Advertisement

Renukaswamy ಹಲ್ಲೆ ಮಾಡಿದ್ದು ನಿಜ: ನಟ ದರ್ಶನ್‌ ತಪ್ಪೊಪ್ಪಿಗೆ

12:43 AM Sep 10, 2024 | Team Udayavani |

ಬೆಂಗಳೂರು: ಪ್ರೇಯಸಿ ಪವಿತ್ರಾ ಗೌಡಳಿಗೆ ಅಶ್ಲೀಲ ಸಂದೇಶ ಕಳುಹಿಸುವುದರ ಜತೆಗೆ ಲೈಂಗಿಕ ಕ್ರಿಯೆಗೆ ಆಹ್ವಾನ ನೀಡಿದ್ದಕ್ಕೆ ಕೋಪಗೊಂಡು ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾಗಿ ನಟ ದರ್ಶನ್‌ ತಪ್ಪೊಪ್ಪಿಕೊಂಡಿದ್ದಾನೆ.

Advertisement

ಈ ಅಂಶವನ್ನು ದರ್ಶನ್‌ ತನ್ನ ಸ್ವ-ಇಚ್ಛಾ ಹೇಳಿಕೆಯಲ್ಲೂ ದಾಖಲಿಸಿದ್ದಾನೆ ಎಂಬುದನ್ನು ಪೊಲೀಸರು ಕೋರ್ಟ್‌ಗೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಪವಿತ್ರಾ ಗೌಡ ತನ್ನೊಂದಿಗೆ 10 ವರ್ಷಗಳಿಂದ ಸಹಜೀವನ ನಡೆಸುತ್ತಿದ್ದು, ಆರ್‌.ಆರ್‌.ನಗರದಲ್ಲಿ ರುವ ತನ್ನ ಮನೆಯಿಂದ ಒಂದೂವರೆ ಕಿ.ಮೀ. ದೂರದಲ್ಲಿರುವ ಮನೆಯಲ್ಲಿ ವಾಸವಾಗಿದ್ದಾಳೆ ಎಂದು ದರ್ಶನ್‌ ಹೇಳಿದ್ದಾನೆ.

ಜೂ. 8ರಂದು ಸ್ಟೋನಿ ಬ್ರೂಕ್‌ ರೆಸ್ಟೋರೆಂಟ್‌ನಲ್ಲಿ ಚಿಕ್ಕಣ್ಣ, ಯಶಸ್‌ ಸೂರ್ಯ ಹಾಗೂ ಇತರರ ಜತೆ ಕುಳಿತುಕೊಂಡಿದ್ದಾಗ ಮನೆ ಕೆಲಸಗಾರ ಪವನ್‌ ಬಂದು ಮೊಬೈಲ್‌ ತೋರಿಸಿ, ಅಕ್ಕನಿಗೆ (ಪವಿತ್ರಾ ಗೌಡ) ಗೌತಮ್‌ ಎಸ್‌. ಎಂಬ ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಮೂಲಕ ಸಂದೇಶ ಕಳುಹಿಸಿ, ತನ್ನ ಖಾಸಗಿ ಅಂಗಾಂಗಗಳ ಚಿತ್ರಗಳನ್ನು ಕಳುಹಿಸಿದ್ದಾನೆ. ಜತೆಗೆ ಅಕ್ಕನಿಗೆ, ತೀರಾ ಅಶ್ಲೀಲವಾದ ಸಂದೇಶಗಳನ್ನು ರವಾನಿಸಿರುವ ರೇಣುಕಾಸ್ವಾಮಿ ಎಂಬಾತ ನನ್ನು ರಾಘವೇಂದ್ರ ಮತ್ತು ಆತನ ಸ್ನೇಹಿತರು ಅಪಹರಿಸಿ, ಪಟ್ಟಣಗೆರೆ ಶೆಡ್‌ಗೆ ಕರೆತಂದಿದ್ದಾರೆ ಎಂದು ಹೇಳಿದ್ದ. ಹೀಗಾಗಿ ವಿನಯ್‌, ಪ್ರದೋಷ್‌ ಹಾಗೂ ಮನೆಯಲ್ಲಿದ್ದ ಪವಿತ್ರಾ ಗೌಡ ಜತೆ ಕೂಡಲೇ ಶೆಡ್‌ಗೆ ತೆರಳಿದ್ದು, ಅದಾಗಲೇ ರಾಘವೇಂದ್ರ ಹಾಗೂ ಇತರರು ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದರು ಎಂದು ದರ್ಶನ್‌ ಹೇಳಿದ್ದಾನೆ.

