Advertisement

ವಿಧಾನಸಭಾ ಚುನಾವಣೆ; ಒಂದೇ ದಿನ 842 ನಾಮಪತ್ರ ಸಲ್ಲಿಕೆ

12:29 AM Apr 18, 2023 | Team Udayavani |

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಅಖಾಡ ರಂಗೇರಿದ್ದು, ಘಟಾನುಘಟಿ ನಾಯಕರೂ ಸೇರಿ ನಾಮಪತ್ರ ಸಲ್ಲಿಕೆಯ ಭರಾಟೆ ಶುರುವಾಗಿದೆ. ಶುಭ ಸೋಮವಾರ ಒಂದೇ ದಿನ 842 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.

Advertisement

ನಾಮಪತ್ರ ಸಲ್ಲಿಕೆಗೆ ಕೇವಲ ಮೂರು ದಿನ ಮಾತ್ರ ಬಾಕಿ ಉಳಿದಿದ್ದು ಗುರುವಾರ ಕಡೆಯ ದಿನ. ಇಂದು ಮಂಗಳವಾರವಾಗಿದ್ದು ಕೆಲವರು ನಾಮಪತ್ರ ಸಲ್ಲಿಸಬಹುದು. ಬುಧವಾರ ಎಪ್ರಿಲ್‌ 19ರಂದು ಇನ್ನಷ್ಟು ಗಣ್ಯರು ನಾಮಪತ್ರ ಸಲ್ಲಿಸಲಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅದ್ದೂರಿ ಸಮಾವೇಶ ನಡೆಸುವ ಮೂಲಕ ಕನಕಪುರದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದು, ತಮ್ಮನ್ನು ವಿನಾ ಕಾರಣ ಬಿಜೆಪಿಯವರು ಜೈಲಿಗೆ ಕಳುಹಿಸಿದರು ಎಂದು ಭಾವನಾತ್ಮಕ ಅಸ್ತ್ರ ಪ್ರಯೋಗಿಸಿದ್ದಾರೆ. ಇನ್ನೊಂದೆಡೆ ಕಂದಾಯ ಸಚಿವ ಆರ್‌. ಅಶೋಕ ಪದ್ಮನಾಭನಗರದಲ್ಲಿ ಬಲಪ್ರದರ್ಶನದೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ.

ಎಲ್ಲದಕ್ಕಿಂತ ಮುಖ್ಯವಾಗಿ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಶಿಕಾರಿಪುರದಲ್ಲಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಎ. 19ರಂದು ಅವರು ಮತ್ತೂಂದು ನಾಮಪತ್ರ ಸಲ್ಲಿಸುವರು. ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್‌ ಕೂಡ ಬಬಲೇಶ್ವರದಲ್ಲಿ ನಾಮಪತ್ರ ಸಲ್ಲಿಸಿದರು.

ಪುತ್ತೂರಿನಲ್ಲಿ ಅರುಣ್‌ ಕುಮಾರ್‌ ಪುತ್ತಿಲ ಪಕ್ಷೇತರ ವರುಣಾದಲ್ಲಿ ಬಿಜೆಪಿಯ ವಿ. ಸೋಮಣ್ಣ ನಾಮಪತ್ರ ಸಲ್ಲಿಸಿದ್ದಾರೆ. ಖುದ್ದು ಸಿಎಂ ಬಸವರಾಜ ಬೊಮ್ಮಾಯಿ ಅವರೇ ಈ ಸಂದರ್ಭದಲ್ಲಿ ಸೋಮಣ್ಣ ಜತೆ ನಿಲ್ಲುವ ಮೂಲಕ ಶಕ್ತಿಪ್ರದರ್ಶನ ನಡೆಸಿದ್ದಾರೆ. ಇನ್ನು ಪುತ್ತೂರಿನಲ್ಲಿ ಪಕ್ಷೇತರ ಅಭ್ಯರ್ಥಿ ಅರುಣ್‌ ಕುಮಾರ್‌ ಪುತ್ತಿಲ ನಾಮಪತ್ರ ಸಲ್ಲಿಕೆ ಎಲ್ಲರ ಗಮನ ಸೆಳೆದಿದೆ. ಸಾವಿರಾರು ಸಂಖ್ಯೆಯಲ್ಲಿ ಹಿಂದುತ್ವದ ಬೆಂಬಲಿಗರು ಅವರ ಜತೆಯಾಗುವ ಮೂಲಕ ಬಿಜೆಪಿಯ ಅಧಿಕೃತ ಅಭ್ಯರ್ಥಿಗೆ ದಿಗಿಲು ಹುಟ್ಟಿಸಿದ್ದಾರೆ. ಮಂಗಳೂರಿನಲ್ಲಿ ಶಾಸಕ ವೇದವ್ಯಾಸ ಕಾಮತ್‌, ಕಾಪುವಿನಲ್ಲಿ ಬಿಜೆಪಿಯ ಸುರೇಶ್‌ ಶೆಟ್ಟಿ ಗುರ್ಮೆ, ಮೂಡುಬಿದಿರೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ಎಂ. ರೈ, ಉಡುಪಿಯಲ್ಲಿ ಕಾಂಗ್ರೆಸ್‌ ಅಧಿಕೃತ ಅಭ್ಯರ್ಥಿ ಪ್ರಸಾದ್‌ರಾಜ್‌ ಕಾಂಚನ್‌, ಪಕ್ಷೇತರ ಕೃಷ್ಣಮೂರ್ತಿ ಆಚಾರ್ಯ ನಾಮಪತ್ರ ಸಲ್ಲಿಸಿದ್ದಾರೆ. ಹಾಸನ ಜಿಲ್ಲೆಯಲ್ಲಿ ಮಾಜಿ ಸಚಿವ ಎಚ್‌.ಡಿ. ರೇವಣ್ಣ ಸೇರಿದಂತೆ ಪಕ್ಷದ ಬಹುತೇಕ ಎಲ್ಲ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

