Advertisement

ವೈದ್ಯೆ ಮೇಲೆ ಹಲ್ಲೆ ಖಂಡಿಸಿ ಬಂದ್‌ ಯಶಸ್ವಿ

04:38 AM May 15, 2020 | Suhan S |

ಚನ್ನಮ್ಮ ಕಿತ್ತೂರು: ಸರ್ಕಾರಿ ಆಸ್ಪತ್ರೆ ವೈದ್ಯೆಗೆ ಜೀವ ಬೆದರಿಕೆ ಪ್ರಕರಣದ ಹಿಂದೆ ಇಬ್ಬರು ವೈದ್ಯರ ಕುಮ್ಮಕ್ಕು ಇರುವುದು ಕಂಡು ಬಂದಿದೆ. ಇಲಾಖಾಧಿ ಕಾರಿಗಳು ತಪ್ಪಿತಸ್ಥರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಶಾಸಕ ಮಹಾಂತೇಶ ದೊಡ್ಡಗೌಡರ ಆಗ್ರಹಿಸಿದರು.

Advertisement

ವೈದ್ಯೆಗೆ ಜೀವ ಬೆದರಿಕೆ ಖಂಡಿಸಿ ಕಿತ್ತೂರು ಬಂದ್‌ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ  ಅವರು ಮಾತನಾಡಿ, ಈ ಘಟನೆಗೆ ಸಂಬಂ ಧಿಸಿದಂತೆ ವೈದ್ಯೆ ಮನನೊಂದು ರಾಜೀನಾಮೆಗೆ ಮುಂದಾಗಿದ್ದರು. ಆದರೆ ಅವರಿಗೆ ಧೈರ್ಯ ತುಂಬುವ ಮೂಲಕ ರಾಜೀನಾಮೆ ನೀಡದಂತೆಮನವೊಲಿಸಲಾಗಿದೆ. ಈ ಘಟನೆಯನ್ನು ಕಿತ್ತೂರು ನಾಡಿನ ಜನರು ಖಂಡಿಸಿ ಸ್ವಯಂ ಪ್ರೇರಿತರಾಗಿ ಪಟ್ಟಣ ಬಂದ್‌ ಮಾಡಿರುವುದು ಸಮಾಜಘಾತುಕರಿಗೆ ಎಚ್ಚರಿಕೆಯಾಗಿದೆ ಎಂದರು.

ಇಂತಹ ಘಟನೆಗಳಿಗೆ ಸಂಬಂಧಿಸಿದಂತೆ ನೌಕರರು ಯಾವುದೇ ಕಾರಣಕ್ಕೂ ಭಯ ಪಡುವ ಅವಶ್ಯಕತೆ ಇಲ್ಲ, ನಮ್ಮ ಕಾರ್ಯ ಪಡೆ ನಿಮ್ಮ ಜೊತೆ ಸದಾ ಇರುತ್ತದೆ. ಪೊಲೀಸ್‌ ಅಧಿಕಾರಿಗಳು ಈ ಘಟನೆಯ ಪಾರದರ್ಶಕ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ಸಮಾಜಘಾತುಕ ಶಕ್ತಿಗಳನ್ನು ಯಾವುದೇ ಕಾರಣಕ್ಕೂ ಸಹಿಸುವದಿಲ್ಲ. ಇಂತಹ ರೌಡಿಸಂ ಮಾಡುವ ವ್ಯಕ್ತಿಗಳನ್ನು ಮಟ್ಟಹಾಕಬೇಕು, ಈ ಘಟನೆಯಲ್ಲಿ ಪ್ರಚೋದನೆ ನೀಡಿದವರಿಗೆ ಕಠಿಣ ಶಿಕ್ಷೆಯಾಗಬೇಕು. ಜಿಲ್ಲಾ ವೈದ್ಯಾಧಿಕಾರಿ ದೌರ್ಜನ್ಯಕ್ಕೊಳಗಾದ ವೈದ್ಯರ ಬೆಂಬಲಕ್ಕೆ ಪ್ರಾಮಾಣಿಕವಾಗಿ ನಿಲ್ಲಬೇಕು. ಈ ಘಟನೆ ಕಿತ್ತೂರಿಗೆ ಕಪ್ಪು ಚುಕ್ಕೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕೆಂದು ಸಂದೀಪ ದೇಶಪಾಂಡೆ, ಬಸವರಾಜ ಪರವಣ್ಣವರ, ಮಲ್ಲಣ್ಣ ಸಾಣಿಕೊಪ್ಪ, ವಿ.ಡಿ.ಉಣಕಲ್ಲಕರ, ಮೊಹನ ಅಂಗಡಿ, ಜಗದೀಶ ಬಿಕ್ಕಣ್ಣವರ, ಹನುಮಂತ ಲಂಗೋಟಿ, ಮಹಾದೇವಿ ಮಣವಡ್ಡರ, ಡಾ. ಮಂಜುನಾಥ ಮುದಕನಗೌಡರ, ಎಸ್‌.ಪಿ. ಹಿರೇಮಠ ಸೇರಿದಂತೆ ಇತರರು ಆಗ್ರಹಿಸಿದರು.

