Advertisement

ಕಣ ದರ್ಪಣ –ಮೈಸೂರು : ಸಿಎಂ ತವರಲ್ಲಿ ಕಾರ್ಮಿಕರು ಬೀದಿಪಾಲು

09:15 AM Mar 16, 2018 | Team Udayavani |

ಸತತ ಬರ, ರೋಗಗ್ರಸ್ತ ಕಾರ್ಖಾನೆಗಳು ಜಿಲ್ಲೆಯ ಜನರ ಜೀವನವನ್ನು ಕಿತ್ತು ತಿನ್ನುತ್ತಿದ್ದು, ಕಳೆದ ಮೂರು ವರ್ಷಗಳಿಂದ ಸತತ ಬರ ಎದುರಿಸುತ್ತಿರುವುದರಿಂದ ಜಿಲ್ಲೆಯ ಎಲ್ಲಾ 7 ತಾಲೂಕುಗಳನ್ನು ಬರ ಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ. ಜತೆಗೆ ಮೈಸೂರಿನ ಕೈಗಾರಿಕಾ ಪ್ರದೇಶಗಳಲ್ಲಿನ ಕಾರ್ಖಾನೆಗಳು ರೋಗಗ್ರಸ್ತವಾಗುತ್ತಿದ್ದು, ಉದ್ಯೋಗ ಕಳೆದುಕೊಂಡು ಬೀದಿ ಪಾಲಾಗುತ್ತಿರುವ ಕಾರ್ಮಿಕರ ಬದುಕು ದುಸ್ತರವಾಗತೊಡಗಿದೆ. 2  ವರ್ಷಗಳಿಂದ ಮುಚ್ಚಲ್ಪಟ್ಟಿರುವ ಫಾಲ್ಕನ್‌ ಟೈರ್ ಒಂದರಲ್ಲೇ 2,500 ಕಾರ್ಮಿಕರು ಅತಂತ್ರರಾಗಿದ್ದಾರೆ. ಹೀಗಾಗಿ ಸಾಕಷ್ಟು ಜನ ಉದ್ಯೋಗ ಅರಸಿ ಬೇರೆ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ವರ್ಷಗಳಲ್ಲಿ ತವರು ಜಿಲ್ಲೆಗೆ ಆಸಕ್ತಿ ವಹಿಸಿ ಬಹಳಷ್ಟು ಕೆಲಸಗಳನ್ನು ಮಾಡಿದ್ದಾರೆ. ಆದರೆ, ಮಾಡಬೇಕಾದ್ದು ಇನ್ನೂ ಬಹಳಷ್ಟಿದೆ.

Advertisement

ಸತತ ಬರಗಾಲದಿಂದಾಗಿ ಮಳೆ ಆಶ್ರಿತ ರೈತರು ಬೆಳೆ ಬೆಳೆಯಲಾರದೆ ಪರಿತಪಿಸುತ್ತಿದ್ದರೆ, ಮಳೆ ಅಭಾವದಿಂದಾಗಿ ಜಲಾಶಯಗಳೂ ತುಂಬದಿರುವುದರಿಂದ ನೀರಾವರಿ ಪ್ರದೇಶದ ಮೇಲೂ ಅದರ ಪರಿಣಾಮ ಬೀರಿದೆ. ಕೆಆರ್‌ಎಸ್‌ ಜಲಾಶಯದಿಂದ ಮೈಸೂರು ತಾಲೂಕಿನ ಬಹುತೇಕ ಗ್ರಾಮಗಳ ಜಮೀನುಗಳಿಗೆ ನೀರುಣಿಸುವ ವರುಣಾ ನಾಲೆಯಲ್ಲಿ ನೀರು ಹರಿಯುತ್ತಿಲ್ಲ. ಪಕ್ಕದ ಜಿಲ್ಲೆ ಕೊಡಗಿನ ಹಾರಂಗಿ ಜಲಾಶಯದ ಬಲದಂಡೆ ನಾಲೆ ಜಿಲ್ಲೆಯ ಪಿರಿಯಾಪಟ್ಟಣ, ಕೆ.ಆರ್‌.ನಗರ, ಹುಣಸೂರು ತಾಲೂಕಿನಲ್ಲಿ ನೀರುಣಿಸುತ್ತಿತ್ತು. ಆ ನಾಲೆಯಲ್ಲೂ ನೀರು ಹರಿದಿಲ್ಲ. ಇನ್ನು ಕಬಿನಿ, ತಾರಕ, ನುಗು 3 ಜಲಾಶಯಗಳನ್ನು ಹೊಂದಿರುವ ಎಚ್‌.ಡಿ.ಕೋಟೆ ತಾಲೂಕಿನಲ್ಲಿ ಒಂದು ಎಕರೆಯೂ ನೀರಾವರಿ ಆಗಿಲ್ಲ. ಕಾಲುವೆಗಳಲ್ಲಿ ನೀರು ಹರಿಯದ ಪರಿಣಾಮ ಕೆ.ಆರ್‌.ನಗರ, ತಿ.ನರಸೀಪುರ ಹಾಗೂ ನಂಜನಗೂಡುಗಳಲ್ಲಿ ಭತ್ತದ ಬೆಳೆಗೆ ಹೊಡೆತ ಬಿದ್ದಿದೆ.

