ಗುವಾಹಟಿ: ಅಸ್ಸಾಂನಲ್ಲಿ ಜಾರಿಯಾಗಿರುವ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ ಆರ್ ಸಿ)ಯ ಅಂತಿಮ ಪಟ್ಟಿ ಶನಿವಾರ ಬಿಡುಗಡೆಗೊಂಡಿದ್ದು, 3.11 ಕೋಟಿ ಜನ ಅಸ್ಸಾಂ ಪ್ರಜೆಗಳೆಂದು, 19 ಲಕ್ಷ ಮಂದಿ ಪಟ್ಟಿಯಿಂದ ಹೊರಗುಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಎನ್ ಆರ್ ಸಿ ಅಂತಿಮ ಪಟ್ಟಿ ಬಿಡುಗಡೆ:
ಇಂದು ಅಧಿಕೃತವಾಗಿ ಅಸ್ಸಾಂ ಸರಕಾರ ಬಿಡುಗಡೆಗೊಳಿಸಿದ ಎನ್ ಆರ್ ಸಿ ಅಂತಿಮ ಪಟ್ಟಿಯಲ್ಲಿ ಒಟ್ಟು 3,11, 21,004 ಮಂದಿ ಅಸ್ಸಾಂ ಪೌರತ್ವ ಪಡೆದಿದ್ದು, 19,06, 657 ಮಂದಿಯನ್ನು ಪಟ್ಟಿಯಿಂದ ಹೊರಗಿಟ್ಟಿದೆ. ಇವರೆಲ್ಲಾ ತಾವು ಅಸ್ಸಾಂ ನಿವಾಸಿಗಳೆಂಬ ಬಗ್ಗೆ ಯಾವುದೇ ದಾಖಲೆ ಸಲ್ಲಿಸಿಲ್ಲವಾಗಿತ್ತು ಎಂದು ವರದಿ ವಿವರಿಸಿದೆ.
ಕಳೆದ 30 ವರ್ಷಗಳ ಬಳಿಕ ನವೀಕೃತ ರಾಷ್ಟ್ರೀಯ ನಾಗರಿಕ ದಾಖಲಾತಿ ಮಾನ್ಯತೆ ಪಟ್ಟಿಯನ್ನು ಶನಿವಾರ ಬಿಡುಗಡೆಗೊಳಿಸಿದೆ. ಕಳೆದ ವರ್ಷ ಬಿಡುಗಡೆಗೊಳಿಸಿದ್ದ ಪಟ್ಟಿ ಪ್ರಕಾರ 2, 89, 83, 677 ಮಂದಿ ಅಸ್ಸಾಂ ನಾಗರಿಕ ಪೌರತ್ವಕ್ಕೆ ಅರ್ಹರಾಗಿದ್ದರು. ಅದರಲ್ಲಿ ಪಟ್ಟಿಯಿಂದ ಹೊರಗುಳಿದಿದ್ದವರ ಸಂಖ್ಯೆ 40,70, 707. ಇದರಲ್ಲಿ 36, 26, 630 ಮಂದಿ ಅಸ್ಸಾಂ ನಾಗರಿಕತ್ವಕ್ಕೆ ಮರು ಅರ್ಜಿ ಸಲ್ಲಿಸಿದ್ದರು.
ಎನ್ ಆರ್ ಸಿ ದೇಶದ ಇತಿಹಾಸದಲ್ಲಿಯೇ ಪೌರತ್ವ ಪರಿಶೀಲನೆ ನಡೆಸಿರುವ ಅತೀ ದೊಡ್ಡ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ಅಸ್ಸಾಂನಲ್ಲಿ ವಲಸಿಗರಾಗಿ ಬಂದು ನೆಲೆಸಿದವರ ಗುರುತು ಪತ್ತೆ ಹಚ್ಚುವುದೇ ಮುಖ್ಯ ಗುರಿಯಾಗಿತ್ತು. ಪ್ರಮುಖವಾಗಿ 1971ರಲ್ಲಿ ಮಾರ್ಚ್ 25ರಂದು ಬಾಂಗ್ಲಾದಿಂದ ಗಡಿಪಾರು ಮಾಡಿದವರು ಅಸ್ಸಾಂನಲ್ಲಿ ಬಂದು ನೆಲೆಸಿದ್ದರು. ಅವರ ಪತ್ತೆ ಹಚ್ಚುವಿಕೆಯಲ್ಲಿ ಎನ್ ಆರ್ ಸಿ ಪ್ರಮುಖ ಪಾತ್ರ ವಹಿಸಿದೆ.
ಎನ್ ಆರ್ ಸಿ ಪಟ್ಟಿ ಬಿಡುಗಡೆಗೊಂಡ ಹಿನ್ನೆಲೆಯಲ್ಲಿ ಯಾರು ಅಸ್ಸಾಮಿಗರು, ಯಾರು ಅಸ್ಸಾಮಿ ಪ್ರಜೆ ಅಲ್ಲ ಎಂಬ ವಿವರ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಲು ಮುಂಜಾಗ್ರತಾ ಕ್ರಮವಾಗಿ 51 ಸಿಎಪಿಎಫ್(ಕೇಂದ್ರ ಶಸ್ತ್ರಾಸ್ತ್ರ ಅರೆಸೇನಾ ಪಡೆ) ಕಂಪನಿಯನ್ನು ನಿಯೋಜಿಸಲಾಗಿದೆ ಎಂದು ವರದಿ ತಿಳಿಸಿದೆ.
ಅಪರಾಧ ದಂಡ ಸಂಹಿತೆ ಸೆಕ್ಷನ್ 144 ಅನ್ನು ಡಿಸ್ ಪುರ್ ನಲ್ಲಿ ಜಾರಿಗೊಳಿಸಲಾಗಿದೆ. ಅಲ್ಲದೇ ಭಾಂಗಾಗಢ್, ಬಾಶಿಸ್ಠಾ, ಹಾಟಿಗಾಂವ್, ಸೋನಾಪುರ್ ಮತ್ತು ಖೇಟ್ರಿ ಪ್ರದೇಶಗಳಲ್ಲಿ ನಿಷೇಧ ಜಾರಿಗೊಳಿಸಿದೆ.