Advertisement

ಕಾಂಗ್ರೆಸ್‌ ಆರಂಭಿಸಿದೆ ತಾರಾ ಬೇಟೆ

06:10 AM Jan 25, 2018 | Team Udayavani |

ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯದಲ್ಲಿ ಸ್ಯಾಂಡಲ್‌ವುಡ್‌ ಘಮ ಹೆಚ್ಚತೊಡಗಿದೆ. ಮೂರೂ ಪಕ್ಷಗಳು ತಮ್ಮದೇ ಆದ ರೀತಿ ತಾರೆಯರ ಜನಪ್ರಿಯತೆಯನ್ನು ಚುನಾವಣೆಯಲ್ಲಿ ಬಂಡವಾಳವಾಗಿಸುವ ನಿಟ್ಟಿನಲ್ಲಿ ತೊಡಗಿಸಿಕೊಂಡಿವೆ.

Advertisement

ಕಾಂಗ್ರೆಸ್‌ ಪ್ರಚಾರಕ್ಕೆ ಸ್ಟಾರ್‌ ರಂಗು ನೀಡಲು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಅಣಿಯಾಗುತ್ತಿದ್ದಾರೆ.  ಸ್ಯಾಂಡಲ್‌ವುಡ್‌ನ‌ ಹಲವು  ಘಟಾನುಘಟಿಗಳ ಮೇಲೆ ಕಣ್ಣು ಹಾಕಿರುವ ಡಿ.ಕೆ.ಶಿವಕುಮಾರ್‌, ಇದಕ್ಕಾಗಿ ಮಾತುಕತೆಯನ್ನೂ ಆರಂಭಿಸಿದ್ದಾರೆ.

ಈಗಾಗಲೇ ರಾಕಿಂಗ್‌ ಸ್ಟಾರ್‌ ಯಶ್‌ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಅವರಿಂದ ಅಧಿಕೃತ ಒಪ್ಪಿಗೆಗಾಗಿ ಕಾಯುತ್ತಿದ್ದಾರೆ.

ಅನೇಕ ನಟ, ನಟಿಯರು ಹಾಗೂ ನಿರ್ದೇಶಕರನ್ನು ಡಿ.ಕೆ. ಶಿವಕುಮಾರ್‌ ಸಂಪರ್ಕಿಸಿದ್ದಾರೆ. ಅವರಲ್ಲಿ  ನಿರ್ದೇಶಕ ಪ್ರೇಮ್‌,  ನಟಿ ಮಾಲಾಶ್ರೀ, ಹಾಸ್ಯ ನಟ ಸಾಧು ಕೋಕಿಲಾ ಹಾಗೂ ಸಿಹಿ ಕಹಿ ಚಂದ್ರು ಕಾಂಗ್ರೆಸ್‌ ಪರ ಪ್ರಚಾರ ನಡೆಸಲು ಒಪ್ಪಿಗೆ ಸೂಚಿಸಿದ್ದಾರೆಂದು ತಿಳಿದು ಬಂದಿದೆ.

ದರ್ಶನ್‌, ಸುದೀಪ್‌ಗೆ ಗಾಳ ?: ರಾಕಿಂಗ್‌ ಸ್ಟಾರ್‌ ಯಶ್‌ ಜೊತೆ ಮಾತುಕತೆ ಸಕಾರಾತ್ಮಕವಾಗಿದೆ ಎನ್ನಲಾಗಿದ್ದು, ಕಿಚ್ಚ ಸುದೀಪ್‌ ಹಾಗೂ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರನ್ನು ಸಂಪರ್ಕಿಸುವ ಆಲೋಚನೆ ಡಿಕೆಶಿ ಹೊಂದಿದ್ದಾರೆ. ದರ್ಶನ್‌ ತಾಯಿ ಮೀನಾ ತೂಗುದೀಪ್‌ ಅವರು ಅಧಿಕೃತವಾಗಿ ಕೆಪಿಸಿಸಿ ಕಾರ್ಯದರ್ಶಿಯಾಗಿರುವುದರಿಂದ ದರ್ಶನ್‌ ಕೂಡ ಕಾಂಗ್ರೆಸ್‌ ಪರ ನಿಲುವು ಹೊಂದಿದ್ದಾರೆ ಎನ್ನಲಾಗಿದೆ. ಅವರೂ ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರದಲ್ಲಿ ಪಾಲ್ಗೊಳ್ಳುವ ಆಶಾ ಭಾವನೆ ಹೊಂದಿದ್ದಾರೆ.