ಇನ್ನು ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ವರ್ಜೀನಿಯಾ ತಂಬಾಕನ್ನು ಪಿರಿಯಾಪಟ್ಟಣ, ಹುಣಸೂರು, ಎಚ್‌.ಡಿ.ಕೋಟೆ ಹಾಗೂ ಕೆ.ಆರ್‌.ನಗರ ತಾಲೂಕಿನ ಕೆಲ ಪ್ರದೇಶದಲ್ಲಿ ಬೆಳೆಯಲಾಗುತ್ತದಾದರೂ ಮಳೆ ಅಭಾವದಿಂದ ತಂಬಾಕು ಇಳುವರಿಯಲ್ಲೂ ಕುಂಠಿತವಾಗಿದೆ. ಮತ್ತೂಂದು ವಾಣಿಜ್ಯ ಬೆಳೆ ಹತ್ತಿ ರೈತನ ಕೈಗೆ ಸಿಕ್ಕಿಲ್ಲ. ಇದರ ಪರಿಣಾಮ ಬಹುತೇಕ ರೈತರು ಕೃಷಿ ತ್ಯಜಿಸಿ, ಹೊಟ್ಟೆಪಾಡಿಗೆ ಬೇರೆ ಬೇರೆ ಉದ್ಯೋಗಗಳನ್ನು ಅರಸಿ ನಗರಗಳಿಗೆ ವಲಸೆ ಬರುತ್ತಿದ್ದರೆ, ಮೈಸೂರು ತಾಲೂಕಿನ ಬಹುತೇಕ ಹಳ್ಳಿಗಳ ರೈತರು ಮೈಸೂರಿನಲ್ಲಿ ರಸ್ತೆ ಬದಿ ವ್ಯಾಪಾರ ಮಾಡುತ್ತಾ ಜೀವನ ಸಾಗಿಸುವಂತಾಗಿದೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮಾನ್ಯತೆ ನವೀಕರಣಕ್ಕೆ ಇಚ್ಛಾಶಕ್ತಿ ತೋರದಿರುವುದರಿಂದ ಈ ಭಾಗದ ಸಾವಿರಾರು ಯುವ ಜನರ ಭವಿಷ್ಯ ಮಂಕಾಗಿದೆ. ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕ ಕುಡಿಯುವ ನೀರು ಒದಗಿಸಲು ಕೈಗೊಂಡಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಕುಂಟುತ್ತಾ ಸಾಗಿವೆ. ಬೆಳೆಯುತ್ತಿರುವ ಮೈಸೂರು ನಗರಕ್ಕೂ ಸಮರ್ಪಕ ಕುಡಿಯುವ ನೀರು ಒದಗಿಸುವ ಯೋಜನೆಯನ್ನು ರೂಪಿಸಬೇಕಿದೆ.

