ಬೆಂಗಳೂರು: ಶಿರಾಡಿ ಘಾಡಿಯಲ್ಲಿ ಮಳೆಗಾಲದಲ್ಲಿ ಆಗುತ್ತಿರುವ ಭೂ ಕುಸಿತದಿಂದ ನಿರಂತರ ಸಂಚಾರ ಸಮಸ್ಯೆಯಾಗುತ್ತಿರುವುದು ಸರಕಾರದ ಗಮನಕ್ಕೆ ಬಂದಿದ್ದು, 4.30 ಕೋ.ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಕೇಂದ್ರ ಹೆದ್ದಾರಿ ಸಚಿವರ ಜತೆಗೂ ಮಾತುಕತೆ ನಡೆಸಿದ್ದೇವೆ.
ಗುಣಮಟ್ಟದ ಕಾಮಗಾರಿಯೊಂದಿಗೆ ಕಾರ್ಯವನ್ನು ಶೀಘ್ರ ಮುಗಿಸುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಹೇಳಿದರು.
ಗಮನ ಸೆಳೆಯುವ ಸೂಚನೆಯಡಿ ಸದಸ್ಯ ಸಂಜೀವ ಮಠಂದೂರು ಅವರು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರ ಸಕಲೇಶಪುರ ತಾಲೂಕಿನ ಆನೆಮಹಲು-ಮಾರನಹಳ್ಳಿ ಮಧ್ಯೆ ರಸ್ತೆ ದುರಸ್ತಿ ಕಾಮಗಾರಿ ನಡೆಯುತ್ತಿದೆ.
ಸುಮಾರು 10 ಕಿ.ಮೀ. ರಸ್ತೆ ಸಂಪೂರ್ಣ ಹದಗೆಟ್ಟಿದೆ. ಪ್ರತಿ ವರ್ಷವೂ ಜನರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಅಲ್ಲದೆ, ಪೆಟ್ರೋಲಿಯಂ ಉತ್ಪನ್ನಗಳನ್ನು ಇದೇ ಮಾರ್ಗದಲ್ಲಿ ಸಾಗಿಸಬೇಕಾಗಿದೆ. 10 ಕಿ.ಮೀ. ಸಂಚಾರಕ್ಕೆ ಒಂದು ಗಂಟೆ ಬೇಕಾಗುತ್ತದೆ. ಅನೇಕ ವರ್ಷದಿಂದ ಈ ಸಮಸ್ಯೆಯಿದೆ ಮತ್ತು ಈ ಬಗ್ಗೆ ಅನೇಕ ಬಾರಿ ಸರಕಾರದ ಗಮನಕ್ಕೂ ತಂದಿದ್ದೇವೆ. ರಸ್ತೆ ಹಾಳಾಗಿರುವುದರಿಂದ ಕರಾವಳಿಯ ಆರ್ಥಿಕತೆ ಮೇಲೆ ಹೊಡೆತ ಬೀಳುತ್ತಿದೆ. ಇದಕ್ಕೆ ಕಾಲಮಿತಿಯಲ್ಲಿ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಸಚಿವರು ಪ್ರತಿಕ್ರಿಯಿಸಿ, ಶಿರಾಡಿ ಘಾಟಿಯಲ್ಲಿ ಭೂ ಕುಸಿತವಾಗುತ್ತಿರುತ್ತದೆ. ತೀವ್ರ ಮಳೆಯಿಂದ ರಸ್ತೆ ಕೆಲಸ ಮಾಡುವುದು ಅಷ್ಟೇ ಕಷ್ಟವಿದೆ. ಒನ್ ವೇ ಟ್ರಾಫಿಕ್ ವ್ಯವಸ್ಥೆ ಮಾಡಿ, ಕಾಮಗಾರಿ ನಡೆಸುತ್ತಿದ್ದೇವೆ. ಬೆಂಗಳೂರು ಸಹಿತ ವಿವಿಧ ಕಡೆಗೆ ಪೆಟ್ರೋಲಿಯಂ ಉತ್ಪನ್ನಗಳು ಅದೇ ಮಾರ್ಗದಲ್ಲಿ ಬರಬೇಕಿರುವುದರಿಂದ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಿ ಕಾಮಗಾರಿ ನಡೆಸುತ್ತಿದ್ದೇವೆ. ಇನ್ನಷ್ಟು ವೇಗವಾಗಿ ಕಾರ್ಯ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು.
ಹಳೆ ಆದೇಶ ವಾಪಸ್: ಕಾರಜೋಳ
ಬೆಂಗಳೂರು: ಆಟೋ ಮೀಟರ್ ಪ್ರಮಾಣ ಪತ್ರಕ್ಕೆ ಸಂಬಂಧಿಸಿ 2020-21ರಲ್ಲಿ ಹೊರಡಿಸಿರುವ ಆದೇಶವನ್ನು ವಾಪಸ್ ಪಡೆದಿದ್ದೇವೆ. ಹೀಗಾಗಿ ಆಟೋ ಚಾಲಕರಿಗೆ ಈ ಸಮಸ್ಯೆಯಾಗುತ್ತಿಲ್ಲ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.
ಸದಸ್ಯ ವೇದವ್ಯಾಸ ಕಾಮತ್ ಅವರು, ಮಂಗಳೂರು ನಗರ, ಸುರತ್ಕಲ್, ಗುರುಪುರ ಹೋಬಳಿ ವ್ಯಾಪ್ತಿಯ ಆಟೋ ರಿಕ್ಷಾ ಮೀಟರ್‌ಗಳ ಪ್ರಮಾಣ ಪತ್ರಕ್ಕೆ ಮೂಡಬಿದಿರೆ ತನಕ ಹೋಗಬೇಕಾಗಿದೆ. ಸುಮಾರು 40 ಕಿ.ಮೀ. ಕ್ರಮಿಸುವುದರಿಂದ ಆಟೋ ಚಾಲಕರಿಗೆ ಆರ್ಥಿಕ ಹೊರೆಯಾಗುತ್ತಿದೆ. ಈ ಹಿಂದಿನಂತೆ ಮಂಗಳೂರಿನಲ್ಲಿರುವ ಕಾನೂನು ಮಾಪನಶಾಸ್ತ್ರ ನಿರೀಕ್ಷಕರ ಕಚೇರಿಯಲ್ಲೇ ಮುದ್ರಿಸಿ ಆಟೋ ರಿಕ್ಷಾ ಚಾಲಕರಿಗೆ ನೀಡುವ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂಬಂಧ ಈಗಾಗಲೇ ಕ್ರಮ ತೆಗೆದುಕೊಂಡು, ಹಿಂದಿನ ಆದೇಶ ವಾಪಸ್ ಪಡೆದಿದ್ದೇವೆ ಎಂದು ಸಚಿವರು ತಿಳಿಸಿದರು.