ಸುವರ್ಣ ವಿಧಾನಸೌಧ: ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವ ಕುರಿತು ಕರಡು ಪ್ರತಿ ಸಿದ್ದಪಡಿಸುವ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಕಾನೂನು ಮತ್ತು ಗೃಹ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಇದೇ ಅಧಿವೇಶನದಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆಗೆ ಸಿದ್ಧತೆ ನಡೆಸಿರುವ ಸರ್ಕಾರ ಕಾನೂನು ಸಚಿವ ಮತ್ತು ಗೃಹ ಸಚಿವರ ಸಭೆಯಲ್ಲಿ ಮತಾಂತರ ನಿಷೇಧ ತಿದ್ದುಪಡಿ ವಿಧೇಯಕವನ್ನು ಕ್ಯಾಬಿನೆಟ್ ಗೆ ತಂದು ವಿಧಾನ ಸಭೆ ಮತ್ತು ಪರಿಷತ್ ಮಂಡಿಸಲು ತೀರ್ಮಾನ ಮಾಡಿದ್ದಾರೆ.
ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿ, ನಾವು ಎಲ್ಲವನ್ನೂ ಮಾಧ್ಯಮಗಳ ಮುಂದೆ ಹೇಳಲು ಆಗುವುದಿಲ್ಲ. ಕ್ಯಾಬಿನೆಟ್‌ಗೆ ತೆಗೆದುಕೊಂಡು ಹೋಗಿ ಅಲ್ಲಿ ಚರ್ಚೆ ಮಾಡಬೇಕು. ನೇರವಾಗಿ ಮಾಧ್ಯಮಗಳ ಮುಂದೆ ಹೇಳಿ ಬಳಿಕ ಕ್ಯಾಬಿನೆಟ್‌ಗೆ ತೆಗೆದುಕೊಂಡು ಹೋದಾಗ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ಮಾಹಿತಿ ಪಡೆದು ಪ್ರತಿಕ್ರಿಯೆ :ಆರಗ
ಸುವರ್ಣ ವಿಧಾನಸೌಧ: ಎಂಇಎಸ್ ನಾಯಕರಿಗೆ ಮಸಿ ಬಳಿದ ಕನ್ನಡಿಗರ ಮೇಲೆ ಕೊಲೆ ಪ್ರಕರಣ ದಾಖಲಿಸಿರುವ ಬಗ್ಗೆ ಪೊಲಿಸರಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಆವರು, ಕನ್ನಡ ಸಂಘಟನೆ ಕಾರ್ಯಕರ್ತರ ಮೇಲೆ 307 ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಬಗ್ಗೆ ಪೊಲೀಸರಿಂದ ವಿವರ ಪಡೆದುಕೊಂಡು ತೀರ್ಮಾನ ತೆಗೆದುಕೊಳ್ಳುತ್ತೇನೆ. ಬೆಳಗಾವಿಯಲ್ಲಿ ಕನ್ನಡಿಗರು ಮತ್ತು ಮರಾಠಿಗರು ಸೌಹಾರ್ದಯುತವಾಗಿ ಜೀವನ ನಡೆಸುತ್ತಿದ್ದಾರೆ. ಪೊಲೀಸ್, ಸರ್ಕಾರ ಇದೆ ಯಾರೂ ಕಾನೂನು ಕೈಗೆತ್ತಿಕೊಳ್ಳುವುದು ಬೇಡ ಎಂದು ಹೇಳಿದರು.
ಇದನ್ನೂ ಓದಿ:ಸಿಬಿಐ ಸೋಗಿನಲ್ಲಿ ಬಂದು ಮನೆಯಲ್ಲಿದ್ದ ಚಿನ್ನ, ನಗದು ಕದ್ದರು!
ಇನ್ನು ಪರಿಷತ್ ರದ್ದು ಮಾಡಬೇಕೆಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಆವರು, ಅದು ಅವರ ವೈಯಕ್ತಿಕ ಹೇಳಿಕೆ. ಸರ್ಕಾರಕ್ಕೂ ಅವರ ಹೇಳಿಕೆಗೂ ಸಂಬಂಧ ಇಲ್ಲ ಎಂದು ಹೇಳಿದರು.