Advertisement

ಜೆಡಿಎಸ್‌ ಜಾತ್ಯತೀತ ಬಳಸಬಾರದು

06:00 AM May 04, 2018 | |

ಬೆಂಗಳೂರು: ಬಿಜೆಪಿ ಜತೆ ಹೋದರೆ ಕುಟುಂಬ ಹಾಗೂ ಪಕ್ಷದಿಂದ ಮಗನನ್ನು ಹೊರಹಾಕುತ್ತೇನೆ ಎಂದು ದೇವೇಗೌಡರು ಹೇಳುವುದು, ನೀವು ಬೇಕೇ ಬೇಕು ಎಂದು ಬಿಜೆಪಿಯವರು ದೇವೇಗೌಡರನ್ನು ತಬ್ಬಿಕೊಳ್ಳುವುದು ಏನಿದರ ಮರ್ಮ ಎಂದು ಪ್ರಶ್ನಿಸಿರುವ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಇನ್ಮುಂದೆ  ಜೆಡಿಎಸ್‌ನವರು ಜಾತ್ಯತೀತ ಎಂದು ಬಳಸಬಾರದು ಎಂದಿದ್ದಾರೆ.

Advertisement

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ “ಉದಯವಾಣಿ’ಗೆ ಸಂದರ್ಶನ ನೀಡಿದ ಅವರು, ದೇವೇಗೌಡರ ಕುರಿತು ನರೇಂದ್ರಮೋದಿ ಹೇಳಿಕೆ, ಜೆಡಿಎಸ್‌-ಬಿಜೆಪಿ ಮೈತ್ರಿ ಮಾತುಗಳ ಬಗ್ಗೆ ಯಡಿಯೂರಪ್ಪ- ಈಶ್ವರಪ್ಪ  ಮೌನವಾಗಿರುವುದು ಯಾಕೆ? ಅವರಿಗೂ ಜೆಡಿಎಸ್‌ ರಾಜಕೀಯ ವಿರೋಧಿಯಲ್ಲವೇ ಎಂದು ಪ್ರಶ್ನಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ದೇವೇಗೌಡರನ್ನು ಹೊಗಳಿರುವುದು ನೋಡಿದರೆ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಅವರಿಗೆ ಖಚಿತಗೊಂಡಿದೆ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲ, ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಅಧರ್ಮದ ವಿರುದ್ಧ ಧರ್ಮ ಸ್ಥಾಪನೆಗೆ ಉಡುಪಿ ಶ್ರೀಕೃಷ್ಣನ ಆಶೀರ್ವಾದ ಪಡೆದುಕೊಂಡು ಬಂದಿದ್ದೇನೆ. ನಾನು ಕೃಷ್ಣನ ಪಾತ್ರ ವಹಿಸಬೇಕೋ, ಅರ್ಜುನನ ಪಾತ್ರ ವಹಿಸಬೇಕೋ ಅನ್ನೋದು ದೇವರ ಮುಂದೆ ಬೇಡಿಕೊಂಡಿದ್ದು, ಭಕ್ತನಿಗೂ ಮತ್ತು ಭಗವಂತನಿಗೂ ಬಿಟ್ಟ ವಿಚಾರ. ಅದನ್ನು ನಾನು ಸಾರ್ವಜನಿಕವಾಗಿ ಹೇಳುವುದಿಲ್ಲ. ಕನಕನ ಕಿಂಡಿಯಿಂದಲೂ ಕೃಷ್ಣನನ್ನು ನೋಡಿಕೊಂಡು ಬಂದಿದ್ದೇನೆ ಎಂದೂ ಮಾರ್ಮಿಕವಾಗಿ ಹೇಳಿದ್ದಾರೆ.

ಚುನಾವಣಾ ಪ್ರಚಾರ ತಂತ್ರಗಾರಿಕೆ ಹೇಗೆ ನಡೆಯುತ್ತಿದೆ?
              ಬಹಳ ಬಿರುಸಿನಿಂದ ನಡೆಯುತ್ತಿದೆ. ರಾಜ್ಯದಲ್ಲಿ ಮತ್ತೂಮ್ಮೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ನಿಶ್ಚಿತ. ಐದು ವರ್ಷಗಳಲ್ಲಿ ನಾವು ಮಾಡಿದ ಕೆಲಸ ಹಾಗೂ ಕಾಂಗ್ರೆಸ್‌ನ ಜಾತ್ಯತೀತ ನಿಲುವು ಹಾಗೂ ಸಿದ್ಧಾಂತಕ್ಕೆ ಜನಬೆಂಬಲ ಸಿಗಲಿದೆ. ಬಿಜೆಪಿ ಕೇಂದ್ರ ಸರ್ಕಾರದ ಹಣವನ್ನು ಬಳಸಿ ಸುಳ್ಳು ಪ್ರಚಾರ ನಡೆಸಿದೆ. ದುಡ್ಡು ಅಧಿಕಾರದಲ್ಲಿ ಚುನಾವಣೆ ನಡೆಯುತ್ತದೆ ಎಂದು ಅವರು ನಂಬಿದ್ದಾರೆ. ಬರೀ ಪ್ರಚಾರದಲ್ಲಿ ಮುಂದಿದ್ದಾರೆ. ಆದರೆ, ಜನತೆಗೆ ಯಾವುದೇ ಹೊಸ ಭರವಸೆ ನೀಡಿಲ್ಲ. ಪ್ರಧಾನಿ ಮೋದಿ ಹೊರ ದೇಶದಲ್ಲಿ ಕರ್ನಾಟಕ ಅಭಿವೃದ್ಧಿ ಹೊಂದಿದ ರಾಜ್ಯ ಎಂದು ಹೇಳಿದ್ದಕ್ಕೆ ಅವರನ್ನು ಅಭಿನಂದಿಸುತ್ತೇನೆ. ಇದೆಲ್ಲ ಚುನಾವಣೆ ಸಂದರ್ಭದಲ್ಲಿ ಸಾರ್ವಜನಿಕ ಚರ್ಚೆಯಾಗುತ್ತದೆ.

ನರೇಂದ್ರ ಮೋದಿ ದೇವೇಗೌಡರನ್ನು ಹೊಗಳುವ ಮೂಲಕ ಕಾಂಗ್ರೆಸ್‌ಗೆ ಟಾಂಗ್‌ ಕೊಟ್ಟಿದ್ದಾರಾ?
              ನರೇಂದ್ರ ಮೋದಿಯವರು ದೇವೇಗೌಡರನ್ನು ಓಲೈಸುತ್ತಿದ್ದಾರೋ ಅಥವಾ ಜೊತೆಯಾಗಿದ್ದಾರೋ ನನಗೆ ಗೊತ್ತಿಲ್ಲಾ. ಆದರೆ, ಚುನಾವಣೆ ಸಂದರ್ಭದಲ್ಲಿ ಅವರು ಆಡಿದ ಮಾತು, ಅವರು ತೋರಿಸುತ್ತಿರುವ ಬಾಂಧವ್ಯ ನೋಡಿದರೆ ಎರಡೂ ಪಕ್ಷದ ನಡುವೆ ಸೌಹಾರ್ದತೆ ಇದ್ದಂತೆ ಕಾಣುತ್ತದೆ. ಇದರ ನಡುವೆಯೂ ದೇವೇಗೌಡರು, ಕುಮಾರಸ್ವಾಮಿ ಬಿಜೆಪಿ ಜೊತೆ ಹೋದರೆ ಮಗನನ್ನು ಪಕ್ಷ ಹಾಗೂ ಕುಟುಂಬದಿಂದ ಹೊರಗೆ ಹಾಕುತ್ತೇನೆ ಎನ್ನುವುದು ನೋಡಿದರೆ ಜನರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ನಡೆಸಿದ್ದಾರೆ.

Advertisement

ಇಂತಹ ಬೆಳವಣಿಗೆಯಿಂದ ಕಾಂಗ್ರೆಸ್‌ ನಷ್ಟವಾಗುತ್ತಾ?
               ನಮಗೆ ಇದರಿಂದ ಲಾಭವೂ ಇಲ್ಲ, ನಷ್ಟವೂ ಇಲ್ಲ. ನಾವು ಇಬ್ಬರನ್ನೂ ಅಷ್ಟೇ ದೂರ ಇಟ್ಟಿದ್ದೇವೆ. ಇನ್ನು ಮುಂದೆ ಜೆಡಿಎಸ್‌ನವರು ಜಾತ್ಯತೀತ ಎಂದು ಬಳಸಬಾರದು.

