Advertisement

ಪಚ್ಚನಾಡಿ, ಕುಡುಪು ಗ್ರಾಮ ಮೀಸಲು ಜಮೀನು ಸಮಸ್ಯೆ; ಒತ್ತುವರಿ ತೆರವಿಗೆ ಕೂಡಲೇ ಕ್ರಮ: ಭೈರತಿ

12:59 AM Sep 14, 2022 | Team Udayavani |

ಬೆಂಗಳೂರು: ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯ ಪಚ್ಚನಾಡಿ ಮತ್ತು ಕುಡುಪು ಗ್ರಾಮಗಳಲ್ಲಿ ಪೌರಕಾರ್ಮಿಕರಿಗಾಗಿ ಮೀಸಲಿಟ್ಟ ಜಮೀನು ಒತ್ತುವರಿ ತೆರವಿಗೆ ಕೂಡಲೇ ಆದೇಶಿಸುವುದಲ್ಲದೇ, ಸಮಸ್ಯೆ ಇತ್ಯರ್ಥಕ್ಕೆ ವಾರ ದೊಳಗೆ ಸಭೆ ಕರೆಯುವುದಾಗಿ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ್‌ (ಬೈರತಿ) ತಿಳಿಸಿದರು.

Advertisement

ಮಂಗಳವಾರ ವಿಧಾನ ಪರಿಷತ್‌ನ ಪ್ರಶ್ನೋತ್ತರ ವೇಳೆಯಲ್ಲಿ ವಿಷಯ ಪ್ರಸ್ತಾವಿಸಿದ ಕಾಂಗ್ರೆಸ್‌ನ ಕೆ. ಹರೀಶ್‌ ಕುಮಾರ್‌, ಮಂಗಳೂರು ತಾಲೂಕಿನ ಪಚ್ಚನಾಡಿ ಪ್ರದೇಶದಲ್ಲಿ ಪೌರಕಾರ್ಮಿಕರಿಗೆ ಮೀಸಲಿಟ್ಟ ಜಮೀನು ಒತ್ತುವರಿಯಾಗಿದೆ. ಮತ್ತೂಂದೆಡೆ ಉಳಿದ ಖಾಲಿ ಜಮೀನನ್ನೂ ಹಂಚುತ್ತಿಲ್ಲ. ಸರಕಾರವು ಪರ್ಯಾಯ ಜಾಗ ಗುರುತಿಸಿ ಬದಲಿ ನಿವೇಶನ ಹಂಚಿಕೆಗಾದರೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

200 ನಿವೇಶನಕ್ಕೆ ವಸತಿ ವಿನ್ಯಾಸ ನಕ್ಷೆ
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, 1984-85ರ ಪ್ರಕರಣವಿದು. ಪಚ್ಚನಾಡಿ ಮತ್ತು ಕುಡುಪು ಸೇರಿ ಒಟ್ಟಾರೆ 6.32 ಎಕ್ರೆ ಜಮೀನಿನಲ್ಲಿ 200 ನಿವೇಶನಗಳನ್ನು ಗುರುತಿಸಿ, ವಸತಿ ವಿನ್ಯಾಸ ನಕ್ಷೆ ಸಿದ್ಧಪಡಿಸಲಾಗಿದೆ. ಈಗಾಗಲೇ ಹಂಚಿಕೆ ಮಾಡಿದ 68 ನಿವೇಶನಗಳಲ್ಲಿ 22 ನೋಂದಣಿಯಾಗಿವೆ. ಹಣ ಪಾವತಿಸದ ಕಾರಣ ಉಳಿದವು ನೋಂದಣಿಯಾಗಿಲ್ಲ ಎಂದರು.

ಉದ್ದೇಶಿತ ಜಮೀನು ಒತ್ತುವರಿ ಬಗ್ಗೆ ಈಗಾಗಲೆ ನೋಟಿಸ್‌ ನೀಡಲಾಗಿದೆ. ಒಂದು ದಿನದಲ್ಲಿ ಮತ್ತೂಮ್ಮೆ ತೆರವಿಗೆ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದು ಹೇಳಿದರು.

ಪರ್ಯಾಯ ಜಾಗ ಗುರುತಿಸಿ
ಖಾಲಿ ಉಳಿದಿರುವ ಜಮೀನು ಹಂಚಲು ಸಾಧ್ಯವಿಲ್ಲ. ಯಾಕೆಂದರೆ, ಉದ್ದೇಶಿತ ಜಮೀನು ಪಕ್ಕದಲ್ಲಿ ಲ್ಯಾಂಡ್‌ಫಿಲ್‌ ಸೈಟ್‌ ಇದೆ ಎಂದು ಸಚಿವರು ಹೇಳಿದರು. ಇದಕ್ಕೆ ಹರೀಶ್‌ ಕುಮಾರ್‌, ಪರ್ಯಾಯ ಜಾಗ ಗುರುತಿಸಿ ಬದಲಿ ನಿವೇಶನಕ್ಕೆ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಭಾಪತಿ ರಘುನಾಥ್‌ ಮಲ್ಕಾಪುರೆ, ಪ್ರಕರಣ ಇತ್ಯರ್ಥಕ್ಕೆ ವಾರದಲ್ಲಿ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆ ಕರೆಯುವಂತೆ ಸೂಚಿಸಿದರು. ಇದಕ್ಕೆ ಸಚಿವರು ಸಮ್ಮತಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next