Advertisement

ಘಟಾನುಘಟಿಗಳಿಂದ ನಾಮಪತ್ರ

06:00 AM Apr 20, 2018 | |

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಗುರುವಾರ ಘಟಾನುಘಟಿ ನಾಯಕರು ನಾಮಪತ್ರ ಸಲ್ಲಿಸಿದ್ದು, ಕದನ ಕಣ ಇನ್ನಷ್ಟು ರಂಗೇರಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ, ಸಚಿವ ಡಿ.ಕೆ.ಶಿವಕುಮಾರ್‌, ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌, ಜೆಡಿಎಸ್‌ನ ಮಧು ಬಂಗಾರಪ್ಪ ಸೇರಿ 135 ಮಂದಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.

Advertisement

ಪ್ರಮುಖ ನಾಯಕರು ನಾಮಪತ್ರ ಸಲ್ಲಿಕೆ ವೇಳೆಯೂ ಸಾವಿರಾರು ಬೆಂಬಲಿಗರೊಂದಿಗೆ ಚುನಾವಣಾಧಿಕಾರಿ ಕಚೇರಿ ಬಳಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಗುರುವಾರ ಒಂದೇ ದಿನ 120 ನಾಮಪತ್ರಗಳು ಸಲ್ಲಿಕೆಯಾಗಿವೆ. ಮೊದಲೆರಡು ದಿನ 35 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಇದರೊಂದಿಗೆ ಒಟ್ಟು ನಾಮಪತ್ರಗಳ ಸಂಖ್ಯೆ 155ಕ್ಕೇರಿದೆ.


ಮಂಗಳವಾರದಿಂದ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಿದ್ದು, ಮೊದಲ ಎರಡು ದಿನ ಹೆಚ್ಚಿನ ಅಭ್ಯರ್ಥಿಗಳು ನಾಪಮತ್ರ ಸಲ್ಲಿಸಿರಲಿಲ್ಲ. ಆದರೆ, ಮೂರನೇ ದಿನ ಸಾಕಷ್ಟು ಪ್ರಮುಖರು ನಾಮಪತ್ರ ಸಲ್ಲಿಸಿದ್ದು, ಇದರೊಂದಿಗೆ ಚುನಾವಣಾ ಕಣ ಕಾವೇರುವ ಹಂತ ತಲುಪಿದೆ.

ಶಿಕಾರಿಪುರ ಕ್ಷೇತ್ರದಿಂದ ಕಣಕ್ಕಿಳಿಯುತ್ತಿರುವ ಬಿ.ಎಸ್‌.ಯಡಿಯೂರಪ್ಪ ಅವರು ಹುಚ್ಚುರಾಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಛತ್ತೀಸ್‌ಗಡ ಮುಖ್ಯಮಂತ್ರಿ ರಮಣ್‌ ಸಿಂಗ್‌, ಕೇಂದ್ರ ಸಚಿವರಾದ ಅನಂತಕುಮಾರ್‌, ಡಿ.ವಿ.ಸದಾನಂದಗೌಡ, ಸಂಸದರಾದ ಶ್ರೀರಾಮುಲು, ಪಿ.ಸಿ.ಮೋಹನ್‌ ಮತ್ತಿತರರು ಇದ್ದರು. ಶಿವಮೊಗ್ಗ ನಗರದಲ್ಲಿ ಕೆ.ಎಸ್‌.ಈಶ್ವರಪ್ಪ ಅವರು ನಾಮಪತ್ರ ಸಲ್ಲಿಸಿದ್ದು, ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌ ಮತ್ತಿತರರು ಸಾಥ್‌ ನೀಡಿದರು.

ಸಚಿವ ಡಿ.ಕೆ.ಶಿವಕುಮಾರ್‌ ಸಂಪ್ರದಾಯದಂತೆ ಕಬ್ಟಾಳಮ್ಮದೇವಿಯ ಆಶೀರ್ವಾದ ಪಡೆದು ಮರಳೇಗವಿಮಠ, ದೇಗುಲಮಠ ಹಾಗೂ ಕುಲದೇವತೆ ಕೆಂಕೇರಮ್ಮ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದರು. ಸಂಸದ ಹಾಗೂ ಸಹೋದರ ಡಿ.ಕೆ.ಸುರೇಶ್‌, ಪತ್ನಿ ಉಷಾ ಜತೆಗಿದ್ದರು ಪದ್ಮನಾಭನಗರದಲ್ಲಿ ಆರ್‌.ಅಶೋಕ್‌ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದ್ದು, ಚಿತ್ರನಟ ಜಗ್ಗೇಶ್‌ ಜತೆಗಿದ್ದರು.

ಉಳಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಸಚಿವ ರಮಾನಾಥ ರೈ, ಕೋಲಾರ ಜಿಲ್ಲೆ ಶ್ರೀನಿವಾಸಪುರದಲ್ಲಿ ಸಚಿವ ಕೆ.ಆರ್‌.ರಮೇಶ್‌ಕುಮಾರ್‌ ಅರಕಲಗೂಡಿನಲ್ಲಿ ಸಚಿವ ಎ.ಮಂಜು, ತೀರ್ಥಹಳ್ಳಿಯಲ್ಲಿ ಮಾಜಿ ಸಚಿವ ಕಾಂಗ್ರೆಸ್‌ನ ಕಿಮ್ಮನೆ ರತ್ನಾಕರ, ಮೂಡಬಿದರೆಯಿಂದ ಮಾಜಿ ಸಚಿವ ಕಾಂಗ್ರೆಸ್‌ನ ಅಭಯಚಂದ್ರ ಜೈನ್‌, ಬಾಗಲಕೋಟೆಯಿಂದ ಮಾಜಿ ಸಚಿವ ಕಾಂಗ್ರೆಸ್‌ನ ಎಚ್‌.ವೈ.ಮೇಟಿ, ಗುರುಮಿಟ್ಕಲ್‌ನಿಂದ ಮಾಜಿ ಸಚಿವ ಕಾಂಗ್ರೆಸ್‌ನ ಬಾಬೂರಾವ್‌ ಚಿಂಚನಸೂರ್‌ ಕೂಡ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.

Advertisement

ಜೆಡಿಎಸ್‌ ಶಾಸಕ ಮಧು ಬಂಗಾರಪ್ಪ ಸೊರಬ ಕ್ಷೇತ್ರದಿಂದ, ಬಿಜೆಪಿಯ ಬಿ.ಎನ್‌.ವಿಜಯಕುಮಾರ್‌ ಜಯನಗರ ಕ್ಷೇತ್ರದಿಂದ, ಕಾಂಗ್ರೆಸ್‌ನ ವಾಸು ಚಾಮರಾಜ ಕ್ಷೇತ್ರದಿಂದ, ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ವಿಧಾನ ಪರಿಷತ್‌ ಸದಸ್ಯ ಸೋಮಣ್ಣ ಬೇವಿನಮರದ ಶಿಗ್ಗಾವಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದು, ಇವರಲ್ಲದೆ ಹಲವು ಮಾಜಿ ಶಾಸಕರು, ವಿವಿಧ ಪಕ್ಷಗಳ ಅಭ್ಯರ್ಥಿಗಳು ಕೂಡ ನಾಮಪತ್ರ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next