ಬೆಂಗಳೂರು: ಹಣಕಾಸು ವ್ಯವ ಹಾರಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರು ತನ್ನ ಇಬ್ಬರು ಸಂಬಂಧಿಗಳ ಜತೆ ಸೇರಿ ಕಾರು ವ್ಯವಹಾರ ನಡೆಸುವ ಉದ್ಯಮಿ ಮೇಲೆ ಹಲ್ಲೆ ನಡೆಸಿರುವ ಘಟನೆ ಕೊಡಿಗೇಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಈ ಸಂಬಂಧ ಶಂಕರ ನಗರ ನಿವಾಸಿ ಅಖಿಲ್ ಅಲಿಯಾಸ್ ಹೇಮಾದ್ರಿ ಯಾದವ್ ಎಂಬುವರು ಕೊಡಿಗೇಹಳ್ಳಿ ಠಾಣೆಯಲ್ಲಿ ರೋನಿತ್, ದುರ್ಗಾ ಮತ್ತು ಆಕೆಯ ಸಹೋದರ ಹಾಗೂ ಇತರರ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಅಖಿಲ್ ಕಳೆದ ಆರು ವರ್ಷಗಳಿಂದ ಕಾರು ವ್ಯವಹಾರ ನಡೆ ಸುತ್ತಿದ್ದು, 2019ರಲ್ಲಿ ವ್ಯವಹಾರ ಸಂಬಂಧ ರೋನಿತ್ ಅಲಿಯಾಸ್ ಅಮೋದಿತ್ ಸಾಮ್ಸನ್ ಎಂಬುವರು ವ್ಯವಹಾರದಲ್ಲಿ ಮೋಸ ಮಾಡಿದ್ದರು. ಈ ಸಂಬಂಧ ಯಲಹಂಕ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಿಸಿದ್ದು, ರೋನಿತ್‌ನನ್ನು ಬಂಧಿಸಲಾಗಿತ್ತು. ಬಳಿಕ ಜೈಲಿನಿಂದ ಬಿಡುಗಡೆಯಾದ ರೋನಿತ್ ಪದೆ ಪದೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದರು. “ಮೇ 1ರಂದು ರಾತ್ರಿ ಕೆಲಸಮುಗಿಸಿಕೊಂಡು ಕಾರು ಚಾಲಕ ನಾಗೇಶ್ ಜತೆ ಎಲ್ ಆ್ಯಂಡ್ ಟಿ ಅಪಾರ್ಟ್ ಮೆಂಟ್‌ನಲ್ಲಿರುವ ತನ್ನ ಫ್ಲ್ಯಾಟ್‌ಗೆ ಹೋಗುತ್ತಿದ್ದೆ. ಆಗ ತನ್ನ ಕಾರನ್ನು ಹಿಂಬಾಲಿಸಿದ ಆರೋಪಿಗಳು, ಅಪಾರ್ಟ್‌ಮೆಂಟ್ ಗೇಟ್ ಮುಂದೆ ಅಡ್ಡಗಟ್ಟಿದ್ದರು. ಬಳಿಕ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಮುಖ, ಎದೆ ಮೇಲೆ ಹಲ್ಲೆ ನಡೆಸಿದ್ದಾರೆ.
ಜತೆಗೆ ತಮ್ಮ ಕಾರು ಚಾಲಕ ನಾಗೇಶ್ ಮೇಲೂ ಹಲ್ಲೆ ನಡೆಸಿದ್ದಾರೆ. ಪ್ರಾಣ ಬೆದರಿಕೆ ಹಾಕಿದ್ದಾರೆ’ ಎಂದು ಅಖೀಲ್ ದೂರಿನಲ್ಲಿ ಉಲ್ಲೇಖೀಸಿದ್ದಾರೆ.
ಈ ಸಂಬಂಧ ಆರೋಪಿಗಳಿಗೆ ನೋಟಿಸ್ ಕೊಟ್ಟು ವಿಚಾರಣೆ ನಡೆಸಲಾಗುತ್ತಿದೆ. ಘಟನೆಗೆ ಹಳೇ ಹಣಕಾಸಿನ ವ್ಯವಹಾರ ಕಾರಣ ಎಂಬುದು ಗೊತ್ತಾಗಿದೆ. ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.