Advertisement

ವಿಧಾನಸಭೆ ಚುನಾವಣೆ ಸ್ಪರ್ಧೆಗೆ ಅಭ್ಯರ್ಥಿಗಳ ತಯಾರಿ

01:57 PM Nov 23, 2022 | Team Udayavani |

ಬೇತಮಂಗಲ: 2023ರ ಕೆಜಿಎಫ್ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇದ್ದರು, ಪ್ರಮುಖ ಪಕ್ಷಗಳಾದ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಪಕ್ಷದ ಅಭ್ಯರ್ಥಿಗಳು ಮತದಾರರ ಮನವೂಲಿಸುವ ಯತ್ನದಲ್ಲಿ ನಿರತರಾಗಿದ್ದು ಮುಂದಿನ 2023ರ ವಿಧಾನಸಭಾ ಸದಸ್ಯರಾಗಿ ಯಾರು ಆಯ್ಕೆಯಾಗಲಿ ದ್ದಾರೆ ಎಂಬ ಚರ್ಚೆಗಳು ತೀವ್ರವಾಗಿವೆ.

Advertisement

ಮುಂದಿನ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಲು ಹಾಲಿ ಶಾಸಕಿ ಎಂ.ರೂಪಕಲಾ ತಯಾರಿ ನಡೆಸಿದ್ದಾರೆ ಬಿಜೆಪಿಯಲ್ಲಿ ಮಾಜಿ ಶಾಸಕ ಸಂಪಂಗಿ ಹಾಗೂ ಬಿಜೆಪಿ ಪಕ್ಷದಿಂದ ತಮಗೂ ಸಹ ಟಿಕೆಟ್‌ ನೀಡಬೇಕು ಎಂದು ಸಮಾಜ ಸೇವೆಯಲ್ಲಿ ತೊಡಗಿರುವ ಆರ್‌.ಕೆ.ಪೌಂಡೇಷನ್‌ನ ಮೋಹನ್‌ಕೃಷ್ಣ ತೀವ್ರ ಪೈಪೋಟಿಗೆ ಇಳಿದಿದ್ದಾರೆ. ಇನ್ನು ಜೆಡಿಎಸ್‌ನಿಂದ ಡಾ.ರಮೇಶ್‌ಬಾಬು ಅದೃಷ್ಟ ಪರೀಕ್ಷೆಗೆ ಮತದಾರರ ಮುಂದೆ ಬಂದಿದ್ದಾರೆ.

ಹಾಲಿ ಶಾಸಕಿ ಎಂ.ರೂಪಕಲಾ ಕಳೆದ 9 ವರ್ಷಗಳಿಂದ ಡಿಸಿಸಿ ಬ್ಯಾಂಕ್‌ ಮೂಲಕ ಬಡ ಕುಟುಂಬಗಳ ಮಹಿಳೆಯರ ಸ್ತ್ರಿ ಶಕ್ತಿ ಸಂಘಗಳಿಗೆ ಶೂನ್ಯ ಬಡ್ಡಿ ದರದಲ್ಲಿ ನೂರಾರು ಕೋಟಿ ಸಾಲ ನೀಡುವ ಮೂಲಕ ಶಾಸಕರಾಗಿ ಆಯ್ಕೆಯಾಗಿ ತಾಲೂಕು ಆಡಳಿತ ಸೌಧ, ತಾಪಂ ಕಟ್ಟಡ, ದ್ವಿಪಥ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಸಮನ್ವಯತೆ ಸಾಧಿಸಿ ಮುನ್ನಡೆಯಲಿರುವರೇ ನೋಡಬೇಕು. ಮಾಜಿ ಶಾಸಕ ವೈ.ಸಂಪಂಗಿ ಒಮ್ಮೆ ತಾವೇ ಟಿಕೆಟ್‌ ಪಡೆದು ಶಾಸಕರಾದರೆ ಮತ್ತೂಮ್ಮೆ ತಮ್ಮ ತಾಯಿ ವೈ.ರಾಮಕ್ಕ ರನ್ನು ಚುನಾವಣಾ ಕಣಕ್ಕೆ ಇಳಿಸಿ ಜಯಗಳಿಸಿದರು. ಮರಳಿ ಚುನಾವಣೆಯಲ್ಲಿ ತಮ್ಮ ಮಗಳು ಅಶ್ವಿ‌ನಿಯನ್ನು ಚುನಾವಣಾ ಆಖಾಡಕ್ಕೆ ಇಳಿಸಿ ಸೋಲುಂಡರು.

ಕಳೆದ ಚುನಾವಣೆ ನಂತರ ಬಿಜೆಪಿ ಇಬ್ಟಾಗವಾಗಿದ್ದು. 4 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿರುವ ಮೋಹನ್‌ಕೃಷ್ಣರನ್ನು ಬಿಜೆಪಿಗೆ ಬರ ಮಾಡಿಕೊಳ್ಳಲಾಯಿತು. ಮೋಹನ್‌ ಕೃಷ್ಣ ರಾಮಮಂದಿರ ನಿರ್ಮಾಣಕ್ಕಾಗಿ ಬೆಳ್ಳಿ ಇಟ್ಟಿಗೆ ನೀಡಿದ್ದು, ಆರ್‌ಆರ್‌ಎಸ್‌ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದಾರೆ. ದೇಗುಲಗಳಿಗೆ ಕ್ರೀಡೆಗಳಿಗೆ ತೀರ್ಥ ಯಾತ್ರೆಗಳಿಗೆ ಉಚಿತ ಬಸ್‌ ವ್ಯವಸ್ಥೆ ಸೇರಿದಂತೆ ಸಾಮಾಜಿಕ ಚಟುವಟಿಕೆಯಲ್ಲಿ ಜಾಗೃತರಾಗಿದ್ದಾರೆ. ಇವರೊಂದಿಗೆ ಗ್ರಾಪಂ ಅಧ್ಯಕ್ಷ ಸುರೇಶ್‌ ತಮ್ಮದೇ ರೀತಿಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿದ್ದು ಬಿಜೆಪಿ ವರಿಷ್ಠರು ಯಾರಿಗೆ ಮಣೆ ಹಾಕಲಿದ್ದಾರೆ ಕಾದು ನೋಡಬೇಕಿದೆ.

ಜೆಡಿಎಸ್‌ ಪಕ್ಷದಿಂದ ಸ್ಪರ್ಧಿಸಲು ಡಾ.ರಮೇಶ್‌ ಬಾಬು ಭರ್ಜರಿ ತಯಾರಿ ನಡೆಸಿದ್ದು ಮುಳುಬಾಗಿಲಿನಲ್ಲಿ ಹಮ್ಮಿಕೊಂಡಿದ್ದ ಪಂಚರತ್ನ ಯಾತ್ರೆಗೆ ಕೆಜಿಎಫ್ ವಿಧಾನಸಭೆ ಕ್ಷೇತ್ರದಿಂದ 3000 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರನ್ನು ಕರೆದುಕೊಂಡು ಹೋಗುವ ಮೂಲಕ ಶಕ್ತಿ ಪ್ರದರ್ಶನ ತೊರಿಸಿದ್ದಾರೆ. ಜೆಡಿಎಸ್‌ ಮುಖಂಡರು ಒಂದಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. 3 ಪಕ್ಷಗಳ ಬಗ್ಗೆ ಮುಂದಿನ ದಿನಗಳಲ್ಲಿ ಮತದಾರರ ಪ್ರಭು ಯಾವ ತೀರ್ಮಾನ ನೀಡಲಿದ್ದಾನೆ ಎಂಬುದನ್ನು ಕಾದು ನೋಡಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next