ಬೆಂಗಳೂರು: “ಶಾಸನ ಸಭೆಗಳಲ್ಲಿ ಸಹ ಮಹಿಳಾ ಮೀಸಲಾತಿ ಬೇಕು ಅನ್ನುವ ವಾದ ನನ್ನದು. ಇದಕ್ಕಾಗಿ ವಿಧಾನಸಭೆ ಮತ್ತು ಲೋಕಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಮಸೂದೆಗೆ ಸಂಸತ್ತಿನ ಅಂಗೀಕಾರ ಸಿಗಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಮಂಗಳವಾರ ಆಯೋಜಿಸಿದ್ದ ಶಿವಶರಣೆ ಅಕ್ಕಮಹಾದೇವಿ ಜಯಂತಿ ಹಾಗೂ “ಅಕ್ಕಮಹಾದೇವಿ’ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
“ರಾಜ್ಯದಲ್ಲಿ ಮಹಿಳೆಯರಿಗಾಗಿ ಸ್ಥಳೀಯ ಸಂಸ್ಥೆಗಳಲ್ಲಿ ಶೇ.33ರಷ್ಟು ಮೀಸಲಾತಿ ನೀಡಲಾಗುತ್ತಿತ್ತು, ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪಂಚಾಯತ್‌ಗಳಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಕಲ್ಪಿಸಿದ್ದೇವೆ.
ಪ್ರಸ್ತುತ ಉತ್ತರ ಪ್ರದೇಶದ ಮುಖ್ಯಮಂತ್ರಿ ಆಗಿರುವ ಯೋಗಿ ಆದಿತ್ಯನಾಥ ಅವರೇ ಸಂಸತ್ತಿನಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದರು. ನಾನು ಪುರುಷರು ಮತ್ತು ಮಹಿಳೆಯರಿಗೆ ಸಮಾನ ಅವಕಾಶ ಸಿಗಬೇಕು ಎಂದು ಪ್ರತಿಪಾತಿಸುವುದರಲ್ಲಿ ಮೊದಲಿಗ’ ಎಂದು ಹೇಳಿದರು. “ಅಕ್ಕಮಹಾದೇವಿ’ ಪ್ರಶಸ್ತಿ ಪುರಸ್ಕೃತ ಹಂಪಿ ವಿಶ್ವವಿದ್ಯಾಲಯ ಉಪಕುಲಪತಿ ಡಾ.ಮಲ್ಲಿಕಾಘಂಟಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಸಚಿವ ಎಚ್.ಆಂಜನೇಯ, ಉಮಾದೇವಿ ಚಂದ್ರಶೇಖರ್, ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್, ಡಾ.ಬಸವರಾಜ ಸಾದರ, ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಇಲಾಖೆಯ ನಿರ್ದೇಶಕ ಕೆ.ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು.