Advertisement

Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ

12:35 PM May 01, 2024 | Team Udayavani |

ವಿಜಯಪುರ: ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯದಲ್ಲಿ ಭೀಕರ ಬರ ಆವರಿಸಿದರೂ 7 ತಿಂಗಳಾದರೂ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಸಿಟ್ಟು, ಪ್ರತಿಕಾರವೇ ಕಾರಣ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

Advertisement

ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಸಿಟ್ಟನ್ನು ರಾಜ್ಯದ ರೈತರ ಮೇಲೆ ತೀರಿಸಿಕೊಳ್ಳುವುದಕ್ಕಾಗಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಕರ್ನಾಟಕ ರಾಜ್ಯದ ಬಗ್ಗೆ ಅಸಡ್ಡೆ ಹೊಂದಿದ್ದಾರೆ ಎಂದು ದೂರಿದರು.

ರಾಜ್ಯದಿಂದ 4.34 ಲಕ್ಷ ಕೋಟಿ ಹಣವನ್ನು ಕೇಂದ್ರಕ್ಕೆ ತೆರಿಗೆ ಕಟ್ಟಿದರೂ 1 ರೂಪಾಯಿಯಲ್ಲಿ 13 ಪೈಸೆ ಮಾತ್ರ ಬರುತ್ತಿದೆ. ಇದನ್ನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಜನತೆಯ ಮುಂದೆ ತೆರೆದಿಟ್ಟಿದ್ದಾರೆ ಎಂದರು.

ಉತ್ತರ ಭಾರತದ ರಾಜ್ಯಗಳಿಗೆ ಅನುದಾನ ನೀಡಿಕೆಯಲ್ಲಿ ತೋರುವ ಧಾರಾಳತನ ನಮ್ಮ ರಾಜಕ್ಕೆ ಸಿಗುತ್ತಿಲ್ಲ. ಕರ್ನಾಟಕ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿದರೂ, ಕೇಂದ್ರ ಸಚಿವರನ್ನು ಭೇಟಿ ಮಾಡಿ ಕೋರಿಕೊಂಡರೂ ಸ್ಪಂದಿಸಲಿಲ್ಲ ಎಂದು ದೂರಿದರು.

ಕಳೆದ ಹತ್ತು ವರ್ಷಗಳ ಆಡಳಿತದಲ್ಲಿ ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳುತ್ತಲೇ ಬಂದಿದ್ದಾರೆ. ರಾಜ್ಯದ ತೆರಿಗೆ ಪಾಲಿನ ಹಣ, ಕೃಷ್ಣಾ ನ್ಯಾಯಾಧೀಕರಣದ ತೀರ್ಪಿನ ಅಧಿಸೂಚನೆ ಹೊರಡಿಸುವ ವಿಷಯ, ಬರ ಪರಿಹಾರ ನೀಡಿಕೆ ಸೇರಿದಂತೆ ಕರ್ನಾಟಕ ರಾಜ್ಯಕ್ಕೆ ಕೇಂದ್ರದಿಂದ ಆಗಿರುವ ಯಾವುದೇ ಅನ್ಯಾಯದ ಕುರಿತು ರಾಜ್ಯದ ಬಿಜೆಪಿ ಸಂಸಸದರು ಬಾಯಿ ತೆರೆದಿಲ್ಲ ಎಂದು ವಾಗ್ದಾಳಿ ನಡೆಸಿದರು.

Advertisement

2008 ರಲ್ಲಿ ಕಂಠೀರವ ಮೈದಾನದ ಬಳಿ ಸ್ಫೋಟವಾದಾಗ, 2020 ರಲ್ಲಿ ಸ್ಫೋಟ ನಡೆದಾಗ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದರು. 2013 ರಲ್ಲಿ ಮಲ್ಲೇಶ್ವರಂ ನಲ್ಲಿ ಸ್ಫೋಟ ನಡೆದಾಗ ಜಗದೀಶ ಶಟ್ಟರ ಮುಖ್ಯಮಂತ್ರಿ ಆಗಿದ್ದರು. 2022 ಬಾಂಬ್ ಸ್ಫೋಟದ ಸಂದರ್ಭದಲ್ಲಿ ಮುಖ್ಯಮಂತ್ರಿ ಆಗಿದ್ದವರು ಬಸವರಾಜ ಬೊಮ್ಮಾಯಿ. 2010 ರಲ್ಲೂ ಬಾಂಬ್ ಸ್ಫೋಟ ಕೃತ್ಯವಾದಾಗಲೂ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿ ಇತ್ತು. ಈಗ ರಾಮೇಶ್ವರಂ ಕೆಫೆ ಸ್ಫೋಟದ ಘಟನೆಯನ್ನು ಉಲ್ಲೇಖಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕೆ ಮಾಡುವ ಪ್ರಧಾನಿ ನರೇಂದ್ರ ಮೋದಿ ಹಿಂದಿನ ಸ್ಫೋಟ ಕೃತ್ಯಗಳು ಸಂಭವಿಸಿದಾಗ ಯಾವ ಪಕ್ಷದ ಸರ್ಕಾರದ ಅಧಿಕಾರದಲ್ಲಿ ಇತ್ತು ಎಂಬುದನ್ನು ಹೇಳಲಿ ಎಂದು ಸವಾಲು ಹಾಕಿದರು.

ಜಗತ್ತಿನ ಅತಿ ಸುಳ್ಳುಗಾರ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ರಾಮಲಿಂಗಾರೆಡ್ಡಿ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 200 ಸ್ಥಾನಗಳಲ್ಲಿ ಗೆಲ್ಲುವುದು ಕಷ್ಟ. ಏಕೆಂದರೆ ಮೋದಿ ಜನಯಪ್ರಿಯತೆ ಕಳೆದುಕೊಂಡಿದ್ದು, ಅವರ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ. ಖಾಲಿಕುರ್ಚಿಗಳೇ ರಾರಾಜಿಸುತ್ತವೆ ಎಂಬ ಕಾರಣಕ್ಕೆ ಮೋದಿ ಬೆಂಗಳೂರಿಗೆ ಬರುವಾಗ ಜನರನ್ನು ಕರೆದುಕೊಂಡು ಬರುತ್ತಾರೆ ಎಂದು ಕುಟುಕಿದರು.

Advertisement

Udayavani is now on Telegram. Click here to join our channel and stay updated with the latest news.

Next