Advertisement

ಸಚಿವರಾದ ಎಸ್‌ಟಿ. ಸೋಮಶೇಖರ್‌, ಮುನಿರತ್ನ, ಡಾ| ಸಿ.ಎನ್‌. ಅಶ್ವತ್ಥನಾರಾಯಣ, ಗೋಪಾಲಯ್ಯ, ಮಾಜಿ ಶಾಸಕ ದಾಸರಹಳ್ಳಿ ಮುನಿರಾಜ್‌, ಬೊಮ್ಮನಹಳ್ಳಿಯಿಂದ ಸರಕಾರದ ಮುಖ್ಯ ಸಚೇತಕ ಸತೀಶ್‌ ರೆಡ್ಡಿ, ಚಾಮರಾಜಪೇಟೆಯಲ್ಲಿ ಮಾಜಿ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಸೇರಿದಂತೆ ಬಿಜೆಪಿಯ ಘಟಾನುಘಟಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಕಾಂಗ್ರೆಸ್‌ನಿಂದ ದಿನೇಶ್‌ ಗುಂಡೂರಾವ್‌, ಕೃಷ್ಣ ಭೈರೇಗೌಡ, ರಿಜ್ವಾನ್‌ ಹರ್ಷದ್‌, ಎನ್‌. ಹ್ಯಾರೀಸ್‌, ರಾಜಾಜಿನಗರದಿಂದ ಪುಟ್ಟಣ್ಣ ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ಚಿಕ್ಕಬಳ್ಳಾಪುರದಿಂದ ಆರೋಗ್ಯ ಸಚಿವ ಡಾ| ಕೆ. ಸುಧಾಕರ್‌ ಅಪಾರ ಬೆಂಬಲಿಗರ ಜತೆಗೆ ತಮ್ಮ ನಾಮಪತ್ರ ಸಲ್ಲಿಸಿದರು. ಪುಲಕೇಶಿನಗರದಿಂದ ಅಖಂಡ ಶ್ರೀನಿವಾಸಮೂರ್ತಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿರುವ ಮಾಜಿ ಸಚಿವ ಬಾಬುರಾವ್‌ ಚಿಂಚನಸೂರ್‌ ಪರ ಅವರ ಪತ್ನಿ ನಾಮಪತ್ರ ಸಲ್ಲಿಸಿದ್ದಾರೆ. ಅದೇ ರೀತಿ ಹುಬ್ಬಳ್ಳಿ-ಧಾರವಾಡ ಪ್ರವೇಶಕ್ಕೆ ನ್ಯಾಯಾಲಯದಿಂದ ನಿರ್ಬಂಧಕ್ಕೆ ಒಳಗಾಗಿರುವ ವಿನಯ್‌ ಕುಲಕರ್ಣಿ ಪರ ಅವರ ಪತ್ನಿ ನಾಮಪತ್ರ ಸಲ್ಲಿಸಿರುವುದು ವಿಶೇಷ.

ಮಹಿಳಾ ಅಭ್ಯರ್ಥಿಗಳು 60 ಮಾತ್ರ
ನಾಮಪತ್ರ ಸಲ್ಲಿಕೆಯ ಮೂರನೇ ದಿನವಾದ ಸೋಮವಾರ ಒಟ್ಟು 842 ನಾಮಪತ್ರಗಳು ಸಲ್ಲಿಕೆಯಾಗಿವೆ. ಇದರಲ್ಲಿ 782 ಪುರುಷರು ಮತ್ತು 60 ಮಹಿಳೆಯರು ಇದ್ದಾರೆ. ಈ ಪೈಕಿ ಬಿಜೆಪಿಯಿಂದ 198, ಕಾಂಗ್ರೆಸ್‌ 195, ಜೆಡಿಎಸ್‌ 86, ಆಮ್‌ ಆದ್ಮಿ 50, ಬಿಎಸ್‌ಪಿಯಿಂದ 17 ನಾಮಪತ್ರಗಳು ಸಲ್ಲಿಕೆಯಾಗಿವೆ. ಜತೆಗೆ ನೊಂದಾಯಿತ ಮಾನ್ಯತೆ ಇಲ್ಲದ ಪಕ್ಷಗಳಿಂದ 134 ಹಾಗೂ ಸ್ವತಂತ್ರ ಅಭ್ಯರ್ಥಿಗಳಿಂದ 161 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next