Advertisement

ಶಿಡ್ಲಘಟ್ಟ ನಗರಸಭೆಯ ಅಧ್ಯಕ್ಷೆ- ಪೌರಾಯುಕ್ತರ ಮೇಲೆ ಹಲ್ಲೆ ಆರೋಪ; ದೂರು ದಾಖಲು

11:37 AM Mar 31, 2022 | Team Udayavani |

ಶಿಡ್ಲಘಟ್ಟ: ಇಲ್ಲಿನ ನಗರಸಭೆಯ ವ್ಯಾಪ್ತಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರ ನಗರೋತ್ಥಾನ ಹಂತ- 4ರ ಯೋಜನೆಯಡಿ 30 ಕೋಟಿ ಮಂಜೂರು ಮಾಡಿರುವ ಹಿನ್ನೆಲೆಯಲ್ಲಿ ಕಾಮಗಾರಿಯ ಪಟ್ಟಿಯನ್ನು ಪರಿಶೀಲಿಸಲು ತೆರಳಿದ್ದ ನಗರಸಭೆಯ ಅಧ್ಯಕ್ಷೆ ಮತ್ತು ಪೌರಾಯುಕ್ತರ ಮೇಲೆ ಉಪಾಧ್ಯಕ್ಷ ಹಾಗೂ ಅವರ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಶಿಡ್ಲಘಟ್ಟ ನಗರಸಭೆಯ ಅಧ್ಯಕ್ಷೆ ಸುಮಿತ್ರಾ ರಮೇಶ್ ಹಾಗೂ ಉಪಾಧ್ಯಕ್ಷ ಅಫ್ಸರ್ ಪಾಷ ಅವರ ನಡುವೆ ಈಗಾಗಲೇ ರಾಜಕೀಯವಾಗಿ ಸಮರ ನಡೆದು ನಗರಸಭೆಯ ಅಧ್ಯಕ್ಷೆ ಸುಮಿತ್ರಾ ರಮೇಶ್ ಅವರು ಈ ಹಿಂದೆ ತಮಗೆ ನಗರಸಭೆಯ ಉಪಾಧ್ಯಕ್ಷ ಅಪ್ಸರ್ ಪಾಷ ಇನ್ನಿತರರು ಜಾತಿ ನಿಂದನೆ ಮಾಡಿದ್ದಾರೆ ಎಂದು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ನಗರೋತ್ಥಾನ ಹಂತ 4ರ ಯೋಜನೆಯಡಿ ರಾಜ್ಯ ಸರ್ಕಾರ 30 ಕೋಟಿ ರೂಗಳನ್ನು ಮಂಜೂರು ಮಾಡಿದೆ. ಅದಕ್ಕಾಗಿ ಈಗಾಗಲೇ ನಗರಸಭೆಯ ಸದಸ್ಯರಿಂದ ಅವರ ವಾರ್ಡಗಳಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳ ಕುರಿತು ಪಟ್ಟಿಯನ್ನು ಸಹ ಸಲ್ಲಿಸಲಾಗಿದೆ.

ನಗರಸಭಾ ಸದಸ್ಯರು ಸಲ್ಲಿಸಿರುವ ಪಟ್ಟಿಯೊಂದಿಗೆ ನಗರದ 29 ನೇ ವಾರ್ಡ್ ಗೆ ತೆರಳಿದ ವೇಳೆಯಲ್ಲಿ ನಗರಸಭೆಯ ಉಪಾಧ್ಯಕ್ಷ ಅಪ್ಸರ್ ಪಾಷಾ ಮತ್ತು ಅವರ ಬೆಂಬಲಿಗರು ಅನುಚಿತವಾಗಿ ವರ್ತಿಸಿದರಲ್ಲದೆ, ತಮ್ಮ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

ತನ್ನ ಜೊತೆಯಲ್ಲಿ ವಾರ್ಡ್ ವೀಕ್ಷಣೆಗೆಂದು ಬಂದಿದ್ದ ಪೌರಾಯುಕ್ತ ಶ್ರೀಕಾಂತ್ ಅವರ ಮೇಲೆ ಸಹ ಹಲ್ಲೆ ನಡೆಸಿದ್ದಾರೆ ಎಂದು ನಗರಸಭೆ ಅಧ್ಯಕ್ಷೆ ಸುಮಿತ್ರಾ ರಮೇಶ್ ಆರೋಪಿಸಿದ್ದಾರೆ. ವಾರ್ಡ್ ವೀಕ್ಷಣೆಯ ಸಂದರ್ಭದಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಯುವಕನ ಮೇಲೆ ಸಹ ಹಲ್ಲೆ ನಡೆಸಿ ಮೊಬೈಲ್ ಕಿತ್ತುಕೊಂಡು ನಾಶಪಡಿಸಿದ್ದಾರೆ ಎಂದು ದೂರಿದ್ದಾರೆ.

ನಗರಸಭೆಯ ಅಧ್ಯಕ್ಷೆ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ ಜೆಡಿಎಸ್ ಕಾರ್ಯಕರ್ತರು ಹಾಗೂ ನಗರಸಭಾ ಸದಸ್ಯರು ಮತ್ತು ದಲಿತ ಸಂಘಟನೆಗಳ ಕಾರ್ಯಕರ್ತರು ಪೊಲೀಸ್ ಠಾಣೆ ಮುಂದೆ ಜಮಾವಣೆಗೊಂಡಿದ್ದಾರೆ.

ಪ್ರಸ್ತುತ ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಪುರ ಪೊಲೀಸ್ ಠಾಣೆಯ ಪಿಎಸ್ಐ ಸತೀಶ್ ಮತ್ತು ಸಿಬ್ಬಂದಿ ಎಲ್ಲರೂ ಶಾಂತಿ ಕಾಪಾಡಬೇಕೆಂದು ಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ನಗರಸಭೆಯ ಉಪಾಧ್ಯಕ್ಷ ಅಫ್ಸರ್ ಪಾಷಾ ಮತ್ತು ಅವರ ಬೆಂಬಲಿಗರು ಗೂಂಡಾ ವರ್ತನೆಯನ್ನು ತೋರಿಸಿ ಭಯ ಭೀತಿಯ ವಾತಾವರಣವನ್ನು ನಿರ್ಮಿಸಿದ್ದಾರೆ. ದಲಿತ ಮಹಿಳೆ ಮತ್ತು ನಗರದ ಪ್ರಥಮ ಪ್ರಜೆಯ ಮೇಲೆ ಹಲ್ಲೆ ನಡೆಸಿ ದುಸ್ಸಾಹಸ ಮೆರೆದಿದ್ದಾರೆ. ಕೂಡಲೇ ಇವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ನಗರಸಭೆ ಅಧ್ಯಕ್ಷರ ಬೆಂಬಲಿಗರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next