Advertisement

ರಂಗೇರಲಿದೆ ವಿಧಾನಸಭಾ ಚುನಾವಣ ಕಣ

07:28 AM Jan 01, 2021 | Team Udayavani |

ಕೋವಿಡ್‌ ಭೀತಿಯ ನಡುವೆ ಕಳೆದ ವರ್ಷ ಬಿಹಾರದಲ್ಲಿ ಯಶಸ್ವಿಯಾಗಿ ವಿಧಾನಸಭೆ ಚುನಾವಣೆ ನಡೆಸಿ ಸೈ ಎನಿಸಿಕೊಂಡಿರುವ ಕೇಂದ್ರ ಚುನಾವಣ ಆಯೋಗಕ್ಕೆ 2021ರಲ್ಲಿ ಮತ್ತೆ ಹಲವು ಸವಾಲುಗಳಿವೆ. ತೆರವಾಗಿರುವ ಲೋಕಸಭೆ ಮತ್ತು ರಾಜ್ಯಸಭೆ ಸ್ಥಾನಗಳಿಗೆ ಉಪ ಚುನಾವಣೆ ಸಹಿತ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಜತೆಗೆ ಪ್ರತೀ ವರ್ಷದಂತೆ ಹಲವು ರಾಜ್ಯಗಳಲ್ಲಿ ವಿಧಾನ ಪರಿಷತ್‌, ಸ್ಥಳೀಯ ಸಂಸ್ಥೆಗಳು, ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಯಲಿವೆ.

Advertisement

ಅಸ್ಸಾಂ
2021ರಲ್ಲಿ 126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಗೆ ಚುನಾವಣೆ ನಡೆಯಬೇಕಿದೆ. ಈ ವರ್ಷದ ಎಪ್ರಿಲ್‌ ಅಥವಾ ಮೇ ವೇಳೆಗೆ ಚುನಾವಣೆ ನಡೆಯುವ ಸಾಧ್ಯತೆಯಿದೆ. 2016ರಲ್ಲಿ ನಡೆದ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಲಭಿಸಿರಲಿಲ್ಲ. ಬಿಜೆಪಿ 60 ಸ್ಥಾನಗಳನ್ನು ಗೆದ್ದು ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೆ, ಮಿತ್ರಪಕ್ಷ ಎಜಿಪಿ ಹಾಗೂ ಬಿಪಿಎಫ್ ಕ್ರಮವಾಗಿ 14 ಹಾಗೂ 12 ಸ್ಥಾನಗಳನ್ನು ಗಳಿಸಿತ್ತು. ಪಕ್ಷೇತರ ಶಾಸಕರೊಬ್ಬರ ಬೆಂಬಲವೂ ಸಿಕ್ಕಿತ್ತು. ಕಾಂಗ್ರೆಸ್‌ 23 ಹಾಗೂ ಎಐಯುಡಿಎಫ್ 14 ಸ್ಥಾನಗಳನ್ನು ಮಾತ್ರ ಗಳಿಸಲು ಸಾಧ್ಯವಾಗಿತ್ತು.

ಪಶ್ಚಿಮ ಬಂಗಾಲ
ಪಶ್ಚಿಮ ಬಂಗಾಲದ ವಿಧಾನಸಭೆಗೆ ಮೇ ತಿಂಗಳಿನಲ್ಲಿ ಚುನಾವಣೆ ನಡೆಯಲಿದೆ. ಈ ಚುನಾವಣೆ ದೇಶಾದ್ಯಂತ ಭಾರೀ ಕುತೂಹಲ ಕೆರಳಿಸಿದ್ದು ಜೆ.ಪಿ.ನಡ್ಡಾ ನೇತೃತ್ವದ ಬಿಜೆಪಿ ಈ ಬಾರಿ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯಲು ಪಣ ತೊಟ್ಟಿದೆ. ಕಳೆದೊಂದು ವರ್ಷದಿಂದ ಚುನಾವಣೆಗಾಗಿ ಭರದ ಸಿದ್ಧತೆಯಲ್ಲಿ ತೊಡಗಿರುವ ಬಿಜೆಪಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ಗೆ ಸಡ್ಡು ಹೊಡೆದಿದೆ. ಸಿಪಿಐ (ಎಂ) ಹಾಗೂ ಕಾಂಗ್ರೆಸ್‌ ಕೈಜೋಡಿಸಿವೆ. ಹಾಲಿ ಅಧಿಕಾರದಲ್ಲಿರುವ ತೃಣಮೂಲ ಕಾಂಗ್ರೆಸ್‌ ಜನಪರ ಆಡಳಿತದ ಜಪವನ್ನು ಜಪಿಸುತ್ತಿದೆಯಾದರೂ ಪಕ್ಷದೊಳಗಿನ ಆಂತರಿಕ ಕಚ್ಚಾಟ ಬಿಜೆಪಿ ಪಾಲಿಗೆ ವರದಾನವಾಗಿ ಪರಿಣಮಿಸುವ ಸಾಧ್ಯತೆ ಇದೆ.

