Advertisement

Belagavi: ಪೃಥ್ವಿ ಸಿಂಗ್‌ ಹಲ್ಲೆ ಪ್ರಕರಣ- ವಿಧಾನಸಭೆಯಲ್ಲಿ ಗದ್ದಲ, ಬಿಜೆಪಿ ಧರಣಿ

11:28 PM Dec 06, 2023 | Team Udayavani |

ಬೆಳಗಾವಿ: ಬಿಜೆಪಿ ಕಾರ್ಯಕರ್ತ ಪೃಥ್ವಿ ಸಿಂಗ್‌ ಮೇಲೆ ಹಲ್ಲೆ ಪ್ರಕರಣದಲ್ಲಿ ಪೊಲೀಸರು ಕರ್ತವ್ಯ ಲೋಪವೆಸಗಿದ್ದು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಬಿಜೆಪಿ ಶಾಸಕರು ವಿಧಾನಸಭೆಯಲ್ಲಿ ಬುಧವಾರ ಧರಣಿ ನಡೆಸಿದ್ದು, ಸದನದಲ್ಲಿ ಭಾರಿ ವಾಗ್ವಾದ ನಡೆದಿದೆ.

Advertisement

ಶೂನ್ಯವೇಳೆ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಈ ವಿಷಯ ಪ್ರಸ್ತಾವಿಸಿದರು. ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್‌ ಸೋದರ ಹಾಗೂ ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಬೆಂಬಲಿಗರು ಈ ಕೃತ್ಯ ಎಸಗಿದ್ದಾರೆ. ಆದರೆ ಪೊಲೀಸರು ಈ ಪ್ರಕರಣದಲ್ಲಿ ದೂರು ದಾಖಲಿಸಿಕೊಳ್ಳುವುದಕ್ಕೆ ವಿಳಂಬ ಮಾಡಿದ್ದಾರೆ ಎಂದು ಆರೋಪಿಸಿದರು.

ಇದಕ್ಕೆ ಉತ್ತರಿಸಿದ ಕಾನೂನು ಸಚಿವ ಎಚ್‌.ಕೆ.ಪಾಟೀಲ್‌, ಘಟನೆ ಬಗ್ಗೆ ಸದಸ್ಯರು ಗಮನ ಸೆಳೆದಿದ್ದಾರೆ. ಆದರೆ ಗೃಹ ಸಚಿವರು ಸದನದಲ್ಲಿ ಇಲ್ಲ, ಅವರು ಬಂದ ಮೇಲೆ ಉತ್ತರ ಕೊಡಿಸಲಾಗುವುದು ಎಂದು ಹೇಳಿದರು. ಇದಕ್ಕೆ ಒಪ್ಪದ ಬಿಜೆಪಿ ಸದಸ್ಯರು ಗೃಹ ಸಚಿವರ ಬದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಲಿ. ಅವರು ಏಕೆ ಮೌನವಾಗಿದ್ದಾರೆ? ಎಂದು ಪ್ರಶ್ನಿಸಿದರು.
ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಸಿಎಂ ಸಿದ್ದರಾಮಯ್ಯ, ಶೂನ್ಯವೇಳೆಯಲ್ಲಿ ಪ್ರಸ್ತಾವವಾದ ವಿಚಾರದ ಬಗ್ಗೆ ತತ್‌ಕ್ಷಣ ಉತ್ತರ ನೀಡಬೇಕು, ತಪ್ಪಿದರೆ ಎರಡು ದಿನಗಳ ಅವಧಿಯಲ್ಲಿ ಉತ್ತರ ಕೊಡುವುದಕ್ಕೆ ಅವಕಾಶವಿದೆ. ಹೀಗಾಗಿ ಗೃಹ ಸಚಿವರು ಬಂದ ಬಳಿಕ ಉತ್ತರ ಕೊಡಿಸಲಾಗುವುದು ಎಂದರು. ಉತ್ತರ ನೀಡುವುದಕ್ಕೆ ತಡವಾದರೆ ಪ್ರಕರಣ ಮುಚ್ಚಿ ಹೋಗುತ್ತದೆ ಎಂದು ಬಿಜೆಪಿ ಶಾಸಕರು ಅಭಿಪ್ರಾಯಪಟ್ಟರು.

ಸರಕಾರ ತತ್‌ಕ್ಷಣ ಉತ್ತರ ನೀಡದ ಹಿನ್ನೆಲೆಯಲ್ಲಿ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಶಾಸಕರು ಸಭಾಧ್ಯಕ್ಷರ ಪೀಠದ ಎದುರು ಬಂದು ಪ್ರತಿಭಟನೆ ನಡೆಸಿದರು. ಎಷ್ಟೇ ಮನವಿ ಮಾಡಿದರೂ ಪ್ರತಿಭಟನೆ ನಿಲ್ಲದ ಕಾರಣಕ್ಕೆ ಸ್ಪೀಕರ್‌ ಯು.ಟಿ.ಖಾದರ್‌ ಕಲಾಪವನ್ನು ಹತ್ತು ನಿಮಿಷ ಮುಂದೂಡಿದರು. ಅನಂತರ ಸಭಾಧ್ಯಕ್ಷರ ಕಚೇರಿಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಗುರುವಾರ ಗೃಹ ಸಚಿವರಿಂದ ಉತ್ತರ ಕೊಡಿಸುವ ಭರವಸೆ ಸಿಕ್ಕ ಬಳಿಕ ಪ್ರತಿಭಟನೆ ವಾಪಸ್‌ ಪಡೆಯಲಾಯಿತು.

