Advertisement

ವಿಧಾನಸಭೆ ಕಾರ್ಯದರ್ಶಿ ಎಸ್‌. ಮೂರ್ತಿ ಅಮಾನತು

12:30 AM Dec 30, 2018 | Team Udayavani |

ಬೆಂಗಳೂರು:ಬೆಳಗಾವಿ ಸುವರ್ಣಸೌಧದಲ್ಲಿ 2016 ಹಾಗೂ 2017 ರಲ್ಲಿ ನಡೆದ ವಿಧಾನಮಂಡಲ ಅಧಿವೇಶನಕ್ಕೆ ಸಂಬಂಧಿಸಿದಂತೆ ಕೈಗೊಳ್ಳಲಾದ ಕಾಮಗಾರಿಗಳಲ್ಲಿ ಹಾಗೂ ಇತರೆ ಖರ್ಚು ವೆಚ್ಚಗಳಲ್ಲಿ ನಡೆಸಲಾಗಿರುವ ಅವ್ಯವಹಾರಗಳ ಆರೋಪಗಳಡಿ ವಿಧಾನಸಭೆ ಕಾರ್ಯದರ್ಶಿ ಎಸ್‌.ಮೂರ್ತಿ ಅವರನ್ನು ಸಚಿವಾಲಯ ಸೇವೆಯಿಂದ ಅಮಾನತುಗೊಳಿಸಲಾಗಿದೆ.

Advertisement

ಈ ಕುರಿತು ಶನಿವಾರ ಆದೇಶ ಹೊರಡಿಸಲಾಗಿದ್ದು, ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿ  ಕಾರ್ಯನಿರ್ವಹಿಸುತ್ತಿದ್ದ ಎಂ.ಕೆ.ವಿಶಾಲಾಕ್ಷಿ ಅವರಿಗೆ ಕಾರ್ಯದರ್ಶಿ ಹುದ್ದೆಯ ಕಾರ್ಯಭಾರ ವಹಿಸಲಾಗಿದೆ.

2016 ಹಾಗೂ 2017 ನೇ ಸಾಲಿನಲ್ಲಿ ಬೆಳಗಾವಿ ಸುವರ್ಣಸೌಧದಲ್ಲಿ ನಡೆದ ಅಧಿವೇಶನ ಸಂಬಂಧ ಖರ್ಚು ವೆಚ್ಚಗಳಲ್ಲಿ ಅವ್ಯವಹಾರವಾಗಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಸಭಾಧ್ಯಕ್ಷರು ಆರ್ಥಿಕ ಇಲಾಖೆ ಅಧಿಕಾರಿಗಳಿಂದ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚಿಸಿದ್ದರು.

ಆರ್ಥಿಕ ಇಲಾಖೆಯು ರಾಜ್ಯ  ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಅಪರ ನಿರ್ದೇಶಕರ ನೇತೃತ್ವದಲ್ಲಿ 5 ಜನರ ತಂಡ ರಚಿಸಿ ತನಿಖೆ ಕೈಗೊಂಡಿತ್ತು. ತಂಡವು ವರದಿ ಸಹ ಸಲ್ಲಿಸಿತ್ತು.