ತಮಿಳುನಾಡು
2021ರ ಮೇ ತಿಂಗಳಲ್ಲಿ ತಮಿಳುನಾಡು ವಿಧಾನಸಭೆಗೆ ಚುನಾವಣೆ ನಡೆಯಲಿದೆ. ದಿವಂಗತರಾಗಿರುವ ಮಾಜಿ ಮುಖ್ಯಮಂತ್ರಿಗಳಾದ ಜೆ. ಜಯಲಲಿತಾ ಮತ್ತು ಎಂ. ಕರುಣಾನಿಧಿ ಅವರ ಅನುಪಸ್ಥಿತಿಯಲ್ಲಿ ಎಐಎಡಿಎಂಕೆ ಹಾಗೂ ಡಿಎಂಕೆ ಚುನಾವಣೆಯನ್ನು ಎದುರಿಸಲು ಸಜ್ಜಾಗಿದೆ. ಈ ಎರಡು ದ್ರಾವಿಡ ಪಕ್ಷಗಳಿಗೆ ಸಡ್ಡು ಹೊಡೆಯಲು ಬಿಜೆಪಿ ಸನ್ನದ್ಧವಾಗಿದೆ. ನಟ ಕಮಲ್‌ ಹಾಸನ್‌ ಈ ಚುನಾವಣೆಯಲ್ಲಿ ಸಕ್ರಿಯರಾಗಿದ್ದರೆ ಜನವರಿಯಲ್ಲಿ ಹೊಸ ಪಕ್ಷದ ರಚನೆಯನ್ನು ಘೋಷಿಸುವುದಾಗಿ ಈ ಹಿಂದೆ ತಿಳಿಸಿದ್ದ ತಲೈವಾ ರಜನಿಕಾಂತ್‌ ಅನಾರೋಗ್ಯದ ಕಾರಣ ಈಗ ಚುನಾವಣ ರಾಜಕೀಯದಿಂದ ಹಿಂದೆ ಸರಿದಿದ್ದಾರೆ.

ಕೇರಳ
2021ರ ಮೇ ತಿಂಗಳಿನಲ್ಲಿ ಕೇರಳ ವಿಧಾನಸಭಾ ಚುನಾವಣೆ ನಡೆಯಲಿದೆ. ಸಿಪಿಐ(ಎಂ)ನೇತೃತ್ವದ ಎಲ್‌ಡಿಎಫ್ ವಿರುದ್ಧ ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ಮೈತ್ರಿಕೂಟಗಳ ನಡುವೆ ಪ್ರತೀ ಬಾರಿಯೂ ಪ್ರಬಲ ಪೈಪೋಟಿ ಏರ್ಪಟ್ಟರೆ ಈ ಬಾರಿ ದಕ್ಷಿಣ ಭಾರತದಲ್ಲಿ ತನ್ನ ಛಾಪನ್ನು ಒತ್ತಲು ಮುಂದಾಗಿರುವ ಬಿಜೆಪಿ ಮೇಲಿನ ಎರಡು ಕೂಟಕ್ಕೂ ತೀವ್ರ ಸ್ಪರ್ಧೆ ಒಡ್ಡಲು ಮುಂದಾಗಿದೆ.

Advertisement

ಜಮ್ಮು ಮತ್ತು ಕಾಶ್ಮೀರ
ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ಹಿಂಪಡೆದ ಬಳಿಕ ಇದೇ ಮೊದಲ ಬಾರಿಗೆ ಈಗ ಕೇಂದ್ರಾಡಳಿತ ಪ್ರದೇಶವಾಗಿ ಮಾರ್ಪಟ್ಟಿರುವ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ಈ ಚುನಾವಣೆಯೂ ರಾಜಕೀಯ ಪಕ್ಷಗಳ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ತನ್ನ ಸಾಮರ್ಥ್ಯವನ್ನು ತೋರ್ಪಡಿಸುವ ಮೂಲಕ ವಿರೋಧಿ ಪಾಳಯದಲ್ಲಿ ನಡುಕ ಹುಟ್ಟಿಸಿದೆ.

ಇನ್ನು ಕೇಂದ್ರಾಡಳಿತ ಪ್ರದೇಶವಾಗಿರುವ ಪುದುಚೇರಿ ವಿಧಾನಸಭೆಗೂ ಚುನಾವಣೆ ನಡೆಯಲಿದ್ದು ಕಾಂಗ್ರೆಸ್‌ ಮತ್ತು ದ್ರಾವಿಡ ಪಕ್ಷಗಳ ಜತೆ ಬಿಜೆಪಿ ಯೂ ಈ ಬಾರಿ ಪೈಪೋಟಿ ನೀಡಲು ಸಜ್ಜಾಗಿದೆ. ಈ ಆರೂ ವಿಧಾನಸಭೆ ಚುನಾವಣೆಗಳು ಕೇಂದ್ರ ಸಹಿತ ದೇಶದ ಬಹುತೇಕ ರಾಜ್ಯಗಳಲ್ಲಿ ಅಧಿಕಾರ ಸೂತ್ರವನ್ನು ಹಿಡಿದಿರುವ ಬಿಜೆಪಿ ಪಾಲಿಗೆ ಪ್ರತಿಷ್ಠೆಯಾಗಿದ್ದರೆ ಪ್ರಾದೇಶಿಕ ಪಕ್ಷಗಳು ಮತ್ತು ಮೈತ್ರಿಕೂಟಗಳಿಗೆ ಅಸ್ತಿತ್ವ ಉಳಿಸಿಕೊಳ್ಳುವ ಚುನಾವಣೆ.

Advertisement

Udayavani is now on Telegram. Click here to join our channel and stay updated with the latest news.

Next