Advertisement

ಗದ್ದಲದಲ್ಲೇ ಅಧಿವೇಶನ ಅಂತ್ಯ

02:11 AM Feb 24, 2018 | Team Udayavani |

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಹಾಗೂ 14ನೇ ವಿಧಾನಸಭೆ ಅಧಿವೇಶನದ ಕೊನೆಯ ದಿನ ಗದ್ದಲ ಕೋಲಾಹಲಕ್ಕೆ  ಸಾಕ್ಷಿಯಾಯಿತು. ಕೊನೆಯ ದಿನ ಪರಸ್ಪರ ಕೈ ಕುಲುಕಿ ಮತ್ತೆ ಸೇರೋಣ ಎಂದು ಹೊರಡಬೇಕಿದ್ದ ಆಡಳಿತ ಹಾಗೂ ವಿಪಕ್ಷ ಸದಸ್ಯರು ಆರೋಪ- ಪ್ರತ್ಯಾ ರೋಪ, ಸವಾಲು-ಪ್ರತಿ ಸವಾಲಿನಲ್ಲಿ ತೊಡಗಿ, ಕಾಗದ ಪತ್ರ ಹರಿದು ಸ್ಪೀಕರ್‌ ಪೀಠದತ್ತ ಎಸೆದ ಪ್ರಸಂಗವೂ ವಿಧಾನಸಭೆಯಲ್ಲಿ ನಡೆಯಿತು.

Advertisement

ಶುಕ್ರವಾರವೂ ಮತ್ತೆ ಪ್ರಧಾನಿ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿಯವರು ಭ್ರಷ್ಟಾಚಾರದ ಗಂಗೋತ್ರಿ, ಮೋದಿ ಈಸ್‌ ಎ ಪೆಸಲಿಟೇಟರ್‌ ಆಫ್ ಕರಪ್ಶನ್‌ (ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡುವವರು) ಕೇಂದ್ರದಲ್ಲಿ 90 ಪರ್ಸೆಂಟ್‌ ಕಮಿಷನ್‌ ಸರಕಾರ ಇದೆ ಎಂದು ಗುಡುಗಿದರು. ನೀರವ್‌ ಮೋದಿ, ಲಲಿತ್‌ ಮೋದಿ, ಕೊಠಾರಿ, ವಿಜಯ ಮಲ್ಯ ಸಾವಿರಾರು ಕೋಟಿ ರೂ. ಸಾಲ ಪಡೆದು ದೇಶ ಬಿಟ್ಟು ಪರಾರಿಯಾಗಲು ಮೋದಿಯೇ ಕುಮ್ಮಕ್ಕು ನೀಡಿದ್ದಾರೆ. ಲೋಕ ಪಾಲ ನೇಮಿಸದೆ  ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆಂದು ದೂರಿದರು.