ತಲೆ, ಕುತ್ತಿಗೆ, ಎದೆಗೆ ಒದೆದಿದ್ದೆಚಾಟಿಂಗ್‌ ತೋರಿಸಿ ಇದನ್ನು ಕಳುಹಿಸಿದ್ದು ನೀನೇನಾ ಎಂದು ರೇಣುಕಾಸ್ವಾಮಿಯನ್ನು ಕೇಳಿದ್ದೆ. ಆತ ಹೌದು ಎಂದಿದ್ದ. ಇದೆಲ್ಲ ನಿನಗೆ ಬೇಕಾ? ನಿನ್ನ ಸಂಬಳ ಎಷ್ಟು ಎಂದು ಕೇಳಿದೆ.

Advertisement

20 ಸಾ.ರೂ. ಎಂದು ಹೇಳಿದ. ನಿನಗೆ ತಿಂಗಳಿಗೆ 20 ಸಾ. ರೂ. ಸಂಬಳ. ನನ್ನ ಮಗನೇ, ನೀನು ಇವಳನ್ನು ನಿಭಾಯಿಸಲು ಸಾಧ್ಯವಾ? ಈ ರೀತಿ ಕೆಟ್ಟದಾಗಿ ಮೆಸೇಜ್‌ ಮಾಡಿದ್ದಿಯಲ್ಲ ಎಂದು ಕೇಳಿದಾಗ ಆತ ಮಾತನಾಡಲಿಲ್ಲ. ಇದರಿಂದ ಕೋಪ ಗೊಂಡು ನಾನು ಕೈಯಿಂದ ಹೊಡೆದು, ಕಾಲಿನಿಂದ ಆತನ ತಲೆ, ಕುತ್ತಿಗೆ ಮತ್ತು ಎದೆಯ ಭಾಗಕ್ಕೆ ಒದೆದೆ. ಅಲ್ಲಿಯೇ ಇದ್ದ ಮರದ ಕೊಂಬೆಯನ್ನು ಮುರಿದು ಹೊಡೆದೆ. ಬಳಿಕ ಪವಿತ್ರಾ ಗೌಡಳನ್ನು ಕರೆಸಿಕೊಂಡು, ನೋಡು ನೀನು ಮೆಸೇಜ್‌ ಮಾಡುತ್ತಿದ್ದದ್ದು ಇವಳಿಗೇನೇ ಎಂದು ಹೇಳಿ, ಚಪ್ಪಲಿಯಿಂದ ಹೊಡೆಯುವಂತೆ ಪವಿತ್ರಾ ಗೌಡಳಿಗೆ ಹೇಳಿದೆ. ಆಕೆ ಹೊಡೆದಳು.