Advertisement

ಶಿವರಾಜ್‌ಕುಮಾರ್‌ಗೂ ಸ್ಕೆಚ್‌: ನಟ ಶಿವರಾಜ್‌ ಕುಮಾರ್‌ ಅವರನ್ನೂ ಕಾಂಗ್ರೆಸ್‌ ಪರ ಪ್ರಚಾರಕ್ಕೆ ಕರೆತರುವ ಯೋಜನೆ ರೂಪಿಸುತ್ತಿದ್ದು, ಶಿವರಾಜ್‌ ಕುಮಾರ್‌ ಪತ್ನಿ ಗೀತಾ ಶಿವರಾಜ್‌ ಕುಮಾರ್‌ ಅವರನ್ನು ಕಾಂಗ್ರೆಸ್‌ಗೆ ಸೆಳೆಯಲು ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ. ಸೊರಬ ಕ್ಷೇತ್ರದ ಹಾಲಿ ಶಾಸಕ ಮಧು ಬಂಗಾರಪ್ಪ ಅವರನ್ನೇ ಕಾಂಗ್ರೆಸ್‌ಗೆ ಕರೆ ತರುವ ಪ್ರಯತ್ನ ಇನ್ನೂ ಮುಂದುವರೆದಿದೆ. ಅವರೊಂದಿಗೆ ಗೀತಾ ಅವರನ್ನೂ ಸೇರಿಸಿಕೊಂಡರೆ, ಶಿವರಾಜ್‌ ಕುಮಾರ್‌ರನ್ನು ಪ್ರಚಾರಕ್ಕೆ ಕರೆ ತರುವುದು ಸರಳವಾಗುತ್ತದೆ ಎಂಬ  ಲೆಕ್ಕಾಚಾರ ನಡೆದಿದೆ. ಪಕ್ಷದಲ್ಲಿ ಈಗಾಗಲೇ ಸಕ್ರಿಯರಾಗಿರುವ ಅಂಬರೀಶ್‌, ರಮ್ಯಾ, ಭಾವನಾ, ಜಯಮಾಲಾ, ಉಮಾಶ್ರೀ, ಭವ್ಯ ಅವರಂತೂ ಪ್ರಚಾರದಲ್ಲಿ ತೊಡಗಿಸಿಕೊಳ್ಳುವುದು ನಿಚ್ಚಳ.

ರಾಹುಲ್‌ ಪ್ರವಾಸದ ಮೇಲೆ ನಿರ್ಧಾರ: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ರಾಜ್ಯ ಚುನಾವಣೆಗೆ ಹೆಚ್ಚಿನ ಸಮಯ ನೀಡಿದರೆ, ಸ್ಟಾರ್‌ಗಳ ಪ್ರಚಾರದ ಹೆಚ್ಚಿನ ಅಗತ್ಯತೆ ಇರುವುದಿಲ್ಲ ಎನ್ನುವುದು ಕಾಂಗ್ರೆಸ್ಸಿಗರ ಲೆಕ್ಕಾಚಾರ. ಹೀಗಾಗಿ ರಾಹುಲ್‌ ಗಾಂಧಿ ಪ್ರಚಾರದ ವೇಳಾ ಪಟ್ಟಿ ನಂತರವೇ ಸ್ಟಾರ್‌ಗಳ ಪ್ರಚಾರದ ವೇಳಾ ಪಟ್ಟಿ ನಿಗದಿಯಾಗುವ ಸಾಧ್ಯತೆ ಇದೆ.

– ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next