ವಿಧಾನಸಭೆ: “ನಿಮ್ಮ ಬದ್ಧತೆಯನ್ನು ಮಾತಿನಲ್ಲಿ ಅಲ್ಲ, ಆಡಳಿತದಲ್ಲಿ ಮಾಡಿ ತೋರಿಸಿ’
– ಹೀಗೆಂದು ತೋಟಗಾರಿಕೆ ಸಚಿವ ಮುನಿರತ್ನ ಅವರನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಚಾಟಿ ಬೀಸಿದ ಪ್ರಸಂಗ ಬುಧವಾರ ನಡೆಯಿತು.
ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ನಾಪುರ, ತೋಟಗಾರಿಕೆ ಇಲಾಖೆಯ 200 ತೋಟಗಾರರ ಹುದ್ದೆಗಳ ನೇಮಕಾತಿ ವಿಳಂಬದ ಬಗ್ಗೆ ಪ್ರಶ್ನಿಸಿದರು.
ಅದಕ್ಕೆ ಉತ್ತರಿಸಿದ ಸಚಿವರು, ತೋಟಗಾರರ 200 ಹುದ್ದೆಗಳ ಭರ್ತಿಗೆ 2022ರ ಆ.5ರಂದು ತಾತ್ಕಾಲಿಕ ಪಟ್ಟಿ ಪ್ರಕಟಿಸಿ ಆಕ್ಷೇಪಣೆಗೆ ಅವಕಾಶ ನೀಡಲಾಗಿತ್ತು. 25 ಆಕ್ಷೇಪಣೆಗಳು ಬಂದಿವೆ. ಅವುಗಳನ್ನು ಪರಿಶೀಲಿಸಲಾಗುತ್ತಿದ್ದು, ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದರು.
ಅದಕ್ಕೆ ಅಮರೇಗೌಡ ಬಯ್ನಾಪುರ, ಅರ್ಜಿ ಹಾಕಿದ ಅಭ್ಯರ್ಥಿಗಳ ಮೂಲ ದಾಖಲೆಗಳು ಇಲಾಖೆ ಬಳಿ ಇವೆ. ನೇಮಕಾತಿ ವಿಳಂಬದಿಂದಾಗಿ ಅಭ್ಯರ್ಥಿಗಳ ಮೂಲ ದಾಖಲೆಗಳು ಅವರ ಕೈಗೆ ಸಿಗುತ್ತಿಲ್ಲ. ಅದರಿಂದಾಗಿ ಬೇರೆ ಕಡೆ ಅರ್ಜಿ ಸಲ್ಲಿಸಲೂ ಅವರಿಗೆ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ನೂರಾರು ಅಭ್ಯರ್ಥಿಗಳಿಗೆ ತೊಂದರೆ ಆಗುತ್ತಿದೆ ಎಂದು ಸದನದ ಗಮನ ಸೆಳೆದರು. ಮಧ್ಯಪ್ರವೇಶಿಸಿದ ಸ್ಪೀಕರ್, ಈ ವಿಚಾರವನ್ನು ನಿಮ್ಮ ಇಲಾಖೆಯ ಅಧಿಕಾರಿಗಳ ಬಳಿ ಚರ್ಚಿಸಿದ್ದೇನೆ. ಕೇಳಿ-ಕೇಳಿ ಸಾಕಾಗಿದೆ.
ಅಂಕಪಟ್ಟಿ ಮತ್ತಿತರ ಮೂಲ ದಾಖಲೆಗಳು ಅಭ್ಯರ್ಥಿಗಳ ಕೈಗೆ ಸಿಗುತ್ತಿಲ್ಲ. ಅತ್ತ ನೇಮಕಾತಿ ಪೂರ್ಣ ಮಾಡುತ್ತಿಲ್ಲ, ಇತ್ತ ಮೂಲ ದಾಖಲೆಗಳನ್ನು ಕೊಡುತ್ತಿಲ್ಲ. ಹೀಗಾದರೆ ಹೇಗೆ? ಇದಕ್ಕೊಂದು ಕೊನೆ ಬೇಕಲ್ಲವೇ ಎಂದು ಸಚಿವರನ್ನು ಕೇಳಿದರು. ಒಂದು ತಿಂಗಳಲ್ಲಿ ನೇಮಕಾತಿ ಪೂರ್ಣಗೊಳಿಸಲಾಗುವುದು ಎಂದು ಸಚಿವ ಮುನಿರತ್ನ ಭರವಸೆ ನೀಡಿದರು. ಅದಕ್ಕೆ, “ನಿಮ್ಮ ಬದ್ಧತೆಯನ್ನು ಮಾತಿನಲ್ಲಿ ಅಲ್ಲ, ಆಡಳಿತದಲ್ಲಿ ಮಾಡಿ ತೋರಿಸಿ, ಇಚ್ಛಾಶಕ್ತಿ ಪ್ರದರ್ಶಿಸಿ’ ಎಂದು ಸ್ಪೀಕರ್ ಕಾಗೇರಿ ಹೇಳಿದರು.