ಬೀದರ: ನಗರವನ್ನು ಪ್ಲಾಸ್ಟಿಕ್ ಮತ್ತು ಕಸಮುಕ್ತವಾಗಿಸುವ ಕಾರ್ಯಕ್ಕೆ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ನಗರ ಸಭೆ ಅಧ್ಯಕ್ಷೆ ಶಾಲಿನಿ ರಾಜು ಚಿಂತಾಮಣಿ ಹೇಳಿದರು.
ನಗರದ ಸಿದ್ಧಾರ್ಥ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಗುರುವಾರ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಚ್ಛತೆ ಕಾಪಾಡಲು ಯುವಕ ಯುವತಿಯರು ಜವಾಬ್ದಾರಿಯುತರಾಗಿ ಕೆಲಸ ನಿರ್ವಹಿಸಬೇಕು. ಸ್ವ-ಇಚ್ಛೆಯಿಂದ ಪ್ಲಾಸ್ಟಿಕ್ ಬಳಸುವುದನ್ನು ನಿಲ್ಲಿಸಬೇಕು. ಹಾಗೆಯೇ ವಿದ್ಯಾವಂತರು ತಮ್ಮ ಸುತ್ತಲಿನ ಜನರಿಗೆ ಶೌಚಾಲಯ ಮತ್ತು ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಬೇಕು. ಹೀಗಾದಲ್ಲಿ ಮಾತ್ರ ಸ್ವಚ್ಛ ಭಾರತ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಸ್ವಚ್ಛತೆಯ ನಿರ್ವಹಣೆ ಕೇವಲ ಸರ್ಕಾರದ ಜವಾಬ್ದಾರಿ ಎಂದು ಭಾವಿಸದೇ, ತಮ್ಮ ಮನೆ ಮತ್ತು ಓಣಿಗಳಿಂದ ಸ್ವಚ್ಛತಾ ಅಭಿಯಾನ ಆರಂಭಿಸಬೇಕು ಎಂದ ಅವರು, ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಎದುರಾಗಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗುವ ಸಾಧ್ಯತೆ ಇರುವುದರಿಂದ ಪ್ರತಿಯೊಬ್ಬರು ನೀರನ್ನು ಮಿತವಾಗಿ ಬಳಕೆ ಮಾಡಬೇಕು ಎಂದು ಕೋರಿದರು.
ಸ್ವಚ್ಛ ಭಾರತ ಅಭಿಯಾನದ ಜಿಲ್ಲಾ ನೋಡಲ್ ಅಧಿಕಾರಿ ಡಾ| ಗೌತಮ ಅರಳಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯಗಳನ್ನು ಬಳಕೆ ಮಾಡದೇ ಇರುವುದರಿಂದ ಸಾಕಷ್ಟು ಮಹಿಳೆಯರು ಹಾವು ಕಡಿತ, ಲೈಂಗಿಕ ದೌರ್ಜನ್ಯದಂತಹ ಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಶೌಚಾಲಯದ ಕುರಿತು ಅರಿವು ಮೂಡಿಸಿ ಇಂತಹ ಅವಘಡಗಳು ಸಂಭವಿಸದಂತೆ ನೋಡಿಕೊಳ್ಳಬೇಕಿದೆ ಎಂದು ಹೇಳಿದರು.
ಕಾಲೇಜು ಪ್ರಾಂಶುಪಾಲ ಡಾ| ಎಂ.ಎಸ್.ಖರ್ಗೆ ಮಾತನಾಡಿ, ಸ್ವಚ್ಛ ಭಾರತ ಅಭಿಯಾನ ಕುರಿತು ವಿವರಣೆ ನೀಡಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಚೇಂದ್ರ ವಾಘಮೋರೆ, ಎನ್‌ಎಸ್‌ಎಸ್ ಅಧಿಕಾರಿ ಜಗನ್ನಾಥ ಬಡಿಗೇರ, ಉಪ ಪ್ರಾಚಾರ್ಯ ಡಾ| ರಾಜನಾಳೆ ಅನೀಲಕುಮಾರ, ವಾರ್ತಾ ಇಲಾಖೆಯ ತನ್ವೀರ ಇಕ್ಬಾಲ್, ಬಿಂದುಸಾರ್ ಧನ್ನೂರ್, ಕನ್ನಡ ವಿಭಾಗದ ಪ್ರೊ| ರಾಜಕುಮಾರ ಸಿಂಧೆ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು. ಬಳ್ಳಾರಿ ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ರಾಮಕೃಷ್ಣಪ್ಪ ಸ್ವಾಗತಿಸಿದರು. ಕಲಬುರಗಿ ಕಾರ್ಯಾಲಯದ ನಾಗಪ್ಪ ಅಂಬಾಗೋಳ ವಂದಿಸಿದರು. ಕಲಬುರಗಿ-ಬಳ್ಳಾರಿ ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯ, ನಗರ ಸಭೆ, ಶಿಶು ಅಭಿವೃದ್ಧಿ ಯೋಜನೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.