Advertisement
ರಾಜ್ಯದಲ್ಲಿ ಗುಜರಾತ್ ಮಾದರಿಯಲ್ಲಿ ಹಿರಿಯರಿಗೆ ಟಿಕೆಟ್ ತಪ್ಪಿಸುವ ಸಾಧ್ಯತೆ ಇಲ್ಲ ಎಂದು ಬಿಜೆಪಿಯ ಒಂದು ವಲಯ ವದಂತಿ ಹಬ್ಬಿಸುತ್ತಿದ್ದರೂ ಉತ್ತರ ಕರ್ನಾಟಕ ಭಾಗದಲ್ಲಿ ಹೊಸಬರಿಗೆ ಅವಕಾಶ ಕೊಡಲೇಬೇಕೆಂಬ ವಾದ ಬಲವಾಗತೊಡಗಿದೆ. ಸಿಎಂ ಬಸವರಾಜ ಬೊಮ್ಮಾಯಿ ನಿವಾಸದಲ್ಲಿ ಕಳೆದ ಶುಕ್ರವಾರ ನಡೆದ ಸಭೆಯಲ್ಲಿ ಸಂಘ ಪರಿವಾರದ ಹಿರಿಯರು ಈ ಬಗ್ಗೆ ಸೂಕ್ಷ್ಮವಾಗಿ ಸೂಚಿಸಿದ್ದು, ಕನಿಷ್ಠ 25 ಕ್ಷೇತ್ರಗಳಲ್ಲಿ ಈ ಪ್ರಯೋಗ ನಡೆಯುವ ಸಾಧ್ಯತೆ ಇದೆ.
Related Articles
Advertisement
ಹೊಸಬರಿಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂಬ ವಾದಕ್ಕೆ ಪೂರಕವಾದ ಕೆಲವು ಬೆಳವಣಿಗೆಗಳು ಈಗ ಪಕ್ಷದಲ್ಲಿ ನಡೆಯುತ್ತಿವೆ. ಕ್ಷೇತ್ರದಲ್ಲಿ ಕೆಲಸ ಮಾಡಿ ಎಂದು ರಾಷ್ಟ್ರೀಯ ನಾಯಕರೊಬ್ಬರು ಈಗಾಗಲೇ ಕೆಲವರಿಗೆ ಸೂಚನೆ ನೀಡಿರುವುದು ಈ ವಾದಕ್ಕೆ ಇನ್ನಷ್ಟು ಪುಷ್ಠಿ ನೀಡಿದೆ.
ಇದು ಕರ್ನಾಟಕದ್ದೇ ಮಾದರಿ“ಗುಜರಾತ್ ಮಾದರಿ’ ಚುನಾವಣ ತಂತ್ರಗಾರಿಕೆಯ ಮೂಲ ಹುಡುಕುತ್ತ ಹೋದರೆ ಅದು ಕೊನೆಗೆ ಬಂದು ನಿಲ್ಲುವುದು ಕರ್ನಾಟಕಕ್ಕೆ ಎಂಬುದು ಆರೆಸ್ಸೆಸ್‌ನ ಹಿರಿಯ ನಾಯಕರ ಅಭಿಪ್ರಾಯ. ಹೊಸಮುಖ ಪರಿಚಯಿಸುವ ವಿಧಾನವನ್ನು ರಾಜ್ಯದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲೇ ಯಶಸ್ವಿಯಾಗಿ ಪ್ರಯೋಗಿಸಲಾಗಿದೆ. ಹೀಗಾಗಿ ಕರ್ನಾಟಕ ಮಾದರಿ ವಿಸ್ತರಣೆಯಾಗಲಿದೆ ಎಂಬುದೇ ಹೆಚ್ಚು ಸೂಕ್ತ ಎಂದು ಅಭಿಪ್ರಾಯಪಡುತ್ತಾರೆ. ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಕಳೆದ ಬಾರಿ ಹೊಸ ಮುಖಗಳನ್ನು ಕಣಕ್ಕೆ ಇಳಿಸಲಾಯಿತು. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದರಿಂದಾಗಿ ಹರೀಶ್ ಪೂಂಜಾ, ಡಾ| ಭರತ್ ಶೆಟ್ಟಿ, ರಾಜೇಶ್ ನಾಯ್ಕ, ಉಮಾನಾಥ ಕೋಟ್ಯಾನ್, ಸಂಜೀವ ಮಠಂದೂರು, ಸುಕುಮಾರ್ ಶೆಟ್ಟಿ, ಉತ್ತರ ಕನ್ನಡದಲ್ಲಿ ಸುನಿಲ್ ನಾಯ್ಕ, ರೂಪಾಲಿ ನಾಯ್ಕ, ದಿನಕರ ಶೆಟ್ಟಿ (ಜೆಡಿಎಸ್‌ನಿಂದ ಆಮದು), ಧಾರವಾಡದಲ್ಲಿ ಅಮೃತ್ ದೇಸಾಯಿ, ಹಾಸನದಲ್ಲಿ ಪ್ರೀತಂ ಗೌಡ, ಚಾಮರಾಜನಗರದಲ್ಲಿ ಡಾ| ಹರ್ಷವರ್ಧನ್, ಮೈಸೂರಿನಲ್ಲಿ ನಾಗೇಂದ್ರ, ಶಿವಮೊಗ್ಗದಲ್ಲಿ ಸುರೇಶ್ ನಾಯ್ಕ ಸೇರಿದಂತೆ ಕಳೆದ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಹೊಸಬರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹಳಬರನ್ನು ಹಾಗೂ ಪದೇ ಪದೆ ಸ್ಪರ್ಧಿಸಿ ಸೋತವರನ್ನು ಬದಿಗೆ ಸರಿಸಿ ನವನಾಯಕತ್ವ ಬೆಳೆಸುವ ಪ್ರಕ್ರಿಯೆ ಆರಂಭಗೊಂಡದ್ದೇ ಕರ್ನಾಟಕದಲ್ಲಿ. ಅದರ ಮುಂದುವರಿದ ಭಾಗ ಇತರ ರಾಜ್ಯಗಳಿಗೆ ಮಾದರಿಯಾಗಿದೆ. ಬಿಜೆಪಿ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಈ ಮಾದರಿಯ ಸೂತ್ರಧಾರರಾಗಿದ್ದರು. ಕಣ ಪರೀಕ್ಷೆ ನಡೆಸಿದ ಪ್ರಧಾನ್
ಕಳೆದ ವಾರ ರಾಜ್ಯಕ್ಕೆ ಭೇಟಿ ನೀಡಿದ್ದ ಚುನಾವಣ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಕರ್ನಾಟಕದ ಚುನಾವಣ ಕಣದ ಪ್ರಾಥಮಿಕ ಪರೀಕ್ಷೆ ನಡೆಸಿ ತೆರಳಿದ್ದಾರೆ. ಸಹ ಉಸ್ತುವಾರಿ ಅಣ್ಣಾಮಲೈ ನಾನಾ ಮೋರ್ಚಾಗಳ ಮುಖಂಡರ ಜತೆಗೆ ಸಭೆ ನಡೆಸಿದ್ದಾರೆ. ಈ ಆಧಾರದ ಮೇಲೆ ಟಿಕೆಟ್ ಹಂಚಿಕೆಯ ಪ್ರಕ್ರಿಯೆ ಪ್ರಾರಂಭವಾಗಲಿದೆ. ವಿಭಾಗವಾರು ಸಭೆ ಬಳಿಕ ಚರ್ಚೆಗೆ ಒಂದು ರೂಪ ಸಿಗಲಿದೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ. - ರಾಘವೇಂದ್ರ ಭಟ್