ನೀವು ಕೂಡ ದೇವೇಗೌಡರ ಬಗ್ಗೆ ಸೈಲೆಂಟ್‌ ಆಗಿದ್ದೀರಿ ಅನ್ನೋ ಮಾತಿದೆಯಲ್ಲಾÉ?
               ನಾನೆಲಿ ಸೈಲೆಂಟ್‌ ಆಗಿದ್ದೀನಿ? ನನ್ನ ಹಿಂದಿನ ಮಾತುಗಳನ್ನು ನೋಡಿಕೊಂಡು ಬನ್ನಿ ಅವರ ನೀತಿ, ಸಿದ್ಧಾಂತ ತತ್ವವನ್ನೇ ವಿರೋಧಿಸುತ್ತಾ ಬಂದಿದ್ದೇನೆ. ವೈಯಕ್ತಿಕವಾಗಿ ನಾನೇನೂ ಮಾತನಾಡಿಲ್ಲ. ಆದರೆ, ಅವರ ರಾಜಕೀಯ ನಡೆ ದ್ವಂದ್ವಮಯವಾಗಿದೆ.

ಕಾಂಗ್ರೆಸ್‌ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ ಎಂದು ಬಿಜೆಪಿ ಹೇಳುತ್ತಿದೆಯಲ್ಲಾ?
              ಅದು ಅವರ ಭ್ರಮೆ. ನಾವು ನುಡಿದಂತೆ ನಡೆದಿದ್ದೇವೆ. ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ. ಕರ್ನಾಟಕವನ್ನು ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗಿದ್ದೇವೆ. ಯಾವುದೇ ಭ್ರಷ್ಟಾಚಾರ ಆರೋಪ ಇಲ್ಲದೇ ಸರ್ಕಾರ ನಡೆಸಿದ್ದೇವೆ. ನಮ್ಮ ವಿರುದ್ಧ ಆರೋಪಗಳಿದ್ದರೆ ಪ್ರತಿಪಕ್ಷಗಳಿಗೆ ಸದನದಲ್ಲಿ ಮಾತನಾಡಲು ಸಾಕಷ್ಟು ಅವಕಾಶ ಇದ್ದವು. ಆದರೆ, ಆಗ ಸುಮ್ಮನೆ ಕುಳಿತು, ಈಗ ಪ್ರಧಾನಿ ಕಡೆಯಿಂದ ಸುಳ್ಳು ಆರೋಪ ಮಾಡಿಸುತ್ತಿದ್ದಾರೆ. ಅದರಿಂದ ಏನು ಪ್ರಯೋಜನ?

ಐಟಿ ದಾಳಿ ಮೂಲಕ ಕೇಂದ್ರ ಸರ್ಕಾರ ನಿಮ್ಮನ್ನು ಕಟ್ಟಿ ಹಾಕುವ ಪ್ರಯತ್ನ ನಡೆಸಿದೆಯಾ?
             ಅಯ್ಯೋ ಬಿಡಿ ಅದೊಂದು ದೊಡ್ಡ ಇತಿಹಾಸ, ದೊಡ್ಡ ಪುಸ್ತಕ, ದೊಡ್ಡ ಚರಿತ್ರೆ. ದಿನಾ ನೋಟಿಸ್‌ ಕೊಡ್ತಾನೇ ಇದ್ದಾರೆ, ದಿನಾ ಉತ್ತರ ಕೊಡ್ತಾನೇ ಇದ್ದೇನೆ. ನನ್ನ ಎನರ್ಜಿಯೆಲ್ಲಾ ಇದರಲ್ಲೇ ಹೋಗಿದೆ.

ನಿಮ್ಮ ಶಕ್ತಿ ನೋಡಿಯೇ ಅವರು ನಿಮ್ಮನ್ನು ತಡೆಯುವ ಕೆಲಸ ಮಾಡಿದ್ದಾರಾ?
                ಈಗಲೂ ತೊಂದರೆ ಕೊಡುತ್ತಲೇ ಇದ್ದಾರೆ. ಸಮಸ್ಯೆ ಮಾಡುತ್ತಲೇ ಇದ್ದಾರೆ. ಇಡೀ ರಾಜ್ಯದಲ್ಲಿ ಸಿದ್ದರಾಮಯ್ಯ ಬಿಟ್ಟರೇ ನಾನೇ ಹೆಚ್ಚು ಪ್ರಚಾರ ಮಾಡಿದ್ದೇನೆ.ನನಗ್ಯಾರು ನಿರ್ಬಂಧ ಹೇರಿಲ್ಲ. ನಿರ್ಬಂಧ ಹೇರಿದರೆ ಕೇಳಬೇಕಲ್ಲಾ.

