ಬೆಂಗಳೂರು: ರೈಲ್ವೇ ನಿಲ್ದಾಣದ ಪಾರ್ಸೆಲ್ ವಿಭಾಗದಲ್ಲಿ ಪತ್ತೆಯಾದ ಮಾಂಸ ಪ್ರಕರಣದಲ್ಲಿ ರಾಷ್ಟ್ರ ರಕ್ಷಣೆ ಪಡೆ ಮುಖಂಡ ಪುನೀತ್ ಕೆರೆಹಳ್ಳಿ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಹಿಂದೂಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಬುಧವಾರ ಬಸವೇಶ್ವರನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ಅದರಿಂದ ಕೆಲ ಕಾಲ ಠಾಣೆ ಮುಂಭಾಗ ಹೈಡ್ರಾಮಾವೇ ನಡೆಯಿತು. ಎಸಿಪಿ ಚಂದನ್ ಕುಮಾರ್‌ಗೆ ಧಿಕ್ಕಾರ, ಪೊಲೀಸರ ದೌರ್ಜನ್ಯಕ್ಕೆ ಧಿಕ್ಕಾರ ಎಂದು ಪ್ರತಿಭಟನಾನಿರತ ಕಾರ್ಯಕರ್ತರು ಘೋಷಣೆ ಕೂಗಿದರು. ಆಗ ಅನುಮತಿ ಇಲ್ಲದೆ ಪ್ರತಿಭಟನೆ ಮಾಡಿದ ಕೆಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಪ್ರತಿಭಟನಕಾರರು ಹಾಗೂ ಪೊಲೀಸರ ನಡುವೆ ಕೆಲವು ಕಾಲ ತಳ್ಳಾಟ ನೂಕಾಟ ಹಾಗೂ ವಾಗ್ವಾದ ಕೂಡ ನಡೆಯಿತು.
ಇದೇ ಸಮಯಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಹರೀಶ್ ಪೂಂಜ, ಹಿಂದೂ ಮುಖಂಡ ಪುನೀತ್ ಕೆರೆಹಳ್ಳಿ ಠಾಣೆ ಬಳಿ ಬಂದರು. ಈ ವೇಳೆ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿತು. ಈ ವೇಳೆ ಪೊಲೀಸರು ಪುನೀತ್ ಕೆರೆಹಳ್ಳಿ ಸೇರಿ ಮತ್ತಷ್ಟು ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಅದಕ್ಕೆ ಆಕ್ಷೇಪಿಸಿದ ಪ್ರತಾಪ್ ಸಿಂಹ ಹಾಗೂ ಹರೀಶ್ ಪೂಂಜ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಕೆಲ ಹೊತ್ತಿನ ಬಳಿಕ ಪೊಲೀಸರು ಪುನೀತ್ ಕೆರೆಹಳ್ಳಿ ಹಾಗೂ ಕೆಲವು ಕಾರ್ಯಕರ್ತರನ್ನು ಬಿಡುಗಡೆಗೊಳಿಸಿದರು.
ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಠಾಣೆ ಬಳಿ ಬಂದ ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಅವರನ್ನು ಭೇಟಿ ಮಾಡಿದ ಪ್ರತಾಪ್ ಸಿಂಹ ಹಾಗೂ ಹರೀಶ್ ಪೂಂಜ ಕೆಲವು ವಿಚಾರಗಳ ಬಗ್ಗೆ ಚರ್ಚಿಸಿದರು. ಪುನೀತ್ ಕೆರೆಹಳ್ಳಿ ಮೇಲೆ ದೌರ್ಜನ್ಯ ಎಸಗಿರುವ ಎಸಿಪಿ ಚಂದನ್ ವಿರುದ್ಧ ಹಾಗೂ ಅಕ್ರಮ ಮಾಂಸ ಸಾಗಣೆ ಆರೋಪದಡಿ ಅಬ್ದುಲ್ ರಜಾಕ್ ವಿರುದ್ಧ ಕಠಿಣ ಕ್ರಮಕೈಗೊಂಡು ಬಂಧಿಸಬೇಕು ಎಂದು ಒತ್ತಾಯಿಸಿದರು.