ಕುಣಿಗಲ್: ಅನುಮತಿ ಪಡೆಯದೆ ಹಲವು ವರ್ಷಗಳಿಂದ ಶಾಲೆ ನಡೆಸಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷ ಹರೀಶ್‌ನಾಯ್ಕ ಹಾಗೂ ಬಿಇಒ ತಿಮ್ಮರಾಜು ನಿಸರ್ಗ ವಿದ್ಯಾಸಂಸ್ಥೆ ಮೇಲೆ ದಿಢೀರ್ ದಾಳಿ ನಡೆಸಿ ದಾಖಲೆ ಪರಿಸೀಲಿಸಿದರು. ಹುಲಿಯೂರುದರ್ಗ ಹೋಬಳಿ ಉಜ್ಜನಿ ಮಾರ್ಗದ ಕೆಬ್ಬಳ್ಳಿಕ್ರಾಸ್‌ನಲ್ಲಿ ಇರುವ ನಿಸರ್ಗ ಖಾಸಗಿ ಶಾಲೆಯಲ್ಲಿ 6,7,8ನೇ ತರಗತಿಗಳಿಗೆ ಅನುಮತಿ ಪಡೆಯದೆ ಹಾಗೂ ಶಾಲಾ ವಾಹನಗಳಿಗೂ ಸಮರ್ಪಕ ದಾಖಲಾತಿ ಇಲ್ಲ.
ಜೊತೆಗೆ ಶಾಲಾ ಜಾಗ ಭೂಪರಿವರ್ತನೆ ಮಾಡಿಸದೇ ಕಾನೂನು ಬಾಹಿರವಾಗಿ ಶಾಲೆ ನಡೆಸಲಾಗುತ್ತಿದೆ ಎಂದು ತಾಪಂ ಸದಸ್ಯ ಕುಮಾರ್ ಅವರು ಸಾಕಷ್ಟು ಬಾರಿ ತಾಪಂ ಸಭೆಯಲ್ಲಿ ಪ್ರಸ್ತಾಪಿಸಿ ತನಿಖೆಗೆ ಒತ್ತಾಯಿಸಿದ್ದರು. ಈ ಸಂಬಂಧ ತಾಪಂ ಅಧ್ಯಕ್ಷ ಹರೀಶ್ ನಾಯ್ಕ, ಬಿಇಒ ತಿಮ್ಮರಾಜು. ಇಸಿಒ ಕರುಣಾಕರ್, ಸಿಆರ್‌ಪಿ ಪ್ರಕಾಶ್, ಕುಮಾರ್ ಅವರನ್ನೊಳಗೊಂಡ ತಂಡ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ದಾಖಲೆ ಇಲ್ಲ!: ಶಾಲಾ ವಾಹನಗಳಿಗೆ ವಿಮೆ ಇಲ್ಲದಿರುವುದು, ಚಾಲಕರ ದಾಖಲಾತಿ ಇಲ್ಲದಿರುವುದು ಜೊತೆಗೆ ಶೌಚಗೃಹಗಳಿಗೆ ಬಾಗಿಲು ಇಲ್ಲದಿರುವುದು, ತೆರೆದ ಸಂಪ್ ಇರುವುದು ಕಂಡು ಬಂದಿದೆ. ಅಲ್ಲದೇ 6,7,8ನೇ ತರಗತಿಗೆ ಅನುಮತಿ ಪಡಯದೆ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚಿಂತನೆ ಮಾಡದೆ ತರಗತಿ ನಡೆಸುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಪ್ರಶ್ನಿಸಿದಾಗ ಶಾಲೆ ಮುಖ್ಯಶಿಕ್ಷಕ ಶ್ರೀನಿವಾಸ್ ಯಾವುದಕ್ಕೂ ಸಮರ್ಪಕ ದಾಖಲಾತಿ ನೀಡದೇ ಸಮಜಾಯಿಷಿ ನೀಡಿದರು. ಇದರಿಂದ ಅಸಮಾಧಾನಗೊಂಡ ಅಧಿಕಾರಿಗಳ ತಂಡ ದಾಖಲೆ ಒದಗಿಸುವಂತೆ ತಾಕೀತು ಮಾಡಿತು.
ಕ್ರಿಮಿನಲ್ ಪ್ರಕರಣ ಎಚ್ಚರಿಕೆ: ಎರಡು ದಿನಗಳಲ್ಲಿ ದಾಖಲೆ ಒದಗಿಸುತ್ತೇವೆ ಎಂದು ಮುಖ್ಯಶಿಕ್ಷಕ ಶ್ರೀನಿವಾಸ್ ಮನವಿ ಮಾಡಿದರು. ಇದಕ್ಕೆ ಒಪ್ಪಿದ ಬಿಇ ತಿಮ್ಮರಾಜು, ಎರಡು ದಿನದ ಒಳಗೆ ಅಗತ್ಯವಿರುವ ದಾಖಲೆ ಒದಗಿಸದಿದ್ದರೆ ನಿಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದೆಂದು ಎಚ್ಚರಿಕೆ ನೀಡಿದರು.
ಮುಲಾಜಿಲ್ಲದೆ ಕ್ರಮ: ಬಿಇಒ ತಿಮ್ಮರಾಜು ಮಾತನಾಡಿ, 6,7,8ನೇ ತರಗತಿ ರದ್ದು ಮಾಡುವಂತೆ ಆದೇಶಿಸಿದ್ದರೂ ಕಾನೂನು ಬಾಹಿರವಾಗಿ ತರಗತಿ ನಡೆಸುತ್ತಿದ್ದಾರೆ. ಮಕ್ಕಳ ಪೋಷಕರೂ ಶಾಲೆಯ ಬಗ್ಗೆ ತಿಳಿದುಕೊಳ್ಳದೇ ಅನುಮತಿ ಇಲ್ಲದ ಶಾಲೆಗೆ ಸೇರಿಸಿದರೆ ಮುಂದೆ ಸರ್ಕಾರಿ ಕೆಲಸ ಸಿಕ್ಕಿ ಪರಿಶೀಲನಾ ವೇಳೆ ದಾಖಲೆ ಸಿಗದೇ ಕೆಲಸದಿಂದ ವಂಚಿತರಾಗಬೇಕಾಗುತ್ತದೆ. ಶಾಲೆ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಿ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲು ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
ಯಾವುದೇ ಶಾಲೆಯಾಗಲಿ ನಿಯಮ ನಿಭಂದನೆಗೆ ಒಳಪಟ್ಟು ನಡೆಯಬೇಕು. ಅನುಮತಿ ಇಲ್ಲದೇ ಶಾಲೆ ನಡೆಸಿ ಮಕ್ಕಳ ಭವಿಷ್ಯ ಕಲ್ಲು ಹಾಕುವ ಕೆಲಸ ಮಾಡಬಾರದು. ಇದು ಒಳೆಯ ಬೆಳವಣಿಗೆಯಲ್ಲ. ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಈ ಕ್ರಮ ಅನಿವಾರ್ಯವಾಗಿದೆ. ತಾಲೂಕಿನಲ್ಲಿ ಇಂತಹ ನಕಲಿ ಶಾಲೆಗಳ ವಿರುದ್ದ ದಾಳಿ ಮುಂದುವರಿಸಲಾಗುವುದು.
-ಹರೀಶ್ ನಾಯ್ಕ, ತಾಪಂ ಅಧ್ಯಕ್ಷ