ಹಿರಿಯ ಆರೋಗ್ಯಾಧಿಕಾರಿ. ಐ.ಪಿ.ಗಡಾದ, ತಹಶೀಲ್ದಾರ ಪ್ರವೀಣ ಜೈನ್‌, ತಾಪಂ ಇಒ ಸುಭಾಸ ಸಂಪಗಾಂವಿ, ಸಿಪಿಐ ಶ್ರೀಕಾಂತ ತೋಟಗಿ, ಟಿಎಚ್‌ಒ ಎಸ್‌. ಎಸ್‌. ಶಿದ್ದಣ್ಣವರ, ಎಸ್‌.ಸಿ.ಮಾಸ್ತಿಹೊಳಿ ಹಾಜರಿದ್ದರು. ವರ್ತಕರ ಸಂಘ, ಮಹಿಳಾ ಸಂಘ, ಖಾಸಗಿ ವೈದ್ಯರ ಸಂಘ, ಔಷಧಿ  ವ್ಯಾಪಾರಸ್ಥರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಕಠಿಣ ಕ್ರಮಕ್ಕೆ ಆಗ್ರಹಿಸಿ ಶಾಸಕರು ಹಾಗೂ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

Advertisement

ವಿವಿಧ ಸಂಘಟನೆಗಳ ಬೆಂಬಲ :  ಮಹಿಳಾ ವೈದ್ಯೆಗೆ ಜೀವ ಬೆದರಿಕೆ, ಹಲ್ಲೆಗೆ ಯತ್ನಿಸಿದ ಘಟನೆ ಖಂಡಿಸಿ ಪಟ್ಟಣದ ವರ್ತಕರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಗುರುವಾರ ನೀಡಿದ್ದ ಕಿತ್ತೂರು ಬಂದ್‌ ಕರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಬೆಳಗ್ಗೆಯಿಂದ ಔಷಧ ವ್ಯಾಪಾರಸ್ಥರು, ಮದ್ಯದಂಗಡಿಗಳು ಸೇರಿದಂತೆ ಎಲ್ಲರೂ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಬಂದ್‌ ಮಾಡಿ ವೈದ್ಯೆಯನ್ನು ಬೆಂಬಲಿಸಿದರು. ವರ್ತಕರ ಸಂಘ, ಖಾಸಗಿ ವೈದ್ಯರ ಸಂಘ, ನ್ಯಾಯವಾದಿಗಳ ಸಂಘ, ಮದ್ಯಮಾರಾಟಗಾರರ ಸಂಘ, ವಿವಿಧ ಮಹಿಳಾ ಸಂಘಟನೆಗಳು, ಯುವಕ ಸಂಘಟನೆಗಳು ಸೇರಿದಂತೆ ಪûಾತೀತವಾಗಿ ಎಲ್ಲರೂ ಬಂದ್‌ ಬೆಂಬಲಿಸಿದ್ದರು.

ಸಭೆ ನಿರ್ಣಯ:  ವೈದ್ಯೆಗೆ ಜೀವ ಬೆದರಿಕೆ ಹಾಗೂ ಹಲ್ಲೆಗೆ ಯತ್ನಿಸಿದ ಆರೋಪಿಗಳಿಗೆ ಪ್ರಚೋದನೆ ನೀಡುತ್ತಿರುವ ಇಬ್ಬರು ವೈದ್ಯರ ಮೇಲೆ ಪ್ರಕರಣ ದಾಖಲಿಸಿಬೇಕು. ಘಟನೆಯಿಂದ ಮನನೊಂದು ಮಾಹಿತಿ ನೀಡಲು ತೆರಳಿದ್ದ ವೈದ್ಯರೊಂದಿಗೆ ಜಿಲ್ಲಾ ಆರೋಗ್ಯಾಧಿಕಾರಿ ನಡೆದುಕೊಂಡ ವರ್ತನೆಯ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿ ಈ ಕುರಿತು ಮುಖ್ಯಮಂತ್ರಿಗಳು‌ ಹಾಗೂ ಆರೋಗ್ಯ ಸಚಿವರ ಮೇಲೆ ಒತ್ತಡ ತರುವಂತೆ ಶಾಸಕ ಮಹಾಂತೇಶ ದೊಡ್ಡಗೌಡರ ಅವರಿಗೆ ಆಗ್ರಹಿಸಿ ಗುರುವಾರ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next