ಈಡೇರದ ಬೇಡಿಕೆಗಳು
1. ಲ್ಯಾನ್ಸ್‌ಡೌನ್‌ ಕಟ್ಟಡದ ಅಭಿವೃದ್ಧಿ ಕಾಮಗಾರಿ
2. ಪಾರಂಪರಿಕ ಶೈಲಿಯಲ್ಲಿ ದೇವರಾಜ ಮಾರುಕಟ್ಟೆ ಅಭಿವೃದ್ಧಿ
3. ಜಿಲ್ಲೆಯ ರೋಗಗ್ರಸ್ತ ಕಾರ್ಖಾನೆಗಳ ಪುನಶ್ಚೇತನ, ಉದ್ಯೋಗ ಸೃಷ್ಟಿ
4. ನಂಜನಗೂಡಿನಲ್ಲಿ ಊಟಿ ಮಾದರಿಯ ಬಟಾನಿಕಲ್‌ ಗಾರ್ಡನ್‌
5. ಮೈಸೂರು ನಗರಕ್ಕೆ ಸಮರ್ಪಕ ಕುಡಿಯುವ ನೀರಿನ ಯೋಜನೆ ರೂಪಿಸಬೇಕು.
6. ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಪಾರಂಪರಿಕ ನಗರ ಘೋಷಣೆ

Advertisement

ಈಡೇರಿದ ಬೇಡಿಕೆಗಳು
1. ಹಳೆಯದಾದ ಮಹಾರಾಣಿ ಮಹಿಳಾ ಕಾಲೇಜಿಗೆ ಹೊಸ ಕಟ್ಟಡ ನಿರ್ಮಾಣ
2. ದೊಡ್ಡಾಸ್ಪತ್ರೆ ಮೇಲಿನ ಒತ್ತಡ ಕಡಿಮೆ ಮಾಡಲು ನೂತನ ಜಿಲ್ಲಾಸ್ಪತ್ರೆಗೆ ಶಂಕು
3. 350 ಹಾಸಿಗೆ ಸಾಮರ್ಥ್ಯದ ಶ್ರೀ ಜಯ ದೇವ ಹೃದ್ರೋಗ ಆಸ್ಪತ್ರೆ ನೂತನ ಕಟ್ಟಡ
4. ಜಿಲ್ಲಾಡಳಿತದ ಎಲ್ಲಾ ಇಲಾಖಾ ಕಚೇರಿಗಳನ್ನೂ ಒಂದೆಡೆ ತರಲು ನೂತನ ಜಿಲ್ಲಾಡಳಿತ ಕಚೇರಿ ಸಂಕೀರ್ಣ
5. ಸರಗೂರು ನೂತನ ತಾಲೂಕು ರಚನೆ ಘೋಷಣೆ
6. ನಗರ ಪೊಲೀಸ್‌ ಆಯುಕ್ತರ ನೂತನ ಕಚೇರಿ, ಕುಪ್ಪಣ್ಣ  ಪಾರ್ಕ್‌ನಲ್ಲಿ ಗಾಜಿನ ಮನೆ

ಈ ಬಾರಿಯ ಬೇಡಿಕೆಗಳು
– ತಂಬಾಕು ಬೆಳೆಗಾರರಿಗೆ ಪರ್ಯಾಯ ಬೆಳೆ ಪದ್ಧತಿ ಅಳವಡಿಕೆಗೆ ಉತ್ತೇಜನ ಕಾರ್ಯಕ್ರಮ
– ರೈತರು ಬೆಳೆದು ತರುವ ಹೂ, ಹಣ್ಣು-ತರಕಾರಿಗೆ ಸಮರ್ಪಕ ಮಾರುಕಟ್ಟೆ ಕಲ್ಪಿಸುವಿಕೆ
– ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯ, ಬಹುಗ್ರಾಮ ಕುಡಿಯುವ ನೀರು ಯೋಜನೆ ಜಾರಿ
– ಮೈಸೂರು ಪಾರಂಪರಿಕ ನಗರವೆಂದು ಘೋಷಣೆ
– ಜಿಲ್ಲೆಯ ಕೈಗಾರಿಕೆಗಳ ಪುನಶ್ಚೇತನ ಕಾರ್ಯಕ್ಕೆ ಆದ್ಯತೆ 
– ಸಂರಕ್ಷಿತ ಅರಣ್ಯಗಳಿಂದ ಹೊರಬಂದ ಆದಿವಾಸಿಗಳಿಗೆ ಸಮರ್ಪಕ ಭೂಮಿ ಹಂಚಿಕೆ, ಪ್ಯಾಕೇಜ್‌ ಅನುಷ್ಠಾನ