ಗದ್ದಲ-ಕೋಲಾಹಲದ ನಡುವೆಯೇ ಸಿದ್ದರಾಮಯ್ಯ, ಬಜೆಟ್‌ ಮೇಲಿನ ಚರ್ಚೆಗೆ ಉತ್ತರ ನೀಡುವ “ಶಾಸ್ತ್ರ’ ಮುಗಿಸಿ, ರಾಜ್ಯ ಸರ ಕಾರ ಆರ್ಥಿಕ ಶಿಸ್ತು ಕಾಪಾಡಿಕೊಂಡಿದೆ. ಎಸ್‌ಜಿಡಿಪಿಗೆ ಹೋಲಿಸಿದರೆ ನಮ್ಮ ಸಾಲದ ಪ್ರಮಾಣ ಶೇ. 25ರೊಳಗಿದೆ. ಆದರೆ, ಕೇಂದ್ರ ಸರಕಾರವೂ ಶೇ. 50.1 ಸಾಲ ಮಾಡಿದೆ.  ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ನಾವು ಮಾಡಿರುವ ಸಾಲ ಕಡಿಮೆ. ಸರಕಾರಿ ನೌಕರರ ವೇತನ ಪರಿಷ್ಕರಣೆ ಸಂಬಂಧ 6ನೇ ವೇತನ ಆಯೋಗ ಶಿಫಾರಸು ಜಾರಿಯಿಂದ 10,500 ಕೋಟಿ ರೂ. ಹಾಗೂ ಸಾಲಮನ್ನಾದಿಂದ 8,500 ಕೋಟಿ ರೂ. ಹೊರೆಯಾದರೂ ಸಾಲದ ಮಿತಿ ದಾಟಿಲ್ಲ ಎಂದು ಸಮರ್ಥಿಸಿಕೊಂಡರು. ಸ್ಥಿರ ಸರಕಾರದ ಕುರಿತು ಪ್ರಸ್ತಾವಿಸಿದ ಅವರು ದೇವರಾಜ ಅರಸು ಅನಂತರ ಮುಖ್ಯಮಂತ್ರಿಯಾಗಿ 5 ವರ್ಷ ಪೂರೈಸಿದ್ದು ನಾನೇ ಎಂದರು. ವಿಪಕ್ಷ ಬಿಜೆಪಿ ಪ್ರತಿಭಟನೆ -ಧರಣಿ ನಡುವೆ ಲೇಖಾನುದಾನ, ಹಲವು ಮಸೂದೆಗಳಿಗೆ ಅನು ಮೋದನೆ ಪಡೆಯಲಾಯಿತು.

ಏನಾಯ್ತು?: ಮತ್ತೂಮ್ಮೆ ನಾವೇ ಅಧಿಕಾರಕ್ಕೆ ಬರ್ತೇವೆ. ಮೊನ್ನೆ ಮೋದಿ ಮೈಸೂರಿಗೆ ಬಂದಿದ್ದಾಗಲೂ ಅದನ್ನೇ ಹೇಳಿದ್ದೆ ಎಂದು ಸಿದ್ದರಾಮಯ್ಯ ಹೇಳಿದ್ದು, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲಮನ್ನಾ ವಿಚಾರ ಪ್ರಸ್ತಾವ ಸಂದರ್ಭ ಕಾಂಗ್ರೆಸ್‌ನ ಕೆ.ಎನ್‌. ರಾಜಣ್ಣ, ಕೇಂದ್ರ ಸರಕಾರದ ವಿರುದ್ಧ  ಆರೋಪ ಮಾಡಿದ್ದು ಧರಣಿ-ಪ್ರತಿಭಟನೆ, ಮಾತಿನ ಚಕಮಕಿಗೆ ಕಾರಣವಾಯಿತು.

ಮೋದಿ ಅವರ ವಿಚಾರ ಯಾಕೆ ಪ್ರಸ್ತಾವ?  ಕೇಂದ್ರ ಸರಕಾರದ ಬಗ್ಗೆ ಯಾಕೆ ಮಾತಾಡ್ತೀರಿ. ಏನ್‌ ಬೇಕಾದರೂ ಮಾತನಾಡಬಹುದಾ? ನಾವು ಕೇಳಿಸಿಕೊಂಡು ಸುಮ್ಮನೆ ಕುಳಿತಿರಬೇಕಾ ? ನಿಮ್ಮ ಸಂತೆ ಭಾಷಣ ಕೇಳಲು ನಾವು ಬಂದಿಲ್ಲ, ನಾವು ಎತ್ತಿದ ಪ್ರಶ್ನೆಗಳಿಗೆ ನೀವು ಉತ್ತರ ಕೊಡದೆ ಬೇರೆ ಏನೇನೋ ರಾಜಕೀಯ ಮಾತನಾಡಬೇಡಿ ಎಂದು ವಿಪಕ್ಷ ನಾಯಕ ಜಗದೀಶ ಶೆಟ್ಟರ್‌ ಆಕ್ಷೇಪಿಸಿದರು.