ಯಡಿಯೂರಪ್ಪ ಅವರೊಂದಿಗಿನ ಸ್ನೇಹ ಹೇಗಿದೆ ಸರ್‌?
               ಎಲ್ಲರ ಜತೆಗಿನ ಸ್ನೇಹಾನೇ ಬೇರೆ, ರಾಜಕೀಯವೇ ಬೇರೆ. ಪಾಪ ಅವರು ಹಿರಿಯರು ಅವರಿಗೆ ನಾನು ಗೌರವ ಕೊಡುತ್ತೇನೆ. ರಾಜಕೀಯ ಸಂಬಂಧ ಯಾವುದೂ ಇಲ್ಲ.

ಈ ಚುನಾವಣೆಯಲ್ಲಿ ನಿಮ್ಮದು ಮೋದಿ-ಅಮಿತ್‌ ಶಾ ವಿರುದ್ಧ ಹೋರಾಟನಾ, ಯಡಿಯೂರಪ್ಪ ವಿರುದ್ಧಾನಾ?
              ನೋಡ್ರಿ, ಯಡಿಯೂರಪ್ಪ ಅವರನ್ನು ಬಿಜೆಪಿಯವರೇ ಲೆಕ್ಕಕ್ಕೆ ಇಟ್ಟಿಲ್ಲ. ಅವರ ಮಗನಿಗೆ ಟಿಕೆಟ್‌ ಕೊಡಿಸಲು ಆಗಿಲ್ಲ. 2008ರಲ್ಲಿ ಅವರು ಫ‌ವರ್‌ಫ‌ುಲ್‌ ಆಗಿದ್ದರು. ಆ ಮೇಲೆ ಸೂರ್ಯ ಕೆಳಗೆ ಇಳಿದು ಬಿಟ್ಟ. 10 ಸಾವಿರ ಪಟ್ಟು ಯಡಿಯೂರಪ್ಪ ಡೌನ್‌ ಆಗಿದ್ದಾರೆ.

ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ನಿಂತಿರುವುದು ಕಾಂಗ್ರೆಸ್‌ಗೆ ಹಿನ್ನಡೆಯಾಗುತ್ತಾ?
             ಸಿದ್ದರಾಮಯ್ಯ ಅವರು ದೊಡ್ಡ ರಿಸ್ಕ್ ತೊಗೊಂಡಿದ್ದಾರೆ. ಮಗನಿಗೆ ಸೀಟು ಬಿಟ್ಟು ಕೊಟ್ಟು ಜೆಡಿಎಸ್‌ನ ಒಂದು ಸ್ಥಾನ ಕಡಿಮೆ ಮಾಡಲು ಪಕ್ಕದ ಕ್ಷೇತ್ರಕ್ಕೆ ಹೋದರು.  ಪಕ್ಷದ ಕಾರ್ಯಕರ್ತರ ಮನವಿಗೆ ಸ್ಪಂದಿಸಿ ಉತ್ತರ ಕರ್ನಾಟಕದಲ್ಲಿ ಸ್ಪರ್ಧೆ ಮಾಡಿದ್ದಾರೆ.

ನೀವು ಅವರ ಪರ ಪ್ರಚಾರಕ್ಕೆ ಹೋಗುತ್ತೀರಾ?
              ಅವರಿಗೆ ನಮ್ಮದು ಸಂಪೂರ್ಣ ಬೆಂಬಲ ಇದೆ. ಅವರು ಯಾವಾಗ ಕರೆಯುತ್ತಾರೆ ಆವಾಗ ಹೋಗುತ್ತೇನೆ. ಕಾಫಿ ಟೀ ಕುಡಿಯಲು ಹೋಗಿ ಬರುವುದಕ್ಕೆ ಆಗುವುದಿಲ್ಲ. ವ್ಯವಸ್ಥಿತವಾಗಿ ಸಂಘಟನೆ ಮೂಲಕ ಪ್ರಚಾರ ನಡೆಸಬೇಕು.