ವರದಿಯಲ್ಲಿ ಸ್ವತ್ಛತಾ ವಸ್ತುಗಳ ಖರೀದಿಗೆ 13, 28,078 ರೂ. ಪಾವತಿಸಿರುವುದಾಗಿ ತಿಳಿಸಲಾಗಿದೆ. ಆದರೆ, ದರಪಟ್ಟಿ ಆಹ್ವಾನಿಸದೆ ದುಬಾರಿ ದರ ನಮೂದಿಸಿ ಸ್ವತ್ಛತಾ ಸಾಮಗ್ರಿ ಖರೀದಿಸಲಾಗಿದೆ. ಗುತ್ತಿಗೆದಾರರು ಲೆಟರ್‌ಹೆಡ್‌ ಬಿಲ್‌ ಪಾವತಿಗಾಗಿ ಸಲ್ಲಿಸಿದ್ದು ಅದರಲ್ಲಿ ಜಿಎಸ್‌ಟಿ 202588 ಕ್ಲೇಮು ಮಾಡಿದ್ದು, ಜಿಎಸ್‌ಟಿ ನೋಂದಣಿ ಪತ್ರ ಪಡೆಯದೆ ಸರ್ಕಾರಕೆಕ ತೆರಿಗೆ ವಂಚನೆ ಮಾಡಲಾಗಿದೆ. ಖರೀದಿಸಿದ ಸಾಮಗ್ರಿಗಳ ದಾಸ್ತಾನು ಹಾಗೂ ವಿತರಣೆ ವಹಿ ನಿರ್ವಹಿಸಿರುವುದಿಲ್ಲ. ಈ ರೀತಿ ಎರಡೂ ವರ್ಷದ ಅಧಿವೇಶನದಲ್ಲಿ ಅನೇಕ ಪ್ರಕರಣಗಳಲ್ಲಿ ಕೊಟೇಷನ್‌ಗಳ ಮುಖಾಂತರ ಪಡೆದ ದರಗಳನ್ನು ಸರ್ಕಾರದ ಏಜೆನ್ಸಿಗಳ ಎಸ್‌.ಆರ್‌. ಮಾರಾಟ ಪಟ್ಟಿ ಹಾಗೂ ಮಾರುಕಟ್ಟೆ ದರಗಳಿಗೆ ಹೋಲಿಸದೆ ಮನಸೋ ಇಚ್ಛೆ ದರಗಳನ್ನು ನಿಗದಿಪಡಿಸಿರುವ ಗುತ್ತಿಗೆದಾರರಿಂದ ನಿಯಮಬಾಹಿರ ಬಿಲ್ಲುಗಳನ್ನು ಸ್ವೀಕರಿಸಿ ಅನುದಾನ ಸಂದಾಯ ಮಾಡಿರುವುದು ಕಾನೂನು ಬಾಹಿರವಾಗಿರುತ್ತದೆ. 

Advertisement

ವಿಧಾನಸಭೆ ಕಾರ್ಯದರ್ಶಿಯಾಗಿದ್ದ ಮೂರ್ತಿ ಯವರು ಸಭಾಧ್ಯಕ್ಷರಿಗೆ ನಿಯಮಾವಳಿಗಳ ಪ್ರಕಾರ ಪ್ರಸ್ತಾವನೆ ಮಂಡಿಸದೆ ಕೆಲವು ಸಂದರ್ಭಗಳಲ್ಲಿ ವಾಸ್ತವಾಂಶ ಹಾಗೂ ನಿಯಮ ಕಡತಗಳಲ್ಲಿ ಮಂಡಿಸದೆ ಸಭಾಧ್ಯಕ್ಷರನ್ನು ಕತ್ತಲಲ್ಲಿಟ್ಟು ಅನುಮೋದನೆ ಪಡೆದಿರುತ್ತಾರೆ ಎಂದು ತಿಳಿಸಲಾಗಿದೆ. ಈ ಎಲ್ಲ ಅಂಶ ಪರಿಗಣಿಸಿ ಅಮಾನತು ಮಾಡಲಾಗಿದೆ.

ಈ ಮಧ್ಯೆ, ಅಮಾನತು ಕುರಿತು ಪ್ರತಿಕ್ರಿಯಿಸಿರುವ ಎಸ್‌.ಮೂರ್ತಿ, ವಿನಾಕಾರಣ ನನ್ನ ಮೇಲೆ ಆರೋಪ ಹೊರಿಸಲಾಗಿದೆ. ನಾನು ಯಾವುದೇ ಅವ್ಯವಹಾರ ಮಾಡಿಲ್ಲ. ನನ್ನ ಸೇವಾವಧಿ ಕುಂಠಿತಗೊಳಿಸಲು ನನ್ನನ್ನು ತುಳಿಯಲಾಗುತ್ತಿದೆ.  ಈ ಕ್ರಮ ದ ಬಗ್ಗೆ ನಾನು ನ್ಯಾಯಾಲಯದ ಮೊರೆ ಹೋಗುತ್ತೇನೆ. ನನ್ನ ಸೇವಾ ಭದ್ರತೆ ಕಾರಣಕ್ಕಾಗಿ ನ್ಯಾಯ ಕೇಳುತ್ತೇನೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next