ಅಸ್ಸಾಂ: ದೇಶಾದ್ಯಂತ ಕೋವಿಡ್-19 ಭೀತಿ ದಿನೇ ದಿನೇ ಹೆಚ್ಚಳವಾಗುತ್ತಿದ್ದು ಸಾವಿನ ಪ್ರಮಾಣ ಮತ್ತು ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಮುಂಜಾಗೃತ ಕ್ರಮವಾಗಿ ಹಲವು ದೇಶಗಳಲ್ಲಿ ಲಾಕ್ ಡೌನ್ ಮುಂದುವರಿಸುವ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಏತನ್ಮಧ್ಯೆ ಅಸ್ಸಾಂ ಮತ್ತು ಮೇಘಾಲಯದ ಅಬಕಾರಿ ಇಲಾಖೆಗಳು ಇಂದಿನಿಂದ (ಸೋಮವಾರ) ಮದ್ಯ ಮಾರಾಟಕ್ಕೆ ಅವಕಾಶ ನೀಡಿದೆ ಎಂದು ವರದಿ ತಿಳಿಸಿದೆ.
ಅಸ್ಸಾಂನಲ್ಲಿ ಮದ್ಯಮಾರಾಟ ಅಂಗಡಿಗಳು, ಸಗಟು ಮಾರಾಟ ಕೇಂದ್ರಗಳು, ಮದ್ಯ ತಯಾರಿಕಾ ಘಟಕಗಳು ಹಾಗೂ ಬಾಟಲಿಂಗ್ ಘಟಕಗಳು ಇಂದಿನಿಂದ ಪ್ರತಿನಿತ್ಯ ಏಳು ಗಂಟೆ ತೆರೆಯಲು ಸರ್ಕಾರ ಅವಕಾಶ ಕಲ್ಪಿಸಿದೆ. ಮೇಘಾಲಯದಲ್ಲಿ ಕೂಡ ಬೆಳಗ್ಗೆ 9 ರಿಂದ ಸಂಜೆ 4ರವರೆಗೂ ಮದ್ಯಮಾರಾಟ ಮಾಡಲಾಗುವುದು. ಈ ವೇಳೆ ಸಾಮಾಜಿಕ ಅಂತರ, ಮತ್ತು ಶುಚಿತ್ವ ಕಾಪಾಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಅನುಮತಿ ನೀಡಿರುವ ದಿನದಂದು ಮದ್ಯದಂಗಡಿಗಳು ಬೆಳಗ್ಗೆ 10 ರಿಂದ ಸಂಜೆ 5ರವರೆಗೂ ಮಾತ್ರ ತೆರೆದಿರಲಿವೆ. ಈ ಸಂದರ್ಭದಲ್ಲಿ ಬೆರಳೆಣಿಕೆಯ ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸಬೇಕು. ಮಾತ್ರವಲ್ಲದೆ ಬಾಟಲ್ ಹಾಗೂ ನಗದು ಮುಟ್ಟುವಾಗ ಹ್ಯಾಂಡ್ ಸ್ಯಾನಿಟೈಸರ್ ಬಳಕೆ ಮಾಡಬೇಕು ಎಂದು ಅಸ್ಸಾಂ ಅಬಕಾರಿ ಇಲಾಖೆ ಸೂಚನೆ ನೀಡಿದೆ.
ಸರ್ಕಾರದ ಮದ್ಯ ಮಾರಾಟ ಮಾಡಲು ಅವಕಾಶ ನೀಡಿರುವ ಆದೇಶವನ್ನು ಮೇಘಾಲಯದ ಅಬಕಾರಿ ಇಲಾಖೆ ಆಯುಕ್ತರಾದ ಪ್ರವೀಣ್ ಬಕ್ಸಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ತಿಳಿಸಿದ್ದಾರೆ.
ಮದ್ಯ ಮಾರಾಟ ಅಂಗಡಿಗಳನ್ನು ತೆರಯುವಂತೆ ಮೇಘಾಲಯದಲ್ಲಿ ಸರ್ಕಾರದ ಮೇಲೆ ತೀವ್ರ ಒತ್ತಡವಿದೆ. ಈವರೆಗೂ ಈ ರಾಜ್ಯದಲ್ಲಿ ಯಾವುದೇ ಕೋವಿಡ್ 19 ಸೋಂಕು ಪ್ರಕರಣ ದಾಖಲಾಗಿಲ್ಲ. ಬಿಜೆಪಿ ಸೇರಿದಂತೆ ಆಡಳಿತರೂಢ ಪಕ್ಷ ಮೈತ್ರಿ ಪಕ್ಷಗಳು ಲಾಕ್ ಡೌನ್ ಹಿನ್ನಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.
ಅಸ್ಸಾಂನಲ್ಲಿ 29 ಸೋಂಕು ಪ್ರಕರಣಗಳು ವರದಿಯಾಗಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ, ಅಸ್ಸಾ ಹಾಗೂ ಮೇಘಾಲಯದಂತೆ ಕೇಂದ್ರಾಡಳಿತ ಪ್ರದೇಶಗಳಲ್ಲಿಯೂ ಮದ್ಯ ಮಾರಾಟಕ್ಕೆ ಅವಕಾಶ ನೀಡುವಂತೆ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.