ಈ ಬಾರಿ ಅತಂತ್ರ ವಿಧಾನಸಭೆ ಬಂದರೆ ನೀವು ಸಿಎಂ ರೇಸಲ್ಲಿದ್ದೀರಾ?
             ಅಯ್ಯೋ, ಈ ಅತಂತ್ರ ಅನ್ನೋದನ್ನೇ ನನ್ನ ಸ್ಟೋರಿಲಿ ಇಡಬೇಡಿ. ನಾನು ಸರ್ವೆ ರಿಪೋರ್ಟ್‌ಗಳನ್ನು ನಂಬುವುದಿಲ್ಲ. ನನ್ನ ನಂಬಿಕೆ ಜನರ ಪ್ರೀತಿ ವಿಶ್ವಾಸ.

ಚುನಾವಣೆ ಹತ್ತಿರ ಬಂದಹಾಗೆ ಕಾಂಗ್ರೆಸ್‌ ಅಸ್ತ್ರಗಳೆಲ್ಲಾ ಖಾಲಿಯಾಗಿವೆ ಅಂತ ಮಾತು ಕೇಳಿ ಬರುತ್ತಿದೆಯಲ್ಲಾ?
            ಅದು ನಿಮ್ಮ ಅಭಿಪ್ರಾಯ ಅಷ್ಟೆ, ನಮ್ಮ ಅಸ್ತ್ರಗಳನ್ನೆಲ್ಲಾ ಬಿಚ್ಚಿ ಬಿಟ್ಟರೆ ಗೊತ್ತಾಗುತ್ತೆ. ಮೋದಿ ಬಂದು ಹೋಗ್ಲಿ ಸುಮ್ಮನಿರಿ, ನಮ್ಮ ಅಸ್ತ್ರಗಳನ್ನು ಬಿಡ್ತೀವಿ.

ಮೋದಿ ಬಂದು ಹೋದ ಮೇಲೆ ವಾತಾವರಣ ಬದಲಾಗುತ್ತದೆ ಎನ್ನುವುದು ಬಿಜೆಪಿ ಲೆಕ್ಕಾಚಾರ ಇದೆಯಲ್ಲಾ?
            ಅದಕ್ಕೆ ನಾವು ನಮ್ಮ ಅಸ್ತ್ರಗಳನ್ನು ಸಿದ್ಧಮಾಡಿ ಇಟ್ಟುಕೊಂಡಿದ್ದೇವೆ.

ನೀವು ಯಾವಾಗ್ಲೂ ಮಹಾಭಾರತದ ಬಗ್ಗೆ ಮಾತನಾಡುತ್ತೀರಿ, ಈ ಚುನಾವಣೆಯಲ್ಲಿ ನೀವು ಕೃಷ್ಣ ನಾ? ಅರ್ಜುನನಾ?
           ನೋಡಿ ನಾನು ನಿನ್ನೆ ಧರ್ಮ ಪತ್ನಿ ಜೊತೆಗೆ ಹೋಗಿ ಶ್ರೀ ಕೃಷ್ಣನ ಆಶೀರ್ವಾದ ಪಡೆದಿದ್ದೇನೆ. ಕೃಷ್ಣ ದೇವರಾಗಿದ್ದರೂ ಒಬ್ಬ ರಾಜಕಾರಣಿ. ಅವನು ಧರ್ಮ ಉಳಿಸಲು ಎಲ್ಲರಿಗೂ ಧೈರ್ಯ ತುಂಬಿ ನಾನೇ ಸಾರಥಿಯಾಗುತ್ತೇನೆ ನಡೆಯಿರಿ ಎಂದು ಸಾರಥಿಯಾಗುತ್ತಾನೆ. ಇವತ್ತು ಧರ್ಮ ಸಂಸ್ಥಾಪನೆಗೋಸ್ಕRರ ಈ ಬಿಜೆಪಿಯ ಕೆಟ್ಟ ಗುಣಗಳ ವಿರುದ್ಧ ಈ ದೇಶ ಹಾಗೂ ರಾಜ್ಯ ಉಳಿಸಲು ಪಕ್ಷದ ಪರವಾಗಿ ವೈಯಕ್ತಿಕವಾಗಿ ದೇವರಲ್ಲಿ ಪಾರ್ಥಿಸಿಕೊಂಡಿದ್ದೇನೆ.

