ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಕೇಂದ್ರ ನಾಯಕರ ದಂಡೇ ಆಗಮಿಸಲಿದೆ.
ವಿಧಾನಸಭೆ ಚುನಾವಣೆ ಬಿಜೆಪಿ ಪಾಲಿಗೆ ಮಹತ್ವದ್ದಾಗಿದ್ದು “ಟಾರ್ಗೆಟ್ ಕರ್ನಾಟಕ ಕಾರ್ಯತಂತ್ರದಡಿ ಕೇಂದ್ರದ ಸಚಿವರು ಹಾಗೂ ಬಿಜೆಪಿಯ ಪ್ರಮುಖ ನಾಯಕರಿಗೆ 15 ದಿನ ಕರ್ನಾಟಕದದಲ್ಲೇ ವಾಸ್ತವ್ಯ ಹೂಡಲು ಸೂಚನೆ ನೀಡಲಾಗಿದೆ. ಅದರಂತೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದಂತೆ ನಾಯಕರ ದಂಡು ಆಗಮಿಸಲಿದ್ದು, ಪ್ರತಿನಿತ್ಯ ರಾಜ್ಯದ ವಿವಿಧೆಡೆ ಬಹಿರಂಗ ಸಭೆ,ರೋಡ್ ಶೋ, ಮತದಾರರ ಜತೆ ಸಂವಾದ ನಡೆಸಲಿದೆ.
ರಾಜ್ಯ ಬಿಜೆಪಿ ಘಟಕವು ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ನರೇಂದ್ರ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ್ ಹಾಗೂ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ಸ್ಮತಿ ಇರಾನಿ, ನಿತಿನ್ ಗಡ್ಕರಿ ಅವರ ಪ್ರಚಾರ ಸಭೆ ಪಟ್ಟಿ ಸಿದ್ಧಪಡಿಸಿದೆ. ಇದರ ಜತೆಗೆ ತೆಲುಗು, ತಮಿಳು,ಮಲಯಾಳಂ ಭಾಷಿಕರನ್ನು ಸೆಳೆಯಲು ಆಂಧ್ರಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳ ಪ್ರಮುಖ ಬಿಜೆಪಿ ನಾಯಕರನ್ನುಆಯ್ದ ಕೆಲವು ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಕಳುಹಿಸಲು ಮನವಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿಯವರು 20 ಬಹಿರಂಗ ಸಭೆ,ಮೂರು ಕಡೆ ರೋಡ್ ಶೋದಲ್ಲಿ ಭಾಗವಹಿಸಲಿದ್ದಾರೆ. ಅಮಿತ್ ಶಾ 15ಕ್ಕೂ ಹೆಚ್ಚು ಬಹಿರಂಗ ಸಭೆ, ಯೋಗಿ ಆದಿತ್ಯನಾಥ್ 10 ಕಡೆ ಬಹಿರಂಗ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.
ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಆಗಮಿಸಲಿರುವ ಕೇಂದ್ರದ ನಾಯಕರು ಹಾಗೂ ಬಹಿರಂಗ ಸಭೆಯ ಸ್ಥಳಗಳ ಬಗ್ಗೆ ಈಗಾಗಲೇ ಪಟ್ಟಿ ಸಿದ್ಧಪಡಿಸಿ ಚುನಾವಣಾ ಆಯೋಗ ಹಾಗೂ ಆಯಾ ಜಿಲ್ಲಾ ಚುನಾವಣಾಧಿಕಾರಿಗಳು, ಜಿಲ್ಲಾ ಪೊಲೀಸ್
ವರಿಷ್ಠಾಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದಂತೆ ಏ.18ರ ನಂತರ
ನರೇಂದ್ರ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ್ ಸರಣಿ ಪ್ರವಾಸ ಆರಂಭವಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಅಮಿತ್ ಶಾ ಏ.13ರಂದು ಮಧ್ಯಾಹ್ನ 3.25ಕ್ಕೆ ಗೋಕಾಕದಲ್ಲಿ ರೋಡ್ ಶೋ ನಡೆಸಲಿದ್ದಾರೆ. ನಂತರ, ನಿಪ್ಪಾಣಿಯಲ್ಲಿ ಮಹಿಳಾ ಸಮಾವೇಶ ಹಾಗೂ ಸಂಜೆ 7.45ಕ್ಕೆ ಬೆಳಗಾವಿಯಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಲಿದ್ದಾರೆ.ಶಾ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ನಮ್ಮ ಕಾರ್ಯಕರ್ತರಿಗೆ ಕಾಂಗ್ರೆಸ್‌ನವರು ಬೆದರಿಕೆಯೊಡ್ಡುತ್ತಿದ್ದಾರೆ.
– ಸುರೇಶ ಅಂಗಡಿ, ಸಂಸದ