ದಿಬ್ರುಗಢ್:ರಸ್ತೆ ಮಧ್ಯೆ ಎರಡು ಗುಂಪುಗಳ ನಡುವೆ ನಡೆಯುತ್ತಿದ್ದ ಹೊಡೆದಾಟವನ್ನು ತಪ್ಪಿಸಲು ಹೋದ ಪೊಲೀಸ್ ಕಮಾಂಡೋವನ್ನೇ ಅಪರಿಚಿತ ವ್ಯಕ್ತಿಗಳು ಚೂರಿಯಿಂದ ಇರಿದು ಹತ್ಯೆಗೈದ ಘಟನೆ ಅಸ್ಸಾಂನ ತಿನ್ ಸುಕಿಯಾ ಜಿಲ್ಲೆಯಲ್ಲಿ ನಡೆದಿದೆ.
ಏನಿದು ಘಟನೆ:
37 ವರ್ಷದ ಗಿರೀಶ್ ದತ್ತ ಅಸ್ಸಾಂ ಕಮಾಂಡೋ ಬೆಟಾಲಿಯನ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ದತ್ತ ಅವರನ್ನು ದೇರಾಗಾಂವ್ ನಲ್ಲಿರುವ ಪೊಲೀಸ್ ತರಬೇತಿ ಕಾಲೇಜಿಗೆ ತೆರಳುವಂತೆ ನಿರ್ದೇಶನ ಬಂದ ಹಿನ್ನೆಲೆಯಲ್ಲಿ ಮಾಕುಂನಲ್ಲಿರುವ ಮನೆಗೆ ಬಂದಿದ್ದರು.
ಹೀಗೆ ತಿಂಗರೈನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ತಂದೆ ಜೊತೆ ದತ್ತ ಮನೆಗೆ ವಾಪಸ್ ಬರುತ್ತಿದ್ದ ವೇಳೆ ಎನ್ ಎಚ್ 38ರಲ್ಲಿ ಕೆಲವು ಜನರು ಗುಂಪುಗೂಡಿ ಗಲಾಟೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ದತ್ತ, ಎರಡೂ ಗುಂಪುಗಳ ಮಧ್ಯೆ ಪ್ರವೇಶಿಸಿ ಸಮಾಧಾನಪಡಿಸಲು ಯತ್ನಿಸಿದ್ದರು.
ಈ ಸಂದರ್ಭದಲ್ಲಿ ಎರಡೂ ಗುಂಪುಗಳ ನಡುವೆ ವಾಕ್ಸಮರ ಮುಂದುವರಿದಾಗ, ದತ್ತ ಘಟನಾ ಸ್ಥಳ ಬಿಟ್ಟು ಹೊರಟಿದ್ದರು. ಆಗ ಕೆಲವು ದುಷ್ಕರ್ಮಿಗಳು ದತ್ತ ಅವರನ್ನು ಹಿಂಬಾಲಿಸಿಕೊಂಡು ಬಂದು ಚೂರಿಯಿಂದ ಇರಿದು ಹತ್ಯೆಗೈದಿರುವುದಾಗಿ ಸ್ಥಳೀಯರು ತಿಳಿಸಿರುವುದಾಗಿ ವರದಿ ಮಾಡಿದೆ.
ಸೋಮವಾರ ಘಟನೆಯನ್ನು ಖಂಡಿಸಿ ಎನ್ ಎಚ್ 38ರಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿ ಹಲವು ಗಂಟೆಗಳ ಕಾಲ ರಸ್ತೆ ತಡೆ ನಡೆಸಿದ್ದರು. ಅಲ್ಲದೇ 24ಗಂಟೆಯೊಳಗೆ ಕೊಲೆ ಆರೋಪಿಗಳನ್ನು ಬಂಧಿಸಿ, ತಕ್ಕ ಶಿಕ್ಷೆ ಕೊಡಬೇಕೆಂದು ಆಗ್ರಹಿಸಿದ್ದಾರೆ.