ಆಕೆಯ ಕಾಲಿಗೆ ಬಿದ್ದು ಕ್ಷಮೆ ಕೇಳುವಂತೆ ಹೇಳಿದಾಗ, ಆತ ಪವಿತ್ರಾ ಕಾಲಿಗೆ ಬಿದ್ದ. ಆಗ ಆಕೆ ಹೆದರಿ ಹಿಂದೆ ಹೋದಳು. ಬಳಿಕ ಆಕೆಯನ್ನು ಮನೆಗೆ ಬಿಡುವಂತೆ ವಿನಯ್‌ಗೆ ಹೇಳಿದೆ. ಅದೇ ವೇಳೆ ಸ್ಥಳಕ್ಕೆ ಬಂದ ಕಾರು ಚಾಲಕ ಲಕ್ಷ್ಮಣ್‌ ಕೂಡ ರೇಣುಕಾಸ್ವಾಮಿಗೆ ಹೊಡೆದ. ಬಳಿಕ ನಂದೀಶ್‌ ರೇಣುಕಾಸ್ವಾಮಿಯನ್ನು ಬಲವಾಗಿ ಎತ್ತಿ ಒಂದು ಬಾರಿ ನನ್ನ ಮುಂದೆ ಕುಕ್ಕಿದ.
ಅನಂತರ ಇನ್ಯಾರಿಗೆ ಕೆಟ್ಟದಾಗಿ ಸಂದೇಶ ಕಳುಹಿಸಿದ್ದಾನೆ ನೋಡು ಎಂದು ಪವನ್‌ಗೆ ಹೇಳಿದಾಗ, ಆತ ರೇಣುಕಾಸ್ವಾಮಿಯ ಮೊಬೈಲ್‌ ಪರಿಶೀಲಿಸಿದ. ಆಗ ಹತ್ತಾರು ಮಂದಿ ನಟಿಯರಿಗೆ ಅಶ್ಲೀಲ ಸಂದೇಶ ಹಾಗೂ ಫೋಟೋಗಳನ್ನು ಕಳುಹಿಸಿರುವುದು ಪತ್ತೆಯಾಯಿತು. ಅದರಿಂದ ಕೋಪಗೊಂಡು ನಾನು ಮತ್ತೆ ಒದೆದೆ ಎಂದು ದರ್ಶನ್‌ ಹೇಳಿದ್ದಾನೆ.

ಪ್ರಕರಣ ಮುಚ್ಚಿಹಾಕಲು 40 ಲಕ್ಷ ರೂ. ಕೊಟ್ಟ ದರ್ಶನ್‌
ಅನಂತರ ನಾನು ಮತ್ತು ವಿನಯ್‌ ಸ್ಥಳದಿಂದ ಹೋದೆವು. ಸಂಜೆ 7.30ರ ಸುಮಾರಿಗೆ ಪ್ರದೋಷ್‌ ಮನೆ ಬಳಿ ಬಂದು ರೇಣುಕಾಸ್ವಾಮಿ ಸತ್ತು ಹೋಗಿದ್ದಾನೆ ಎಂದು ಹೇಳಿದ. ಏನಾಯಿತು, ನಾವು ಬರುವಾಗ ಆತ ಚೆನ್ನಾಗಿಯೇ ಇದ್ದನಲ್ಲ ಎಂದು ಹೇಳಿದೆ. ಆಗ ಪ್ರದೋಷ್‌, ನಾನು ಹ್ಯಾಂಡಲ್‌ ಮಾಡುತ್ತೇನೆ, 30 ಲಕ್ಷ ರೂ. ಕೊಡಿ ಎಂದ. ಆಗ ಮನೆಯಲ್ಲಿದ್ದ 30 ಲಕ್ಷ ರೂ.ಗಳನ್ನು ಕೊಟ್ಟು ಕಳುಹಿಸಿದೆ. ವಿನಯ್‌ಗೂ 10 ಲಕ್ಷ ರೂ. ಕೊಟ್ಟಿದ್ದೇನೆ. ಜೂ. 9ರಂದು ಮ್ಯಾನೇಜರ್‌ ನಾಗರಾಜ್‌ ಕರೆ ಮಾಡಿ, ನೀವು ಟೆನ್ಶನ್‌ ತಗೋಬೇಡಿ. ಕೆಲಸಕ್ಕೆ ಹೋಗಿ ಎಂದು ಹೇಳಿದ. ಜೂ. 10ರಂದು ಮೈಸೂರಿನ ರ್ಯಾಡಿಸನ್‌ ಹೊಟೇಲ್‌ಗೆ ಪ್ರದೋಷ್‌, ನಾಗರಾಜ್‌, ವಿನಯ್‌ ಬಂದು, ಧನರಾಜ್‌ ಕರೆಂಟ್‌ ಶಾಕ್‌, ಪವನ್‌ನಿಂದ ಹಲ್ಲೆ, ನಂದೀಶ್‌ ಎತ್ತಿ ಕುಕ್ಕಿದ್ದರಿಂದ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಲ್ಲದೆ, ಹಣ ಕೊಟ್ಟು ನಾವೇ ಯಾರನ್ನಾದರೂ ಫಿಕ್ಸ್‌ ಮಾಡುತ್ತೇವೆ ಎಂದು ಹೇಳಿದರು ಎಂದು ದರ್ಶನ್‌ ಹೇಳಿಕೆ ದಾಖಲಿಸಿದ್ದಾನೆ. ಬಳಿಕ ಜೂ. 11ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಜಿಮ್‌ ಮುಗಿಸಿ ಹೊಟೇಲ್‌ಗೆ ಬಂದಾಗ ಪೊಲೀಸರು ಬಂದು ಕೊಲೆ ಪ್ರಕರಣದಲ್ಲಿ ಬಂಧಿಸಿದರು ಎಂದಿದ್ದಾನೆ.