30ಲಕ್ಷ : ಜಿಲ್ಲೆಯ ಒಟ್ಟು ಜನಸಂಖ್ಯೆ
24.32ಲಕ್ಷ : ಜಿಲ್ಲೆಯ ಒಟ್ಟು ಮತದಾರರು
11 ವಿಧಾನಸಭಾ ಒಟ್ಟು ಕ್ಷೇತ್ರಗಳು

ಜಿಲ್ಲೆಯ ಸಚಿವರು : ಎಚ್‌.ಸಿ. ಮಹದೇವಪ್ಪ(ಉಸ್ತುವಾರಿ ಸಚಿವ), ತನ್ವೀರ್‌ ಸೇಠ್
ಕುತೂಹಲದ ಕ್ಷೇತ್ರ : ಸಿಎಂ ಸ್ಪರ್ಧಿಸಲಿರುವ ಚಾಮುಂಡೇಶ್ವರಿ ಕ್ಷೇತ್ರ

ಪೈಪೋಟಿ ಹೇಗಿದೆ?
10 ಕ್ಷೇತ್ರಗಳಲ್ಲಿ ಕಾಂಗ್ರೆಸ್‌- ಬಿಜೆಪಿ ಹಾಗೂ ಜೆಡಿಎಸ್‌ ಮಧ್ಯೆ ತ್ರಿಕೋನ ಸ್ಪರ್ಧೆ. ನಂಜನಗೂಡಲ್ಲಿ ಕಾಂಗ್ರೆಸ್‌-ಬಿಜೆಪಿ ನಡುವೆ ನೇರ ಹಣಾಹಣಿ.

5  ವರ್ಷಗಳಲ್ಲಿ ಜಿಲ್ಲೆಯಲ್ಲಿ 5 ಸಾವಿರ ಕೋಟಿ ರೂ. ವೆಚ್ಚದ ಅಭಿವೃದ್ಧಿ ಮಾಡಿದ್ದೇವೆ. ಒಡೆಯರ್‌ ಆಳ್ವಿಕೆ ನಂತರ ಇದೇ ಮೊದಲ ಬಾರಿಗೆ ಮೈಸೂರು ಇಷ್ಟೊಂದು ಅಭಿವೃದ್ಧಿಯಾಗಿದೆ. 
– ಡಾ.ಎಚ್‌.ಸಿ.ಮಹದೇವಪ್ಪ, ಉಸ್ತುವಾರಿ ಸಚಿವ

ಮೈಸೂರು ಜಿಲ್ಲೆಯ ಅಭಿವೃದ್ಧಿಗೆ ಮಹಾರಾಜರು ನೂರಾರು ಕೊಡುಗೆ ಕೊಟ್ಟಿದ್ದಾರೆ. ಮಹಾರಾಜರ ಅನಂತರ ನಾನೇ ಮೈಸೂರು ಅಭಿವೃದ್ಧಿ ಮಾಡಿದ್ದು ಎಂದು ಸಿಎಂ ಹೇಳಿದ್ದು ಕೇಳಿ ಜನ ನಗುತ್ತಾರೆ.
– ಎಂ.ಶಿವಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ

ಕಾಂಕ್ರೀಟ್‌ ರಸ್ತೆ, ಕಟ್ಟಡ ಕಟ್ಟುವುದೇ ಅಭಿವೃದ್ಧಿಯಲ್ಲ. ಸಮಾಜದ ಎಲ್ಲ ವರ್ಗಗಳ‌ ಸ್ಥಿತಿ ಸುಧಾರಣೆಯಾದಾಗ ಅಭಿವೃದ್ಧಿ ಅನ್ನಬಹುದು. ಸಿಎಂ ತವರು ಜಿಲ್ಲೆಯಲ್ಲಿ ಜನರ ನಿರೀಕ್ಷೆಯಷ್ಟು ಕೆಲಸಗಳಾಗಿಲ್ಲ.
– ನರಸಿಂಹಸ್ವಾಮಿ, ಜೆಡಿಎಸ್‌ ಜಿಲ್ಲಾಧ್ಯಕ್ಷ

— ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next