ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ರಾಜಕೀಯ ಮೇಲಾಟದ ನಡುವೆ ಜೆಡಿಎಸ್ ಕಾರ್ಯಕರ್ತರ ಮೇಲೆ ಬಿಜೆಪಿ ಕಾರ್ಯಕರ್ತರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಈ ಘಟನೆಯಲ್ಲಿ ನಾಲ್ವರು ಜೆಡಿಎಸ್ ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡಿದ್ದು ಗ್ರಾಮಾಂತರ ಕ್ಷೇತ್ರದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. ತಾಲೂಕಿನ ಹೊನ್ನೇನಹಳ್ಳಿಯ ರಾಧಾಕೃಷ್ಣ, ಸಂಜೀವಮ್ಮ, ರಂಗಸ್ವಾಮಯ್ಯ, ಶ್ರೀನಿವಾಸ್ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ರಾಧಾಕೃಷ್ಣ ಅವರ ಸ್ಥಿತಿ ಗಂಭೀರವಾಗಿದೆ.
ಮಾತಿನ ಚಕಮಕಿ: ಈ ಹಿಂದೆ ಏ. 22 ರಂದು ಮಹಿಳೆಯೊಬ್ಬರ ಮೇಲೆ ವೆಂಕಟೇಶ್ ಎಂಬಾತ ಅತ್ಯಾಚಾರಕ್ಕೆ ಯತ್ನ ಮಾಡಿದ್ದರೆನ್ನಲಾಗಿದೆ. ಇದನ್ನು ಕಣ್ಣಾರೆ ಕಂಡ ರಾಧಾಕೃಷ್ಣ ಮನೆ ಯವರು ಸಾಕ್ಷಿಗೆ ಸಹಿ ಹಾಕಿದ್ದರು. ವೆಂಕ ಟೇಶ್ ಬಿಜೆಪಿ ಮುಖಂಡರಾಗಿದ್ದು, ಸಾಕ್ಷಿಯಿಂದ ಹಿಂದೆ ಸರಿಯುವಂತೆ ರಾಧಾಕೃಷ್ಣ ಮೇಲೆ ಒತ್ತಡ ಹೇರುತ್ತಿದ್ದರು. ಆದರೆ ರಾಧಾಕೃಷ್ಣ ಸಾಕ್ಷಿ ಹಿಂತೆಗೆದುಕೊಳ್ಳಲು ನಿರಾಕರಿಸಿದ್ದರು.
ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ. ಅದೇ ಗ್ರಾಮದ ವೆಂಕಟೇಶ್, ರವಿ, ರಂಗಸ್ವಾಮಯ್ಯ, ಯೋಗೀಶ್, ಮಧು, ವೆಂಕಟೇಶ್, ಶಂಕರಪ್ಪ, ಸ್ವಾಮಿ, ಮೋಹನ್, ಮಂಜುನಾಥ, ಶ್ರೀಧರ್, ಜಯಕುಮಾರ್, ಕೃಷ್ಣಮೂರ್ತಿ, ಗಂಗರಾಜು, ವೆಂಕಟೇಶ್ ಬಳ್ಳಾರಿ, ಮನು ಎಂಬುವರಿಂದ ಹಲ್ಲೆ ನಡೆದಿದೆ ಎಂದು ದೂರು ದಾಖಲಾಗಿದೆ.
ಕುಟುಂಬಸ್ಥರಿಗೆ ಧೈರ್ಯ ತುಂಬಿದ ಶಾಸಕರು: ಹೊನ್ನೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಗ್ರಾಮಾಂ ತರ ಶಾಸಕ ಡಿ.ಸಿ.ಗೌರಿಶಂಕರ್ ಹಲ್ಲೆಗೊಳ ಗಾದ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಯಾರಿಗೂ ಹೆದರಬೇಡಿ ನಾನು ನಿಮ್ಮ ಜೊತೆ ಇರುತ್ತೇನೆ ಎಂದು ಧೈರ್ಯ ತುಂಬಿದ್ದಾರೆ.
ಜಿಲ್ಲಾಸ್ಪತ್ರೆಗೂ ಭೇಟಿ: ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಲ್ಲೆಗೊಳಗಾದ ಜೆಡಿಎಸ್ ಕಾರ್ಯಕರ್ತರನ್ನು ಪರಾಮರ್ಶಿಸಿದ ಶಾಸಕ ಗೌರಿಶಂಕರ್ 25 ಸಾವಿರ ಹಣ ನೀಡಿ ಉತ್ತಮ ಚಿಕಿತ್ಸೆ ಕೊಡುವಂತೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವೀರಭದ್ರಯ್ಯ ಅವರಿಗೆ ಸೂಚಿಸಿದರು.
ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಿ: ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳು ನೆಲಮಂಗಲ ಮತ್ತು ದೊಡ್ಡಬಳ್ಳಾಪುರ ತಾಲೂಕಿನಲ್ಲಿ ವಿವಿಧ ರೌಡಿಶೀಟರ್‌ಗಳಾಗಿದ್ದು, ಕೂಡಲೇ ಆರೋಪಿ ಗಳನ್ನು ಬಂಧಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳ ಬೇಕು ಎಂದು ಒತ್ತಾಯಿಸಿದರು.
ಪೊಲೀಸರ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ: ಕಳೆದ ಎರಡು ವರ್ಷಗಳಿಂದ ಕ್ಷೇತ್ರದಲ್ಲಿ ಯಾವುದೇ ಇಂತಹ ಅಹಿಕರ ಘಟನೆ ನಡೆದಿಲ್ಲ, ಈಗ ಬಿಜೆಪಿ ಕಾರ್ಯ ಕರ್ತರು ಹಳೆಯ ದ್ವೇಷದಿಂದ ಈ ರೀತಿ ಹಗೆತನ ಸಾಧಿಸುತ್ತಿದ್ದಾರೆ. ಇದಕ್ಕೆ ಪೊಲೀಸ್ ವೃತ್ತ ನಿರೀಕ್ಷರು ಮತ್ತು ಸಬ್‌ಇನ್ಸ್‌ಪೆಕ್ಟರ್ ಕುಮ್ಮಕ್ಕು ಇದೆ ಎಂದು ಆರೋಪಿಸಿರುವ ಶಾಸಕರು, ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿಗಳ ಕಚೇರಿ ಮುಂದೆ ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಪಿಎಸ್‌ಐ ಮತ್ತು ಸಿಪಿಐ ಅಮಾನತಿಗೆ ಆಗ್ರಹಿಸುವುದಾಗಿ ಎಚ್ಚರಿಸಿದರು. ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.