ಧರ್ಮ ಸ್ಥಾಪಿಸಲು ನಿಮ್ಮದು ಯಾವ ಪಾತ್ರ? ಕೃಷ್ಣಾನಾ? ಅರ್ಜುನನಾ?
          ನಾನು ಕೃಷ್ಣನ ಪಾತ್ರ ವಹಿಸಬೇಕೋ, ಅರ್ಜುನನ ಪಾತ್ರ ವಹಿಸಬೇಕೋ ಅನ್ನೋದು ದೇವರ ಮುಂದೆ ಬೇಡಿಕೊಂಡಿದ್ದು, ಭಕ್ತನಿಗೂ ಮತ್ತು ಭಗವಂತನಿಗೂ ಬಿಟ್ಟ ವಿಚಾರ. ಅದನ್ನು ನಾನು ಸಾರ್ವಜನಿಕವಾಗಿ ಹೇಳುವುದಿಲ್ಲ. ಕನಕನ ಕಿಂಡಿಯಿಂದಲೂ ಕೃಷ್ಣನನ್ನು ನೋಡಿಕೊಂಡು ಬಂದಿದ್ದೇನೆ. ಕೃಷ್ಣ ಮಠದ ಅರ್ಚಕರು ಹೇಗೆ ಆಶೀರ್ವಾದ ಮಾಡಿದ್ದಾರೆ ಗೊತ್ತಾ? ಅರ್ಚಕಸ್ಯ ಪ್ರಭಾವೀನ ಶಿಲಾದೊºàತಿ ಶಂಕರ (ಅರ್ಚಕನ ಪ್ರಭಾವದಿಂದ ಶಿಲೆಯಲ್ಲಿಯೂ ಶಂಕರ ಕಾಣುತ್ತಾನಂತೆ ) ಸ್ವಾಮೀಜಿಗಳು ಕೃಷ್ಣನ ವಾಣಿಯನ್ನು ಬಂದು ನನ್ನ ಕಿವಿಯಲ್ಲಿ ಹೇಳಿದ್ದಾರೆ.

ನೀವೇ ಅರ್ಜುನ ಎಂದು ಹೇಳಿದ್ದಾರಾ?
        ಅದನ್ನ ನನ್ನ ಬಾಯಿಲೇ ಯಾಕೆ ಕೇಳುತ್ತೀರಾ? ಅಲ್ಲಿದ್ದವರನ್ನು ಕೇಳಿ, ನಾನು ಎಷ್ಟು ಆನಂದದಿಂದ ಬಂದಿದ್ದೇನೆ ಎನ್ನುವುದು ನನಗೆ ಗೊತ್ತು. ಎಷ್ಟು ಶಕ್ತಿ ಬಂದಿದೆ ಎಂದು ನನಗೆ ಗೊತ್ತಿದೆ.

ಒಂದೊಮ್ಮೆ ಅತಂತ್ರ ಫ‌ಲಿತಾಂಶ ಬಂದರೆ ಕಾಂಗ್ರೆಸ್‌ ಜೆಡಿಎಸ್‌ ಜತೆ ಹೋಗಲ್ವಾ?
        ಅತಂತ್ರಾನೇ ಆಗೋದಿಲ್ಲವಲ್ಲಾ. ಮೂವತ್ತು ಸೀಟು ಇಟ್ಟುಕೊಂಡು ಕುಮಾರಸ್ವಾಮಿ 120 ಸ್ಥಾನ ಗೆಲ್ಲುತ್ತೇನೆ ಎನ್ನುತ್ತಿರುವಾಗ, 135 ಶಾಸಕರನ್ನು ಇಟ್ಟುಕೊಂಡಿರುವ ನಾವೆಷ್ಟು ಮಾತನಾಡಬೇಕು. ನಾವೇ ಸ್ಪಷ್ಟ ಬಹುಮತ ಪಡೆಯುತ್ತೇವೆ. ಇದು ನಿಶ್ಚಿತ.

– ಶಂಕರ್‌ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next