ಸರಕಾರಿ ನೌಕರರ ವೇತನ ಹೆಚ್ಚಳ: ಸಿಎಂ ಉತ್ತರಕ್ಕೆ
ಬೆಳಗಾವಿ: ಸರಕಾರಿ ನೌಕರರ ವೇತನ ಹೆಚ್ಚಳ ವಿಷಯದಲ್ಲಿ ಮುಖ್ಯಮಂತ್ರಿಗಳ ಉತ್ತರಕ್ಕೆ ಒತ್ತಾಯಿಸಿ ವಿಪಕ್ಷದ ಸದಸ್ಯರು ಬುಧವಾರವೂ ಧರಣಿ ಮುಂದುವರಿಸಿದರು.

Advertisement

ಬುಧವಾರ ಬೆಳಗ್ಗೆ ಸದನ ಆರಂಭವಾಗುತ್ತಿದ್ದಂತೆ ಬಾವಿಗಿಳಿದು ಧರಣಿ ಮುಂದುವರಿಸಿದ ವಿಪಕ್ಷದ ಸದಸ್ಯರು ಸರಕಾರಕ್ಕೆ ತನ್ನ ನೌಕರರ ವೇತನ ಹೆಚ್ಚಳ ಮಾಡಬಾರದು ಎಂಬ ಉದ್ದೇಶ ಇದೆಯೇ ಎಂದು ಪ್ರಶ್ನಿಸಿದರು. ಕಳೆದ ಅಧಿವೇಶನದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ಮೋಸ ಮಾಡಿದೆ ಎಂದು ಆರೋಪ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸರಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್‌, ನಾವು ಸರಕಾರಿ ನೌಕರರ ಪರವಾಗಿದ್ದೇವೆ. ಹೀಗಿರುವಾಗ ಮೋಸ ಮಾಡಿದ್ದೀರಿ ಎಂಬುದರ ಅರ್ಥ ಏನು ಎಂದು ಖಾರವಾಗಿ ಪ್ರಶ್ನೆ ಮಾಡಿದರು. ಆಡಳಿತ ಪಕ್ಷದ ಯು.ಬಿ. ವೆಂಕಟೇಶ ಅವರು, ನಾವು ಬಂದು ಆರು ತಿಂಗಳಾಗಿವೆ. ಇಷ್ಟು ವರ್ಷ ಸರಕಾರದಲ್ಲಿದ್ದವರು ಏನು ಮಾಡುತ್ತಿದ್ದರು ಎಂದು ಖಾರವಾಗಿ ಪ್ರಶ್ನೆ ಮಾಡಿದರು.

ಯು.ಬಿ. ವೆಂಕಟೇಶ ಮಾತಿನಿಂದ ಕೆರಳಿದ ಸದಸ್ಯರು ಆಡಳಿತ ಪಕ್ಷದ ಮೇಲೆ ಮುಗಿಬಿದ್ದರು. ಸರಕಾರಿ ನೌಕರರ ವೇತನ ಹೆಚ್ಚಳ ವಿಷಯದಲ್ಲಿ ಮುಖ್ಯಮಂತ್ರಿಗಳು ಬಂದು ಉತ್ತರ ಕೊಡಬೇಕು ಎಂದು ಪಟ್ಟು ಹಿಡಿದು, ಧರಣಿ ಮುಂದುವರಿಸಿದರು. ಸಭಾಪತಿಗಳು ಹತ್ತು ನಿಮಿಷ ಸದನ ಮುಂದೂಡಿ ಸಂಧಾನ ಸಭೆ ನಡೆಸಿದರು. ಸದನ ಮುಂದುವರಿದಾಗಲೂ ಧರಣಿ ಮುಂದುವರಿಯಿತು. ಆಗ ಸಭಾಪತಿಗಳು ಈ ವಿಷಯವಾಗಿ ತಾವೇ ಮುಖ್ಯಮಂತ್ರಿಗಳನ್ನು ಸಂಪರ್ಕಿಸಿ ಅವರಿಂದ ಉತ್ತರ ಕೊಡಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿ ಗದ್ದಲಕ್ಕೆ ತೆರೆ ಎಳೆದರು.

 

Advertisement

Udayavani is now on Telegram. Click here to join our channel and stay updated with the latest news.

Next