Advertisement

ಸಿದ್ದರಾಮಯ್ಯ ಮಾತು ಮುಂದುವರಿಸಿ, ನಾನು ಮೋದಿ ಬಗ್ಗೆ ಟೀಕೆ ಮಾಡಿಲ್ಲ. ಅಂದು ಮಾತನಾಡಿದ್ದು ಹೇಳಿದೆ ಅಷ್ಟೇ. ಅದಕ್ಕೆ  ಹೀಗೆ ಮಾತನಾಡಿದರೆ ಹೇಗೆ ಎಂದರು. ಅದರ ನಡುವೆ ಕೆ.ಎನ್‌. ರಾಜಣ್ಣ, ನಾನಿನ್ನೂ ಮಾತು ಮುಗಿಸಿಲ್ಲ. ಕೇಂದ್ರ ಸರಕಾರವು 71 ಸಾವಿರ ಕೋಟಿ ರೂ. ಪ್ರೋತ್ಸಾಹ ಧನವಾಗಿ ರಾಷ್ಟ್ರೀಕೃತ ಬ್ಯಾಂಕುಗಳಿಗೆ ನೀಡಿದೆ. ಆದರೆ, ಅವರು ಉದ್ಯಮಿಗಳ ಸಾಲ ಮನ್ನಾ ಮಾಡ್ತಾರೆ, ರೈತರ ಸಾಲ ಮನ್ನಾ ಮಾಡಲ್ಲ. ನೀರವ್‌ ಮೋದಿ, ಕೊಠಾರಿ ಅವರೆಲ್ಲಾ ಪರಾರಿಯಾದರು ಎಂದು ಹೇಳಿದರು. ಇದರಿಂದ ಮತ್ತಷ್ಟು ಕುಪಿತರಾದ ಶೆಟ್ಟರ್‌, ನೀವು ಹೋಗಿ ಸಂಸತ್ತಿನಲ್ಲಿ ಮಾತನಾಡಿ. ಇಲ್ಲೇಕೆ ಆ ವಿಚಾರ ಹೇಳುತ್ತೀರಿ. ನಿಮ್ಮ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತನಾಡಲು ಹೇಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗದ್ದಲ-ಕೋಲಾಹಲ ಹೆಚ್ಚಾಗಿ ಹತ್ತು ನಿಮಿಷ ಸದನ ಮುಂದೂಡಿ ಮತ್ತೆ ಸೇರಿದಾಗಲೂ ಬಿಜೆಪಿ ಸದಸ್ಯರು ಸಿದ್ದರಾಮಯ್ಯ ಭಾಷಣಕ್ಕೆ ಅವಕಾಶ ಕೊಡಲಿಲ್ಲ. ಗದ್ದಲದ ನಡುವೆಯೇ ತಾನು ಹೇಳಬೇಕಾದ್ದನ್ನು ಹೇಳಿ ಮುಗಿಸಿದ ಸಿದ್ದರಾಮಯ್ಯ, ಧನ ವಿನಿಯೋಗ ಮಸೂದೆ ಮಂಡಿಸಿದರು. ಪ್ರತಿಭಟನೆ ನಡುವೆಯೇ ಅಂಗೀಕಾರ ನೀಡಲಾಯಿತು. ಕಾಗೋಡು ತಿಮ್ಮಪ್ಪ ಪರವಾಗಿ ಜಯಚಂದ್ರ ಮೂರು ವಿಧೇಯಕ ಮಂಡಿಸಿ ಅನುಮೋದನೆ ಪಡೆದರು. ಬಸವರಾಜ ರಾಯರಡ್ಡಿ ವಿಶ್ವವಿದ್ಯಾಲಯ ಮಸೂದೆ ಮಂಡಿಸಿ ಅನುಮೋದನೆ ಪಡೆದರು. ಸದನ ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಯಿತು. ಮಧ್ಯಾಹ್ನದ ಅನಂತರ ಕಲಾಪ ಸುಗಮಗೊಂಡಿತು.

