ಮಡಿಕೇರಿ: ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಎರಡು ವರ್ಷಗಳ ಕಿನಂತರ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ.
2022ರ ಜೂ. 8ರಂದು ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಚನ್ನಂಗಿ ನಿವಾಸಿ ತಂಗಪ್ಪನ್ ಕೆ.ಕೆ ಅವರ ಮನೆಗೆ ಮುಸುಕುಧಾರಿಗಳು ನುಗ್ಗಿ ತಂಗಪ್ಪನ್ ಹಾಗೂ ಪತ್ನಿಯ ಮೇಲೆ ಹಲ್ಲೆ ಮಾಡಿ 2 ಲಕ್ಷ ರೂ. ಹಾಗೂ 8 ಗ್ರಾಂ ತೂಕದ ಚಿನ್ನದ ಸರವನ್ನು ಕದ್ದೊಯ್ದಿದ್ದರು. ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೊಂಡ ಪೊಲೀಸರು ಚನ್ನಂಗಿ ನಿವಾಸಿ ಲವಕುಮಾರ್ ಎಂ.ಕೆ (51), ಅತ್ತೂರಿನ ವಿನೋದ್ ಎಚ್.ಸಿ. (45), ವೀರಾಜಪೇಟೆಯ ಅಯ್ಯಪ್ಪ ಬೆಟ್ಟ ಸಮೀಪದ ಅನೀಶ್ ಪಿ.ಎಸ್. (33), ಅತ್ತೂರಿನ ಪ್ರವೀಣ್ ಕುಮಾರ್ (46) ಹಾಗೂ ಭದ್ರಗೊಳದ ರಫೀಕ್ ಕೆ.ಈ. (45) ಅವರನ್ನು ಬಂಧಿಸಿದ್ದಾರೆ.
ಬಂಧಿತರಿಂದ 60 ಸಾವಿರ ರೂ. ನಗದು, 7.9 ಗ್ರಾಂ ಚಿನ್ನದ ಸರ, ಕೃತ್ಯಕ್ಕೆ ಬಳಸಿದ ಕಾರು ಹಾಗೂ ಕಳ್ಳತನದ ಹಣದಿಂದ ಖರೀದಿಸಿದ ಮತ್ತೊಂದು ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಡಿಕೇರಿ ಉಪ ವಿಭಾಗದ ಡಿವೈಎಸ್‌ಪಿ ಮಹೇಶ್ ಕುಮಾರ್, ಮಡಿಕೇರಿ ನಗರ ವೃತ್ತದ ಸಿಪಿಐ ರಾಜು ಪಿ.ಕೆ., ಪಿಎಸ್‌ಐಗಳಾದ ರಾಘವೇಂದ್ರ ಹಾಲಪ್ಪ ಆರ್.ಎಸ್., ಸಿದ್ದಾಪುರ ಪೊಲೀಸ್ ಠಾಣೆಯ ಸಿಬಂದಿ, ಡಿಸಿಆರ್‌ಬಿ ಹಾಗೂ ತಾಂತ್ರಿಕ ಸಿಬಂದಿಯನ್ನು ಒಳಗೊಂಡ ವಿಶೇಷ ತನಿಖಾ ತಂಡ ಕಾರ್ಯಾಚರಣೆ ನಡೆಸಿತು.
ಪೊಲೀಸರ ಕಾರ್ಯದಕ್ಷತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಶ್ಲಾಘಿಸಿದ್ದಾರೆ.