನ ಮೊಟ್ಟೆ ಕೊಡಿ
ಸಮಾಜ ಕಲ್ಯಾಣ ಇಲಾಖೆಯ ಎಲ್ಲ ವಿದ್ಯಾರ್ಥಿ ನಿಲಯಗಳಲ್ಲಿ ಮಂಜೂರಾತಿಗಿಂತ ಹೆಚ್ಚು ವಿದ್ಯಾರ್ಥಿಗಳು ದಾಖಲಾಗುತ್ತಿದ್ದು, ಹಾಸ್ಟೆಲ್‌ನಲ್ಲಿ ವಸತಿ ಸೌಲಭ್ಯ ಸಿಗದ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 3 ಸಾವಿರ ರೂ.ಗಳನ್ನು ವಿದ್ಯಾಸಿರಿ ಯೋಜನೆಯಡಿ ನೀಡಬೇಕು. ಇಲಾಖೆಯ ಹಾಸ್ಟೆಲ್‌ಗ‌ಳಲ್ಲಿ ಮಕ್ಕಳಿಗೆ ವಾರಕ್ಕೆ 2 ದಿನ ಊಟಕ್ಕೆ ಮೊಟ್ಟೆ ಕೊಡುವ ಬದಲು ವಾರದ 5 ದಿನಗಳು ನೀಡಬೇಕು. ವಿದ್ಯಾರ್ಥಿನಿಯರ ಸುರಕ್ಷತೆ ದೃಷ್ಟಿಯಿಂದ ಪ್ರತಿ ವಸತಿ ನಿಲಯಕ್ಕೂ ಓರ್ವ ಮಹಿಳಾ ಹೋಂಗಾರ್ಡ್‌ ನೇಮಿಸಬೇಕು. ವಿದ್ಯಾರ್ಥಿ ವೇತನವನ್ನು ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಕೇಂದ್ರ ಸರಕಾರ ಪಾವತಿಸುವ ಬದಲು ಶಿಕ್ಷಣ ಸಂಸ್ಥೆಗೆ ಪಾವತಿಸಬೇಕು. ಬೆಂಗಳೂರು ವಿವಿಗೆ ಕಳೆದ ಸಾಲಿನಲ್ಲಿ ಬಿಡಿಎಯಿಂದ ನೀಡಿದ್ದ 100 ಕೋಟಿ ರೂ. ಅನುದಾನವನ್ನು ಸರಿಯಾಗಿ ಬಳಸಿಲ್ಲ ಎಂಬುದಕ್ಕೆ ಅಲ್ಲಿನ ಹಾಸ್ಟೆಲ್‌ನಲ್ಲಿರುವ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಕೊಟ್ಟಿರುವ ಹಾಸಿಗೆ, ದಿಂಬು ನೋಡಿದರೆ ಗೊತ್ತಾಗುತ್ತದೆ. ಈ ಬಗ್ಗೆ ಆರ್ಥಿಕ ಇಲಾಖೆ ಸೂಕ್ತ ಕ್ರಮ ವಹಿಸಬೇಕೆಂದು ಶಿಫಾರಸು ಮಾಡಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next