ಸಿಎಂ ಸಿಡಿಮಿಡಿ
ಬಿಜೆಪಿ ಸದಸ್ಯರು ಸಿದ್ದರಾಮಯ್ಯ ಅವರಿಗೆ ಉತ್ತರ ನೀಡಲು ಬಿಡದೆ ಭಜನೆ ರೂಪದಲ್ಲಿ ಸರಕಾರದ ವಿರುದ್ಧ ಟೀಕೆಗಳಲ್ಲಿ ಮುಳುಗಿ ದ್ದಾಗ ಒಂದು ಹಂತದಲ್ಲಿ ಸಿಡಿಮಿಡಿ ಗೊಂಡ ಸಿದ್ದರಾಮಯ್ಯ, ನೀವು ಪುಂಡರು, ಕೂಗುಮಾರಿಗಳು, ಟ್ರೈನಿಂಗ್‌ ಪಡೆದೇ ಬಂದಿದ್ದೀರಿ. ಇಂತಹ ನಡವಳಿಕೆ ನನ್ನ ರಾಜಕೀಯ ಜೀವನದಲ್ಲಿ ನೋಡಿಲ್ಲ. ಇವತ್ತು ಕೊನೆಯ ದಿನ ಆಗಿಲ್ಲದಿದ್ದರೆ ನಿಮಗೆ ತಕ್ಕ ಪಾಠ ಕಲಿಸುತ್ತಿದ್ದೆ. ಎಲ್ಲರನ್ನೂ ಎತ್ತಿ ಹೊರಗೆ ಹಾಕಿಸುತ್ತಿದ್ದೆ ಎಂದು ಹೇಳಿದರು.

ಗದ್ದಲದ ನಡುವೆಯೂ ಸ್ವಾರಸ್ಯ
ಗದ್ದಲ-ಕೋಲಾಹಲದ ನಡುವೆಯೂ ಸದನದಲ್ಲಿ ಕೆಲವೊಂದು ಸ್ವಾರಸ್ಯಕರ ಪ್ರಸಂಗ ನಡೆಯಿತು.  ಸಿದ್ದರಾಮಯ್ಯ ಅವರು ಮಾತನಾಡುತ್ತಾ ಮೊನ್ನೆ ಮೈಸೂರಿಗೆ ಮೋದಿ ಬಂದಾಗಲೂ ನಾವೇ ಅಧಿಕಾರಕ್ಕೆ ಬರೋದು ಅಂತ ಹೇಳಿದ್ದೇನೆ ಎಂದರು. ಆಗ, ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ, ನಮಗೂ ಆಮೇಲೆ ಮೋದಿಯವರು ಇವರು ಅಧಿಕಾರಕ್ಕೆ ಬರಲ್ಲ ಎಂದು ಹೇಳಿದ್ದಾರೆ ಎಂದರು. ಆಗ ಸಿದ್ದರಾಮಯ್ಯ, ಹೋ ಹೌದಾ, ಏನೋ ಅಪ್ಪಾ ನಾನು ಹೇಳಿದಾಗ ಏನೂ ಹೇಳಿಲ್ಲ, ನಿಮಗೆ ಯಾವಾಗ್‌ ಹೇಳಿದ್ರೋ ಗೊತ್ತಿಲ್ಲ. ನಿಮ್ಮ ಗ್ರಹಿಕೆ ನಿಮ್ಮದು ಅಂದುಕೊಳ್ಳಿ, ನನ್ನದೇನೂ ತಕರಾರಿಲ್ಲ ಎಂದು ಚಟಾಕಿ ಹಾರಿಸಿದರು. ಮತ್ತೂಂದು ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಧರಣಿ ನಡೆಸುತ್ತಿದ್ದಾಗ ಉಮೇಶ್‌ ಕತ್ತಿ ಮೌನವಾಗಿ ನಿಂತಿದ್ದರು. ಏ ಕತ್ತಿ, ಇವರು ಇಷ್ಟೆಲ್ಲಾ ನನ್ನ ಬೈಯ್ಯುತ್ತಿದ್ದರೆ ಅಲ್ಲೇ ಇದ್ದೀರಾ ಬಾ ಇಲ್ಲಿ ಎಂದು ಮತ್ತೆ ಕರೆದಾಗ ಧರಣಿ ನಿರತ ಬಿಜೆಪಿಯವರಿಗೂ ನಗು ತಡೆಯಲಾಗಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next