ಪವನ್‌ 8 ವರ್ಷಗಳಿಂದ ನನ್ನ ಮತ್ತು ಪವಿತ್ರಾ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ. ನಂದೀಶ್‌ ನನ್ನ ಅಭಿಮಾನಿ. ಲಕ್ಷ್ಮಣ್‌ ನನ್ನ ಕಾರು ಚಾಲಕ. ವಿನಯ್‌, ದೀಪಕ್‌ ಸ್ನೇಹಿತರು. ನಾಗರಾಜ್‌ ನನ್ನ ಮೈಸೂರಿನ ಫಾರ್ಮ್ ಹೌಸ್‌ ನೋಡಿಕೊಳ್ಳುತ್ತಾನೆ. ಪ್ರದೋಷ್‌ 16 ವರ್ಷಗಳಿಂದ ಸ್ನೇಹಿತ, ರಾಘವೇಂದ್ರ ಚಿತ್ರದುರ್ಗ ತನ್ನ ಅಭಿಮಾನಿ ಸಂಘದ ಅಧ್ಯಕ್ಷ ಎಂದು ದರ್ಶನ್‌ ಹೇಳಿಕೆ ನೀಡಿದ್ದಾನೆ.

1.75 ಕೋ. ರೂ. ಕೊಟ್ಟಿದ್ದ ಜಗದೀಶ್‌
ಜೆಟ್‌ಲ್ಯಾಗ್‌ ಹೊಟೇಲ್‌ ಮಾಲಕ ಸೌಂದರ್ಯ ಜಗದೀಶ್‌ ಸುಮಾರು 10 ವರ್ಷಗಳಿಂದ ಪರಿಚಯಸ್ಥರು. 2018ರಲ್ಲಿ ಪವಿತ್ರಾಳಿಗೆ ಮನೆ ಖರೀದಿಸಲು ಸೌಂದರ್ಯ ಜಗದೀಶ್‌ ಅವರಿಂದ 1.75 ಕೋಟಿ ರೂ. ಹಣವನ್ನು ಸಾಲ ಪಡೆದಿದ್ದು, ಈ ಹಣವನ್ನು ಪವಿತ್ರಾ ಗೌಡ ಖಾತೆಗೆ ನೇರವಾಗಿ ವರ್ಗಾವಣೆ ಮಾಡಿಸಿರುತ್ತೇನೆ. ಈ ಸಾಲದ ಹಣವನ್ನು 2 ವರ್ಷಗಳ ಹಿಂದೆ ವಾಪಸ್‌ ನೀಡಿದ್ದೇನೆ. ಈ ಹಣ ಸಿನೆಮಾ ನಟನೆಯಿಂದ ಬಂದ ಹಣವಾಗಿದೆ ಎಂದು ದರ್ಶನ್‌ ಹೇಳಿಕೆ ನೀಡಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.