Advertisement

Assault Case: ಸಿಐಡಿ ಕಚೇರಿಯ ಮಹಿಳಾ ಅಧಿಕಾರಿಗೆ ಲೈಂಗಿಕ ದೌರ್ಜನ್ಯ: ಪ್ರಕರಣ ದಾಖಲು

09:38 AM Dec 03, 2023 | Team Udayavani |

ಬೆಂಗಳೂರು: ಸಿಐಡಿ ಕಚೇರಿಯ ಮಹಿಳಾ ಅಧಿಕಾರಿಯೊಬ್ಬರಿಗೆ ಬೆಳಗಾವಿ ಮೂಲದ ಪರಿಚಿತ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಬೆಳಕಿಗೆ ಬಂದಿದೆ.

Advertisement

ಈ ಸಂಬಂಧ ಸಂತ್ರಸ್ತ ಮಹಿಳಾ ಅಧಿಕಾರಿ ನೀಡಿದ ದೂರಿನ ಮೇರೆಗೆ ವಿಧಾನಸೌಧ ಠಾಣೆಯಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ್‌ ಮೂಲದ ಮಹಾಲಿಂಗ(35)ಎಂಬಾತನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಆರೋಪಿ ಮಹಾಲಿಂಗ ಹಾಗೂ ಸಂತ್ರಸ್ತೆ ಒಂದು ವರ್ಷದಿಂದ ಪರಿಚಯವಿದ್ದು, ಇಬ್ಬರ ನಡುವೆ ಹಣಕಾಸಿನ ವ್ಯವಹಾರ ನಡೆದಿತ್ತು. ಮಹಿಳೆ ಆರೋಪಿಗೆ ಹಣ ಕೊಟ್ಟಿದ್ದರು. ಈ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದು ಕೃತ್ಯ ನಡೆದಿರುವ ಸಾಧ್ಯತೆಯಿದೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ದೂರಿನಲ್ಲಿ ಏನಿದೆ?: ಸಿಐಡಿ ಕಚೇರಿಯಲ್ಲಿ ಸೆಕ್ಷನ್‌ ಆಫೀಸರ್‌ ಆಗಿರುವ 44 ವರ್ಷದ ಸಂತ್ರಸ್ತೆ ನ.29 ರಂದು ಮಧ್ಯಾಹ್ನ 2.15ರ ಸಮಯದಲ್ಲಿ ಅರಮನೆ ರಸ್ತೆಯ ಶ್ರೀಮುನೇಶ್ವರ ದೇವಸ್ಥಾನದ ಮುಂದೆ ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಆಗ ಪರಿಚಿತನಾದ ಮಹಾಲಿಂಗ ಏಕಾಏಕಿ ಸಂತ್ರಸ್ತೆಯನ್ನು ಅಡ್ಡಗಟ್ಟಿ ಮೈ, ಕೈ ಮುಟ್ಟಿ, ಅಶ್ಲೀಲ ಪದಗಳಿಂದ ನಿಂದಿಸಿದ್ದಾನೆ. ಅಲ್ಲದೆ, “ನೀ ನನ್ನ ಜತೆ ಬರಲಿಲ್ಲ ಅಂದರೆ ಕೊಲೆ ಮಾಡುತ್ತೇನೆ’ ಎಂದು ಬೆದರಿಕೆ ಹಾಕಿ ಸಾರ್ವಜನಿಕವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಹೀಗಾಗಿ ದೌರ್ಜನ್ಯ ಎಸಗಿರುವ ಮಹಾಲಿಂಗ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಮಹಿಳೆ ದೂರು ನೀಡಿದ್ದಾರೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next