ಧಾರವಾಡ: ಗದಗ, ಹಾವೇರಿ, ಧಾರವಾಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಚುನಾವಣಾ ಕ್ಷೇತ್ರದಿಂದ ಓರ್ವ ಸದಸ್ಯರ ಚುನಾವಣೆಗೆ ನಾಮಪತ್ರಗಳನ್ನು ಸ್ವೀಕರಿಸುವ ಪ್ರಕ್ರಿಯೆ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಾರಂಭವಾಗಿದೆ.
ಉಮೇದುವಾರರು ಅಥವಾ ಅವರ ಸೂಚಕರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾಧಿಕಾರಿಗೆ ಅಥವಾ ಸಹಾಯಕ ಚುನಾವಣಾಧಿಕಾರಿಯಾಗಿರುವ ಧಾರವಾಡ ಜಿಲ್ಲಾಧಿಕಾರಿಗೆ ಮೇ 19ರಿಂದ ಮೇ 26ರ ವರೆಗೆ ಸರ್ಕಾರಿ ರಜಾದಿನಗಳನ್ನು ಹೊರತುಪಡಿಸಿ ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯೊಳಗೆ ನಾಮಪತ್ರಗಳನ್ನು ಸಲ್ಲಿಸಬಹುದು.
ನಾಮಪತ್ರದ ನಮೂನೆಗಳನ್ನು ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪಡೆದುಕೊಳ್ಳಬಹುದು. ನಾಮಪತ್ರಗಳನ್ನು ಮೇ 27ರಂದು ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಬೆಳಗ್ಗೆ 11 ಗಂಟೆಗೆ ಪರಿಶೀಲಿಸಲಾಗುವುದು.
ನಾಮಪತ್ರಗಳನ್ನು ಹಿಂತೆಗೆದು ಕೊಳ್ಳಲು ಉಮೇದುವಾರ, ಅವರ ಸೂಚಕರು ಅಥವಾ ಅಧಿಕೃತ ಚುನಾವಣಾ ಏಜೆಂಟರು ಚುನಾವಣಾಧಿಕಾರಿಗೆ ಅಥವಾ ಸಹಾಯಕ ಚುನಾವಣಾಧಿಕಾರಿಯಾಗಿರುವ ಧಾರವಾಡ ಜಿಲ್ಲಾಧಿಕಾರಿಗೆ ಮೇ 30ರ ಮಧ್ಯಾಹ್ನ 3 ಗಂಟೆಯೊಳಗೆ ತಿಳಿವಳಿಕೆ ಪತ್ರ ಸಲ್ಲಿಸಬಹುದು.
ಅವಶ್ಯವಿದ್ದರೆ ಜೂ.13ರಂದು ಬೆಳಗ್ಗೆ 8ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ ಎಂದು ಚುನಾವಣಾಧಿಕಾರಿಯಾದ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೊದಲ ದಿನ ನಾಮಪತ್ರ ಇಲ್ಲ
ಧಾರವಾಡ: ವಿಧಾನ ಪರಿಷತ್ತಿನ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಮೊದಲ ದಿನ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ನಾಮಪತ್ರ ಸಲ್ಲಿಸಲು ಮೇ 26ರವರೆಗೆ ಅವಕಾಶವಿದೆ ಎಂದು ಸಹಾಯಕ ಚುನಾವಣಾಧಿಕಾರಿಯಾದ ಡಿಸಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.