ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಂಗಳವಾರ (ಮಾರ್ಚ್ 29) ಸಂಜೆ ಅಸ್ಸಾಂ ಮತ್ತು ಮೇಘಾಲಯ ಸರ್ಕಾರಗಳು ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಸುಮಾರು 50 ವರ್ಷಗಳ ದೀರ್ಘಕಾಲದ ಗಡಿ ವಿವಾದಕ್ಕೆ ಅಂತ್ಯ ಕಂಡಂತಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:45 ನಿಮಿಷಗಳ ಪ್ರಯಾಣ ಕುತೂಹಲ…ತೆರೆಮರೆಯ ಹೀರೋ ಅನಾವರಣ; ಅಂದು ಇಂಗ್ಲಿಷ್ ಲೆಕ್ಚರ್ ಇಂದು…
ಗೃಹವ್ಯವಹಾರಗಳ ಸಚಿವಾಲಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಅಸ್ಸಾಂ ಮುಖ್ಯಮಂತ್ರಿ ಮತ್ತು ಮೇಘಾಲಯ ಮುಖ್ಯಮಂತ್ರಿ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಗೃಹ ವ್ಯವಹಾರ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಉಭಯ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ಗೃಹ ಸಚಿವಾಲಯದ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಮತ್ತು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ವರದಿ ವಿವರಿಸಿದೆ.
ಅಸ್ಸಾಂ ಮತ್ತು ಮೇಘಾಲಯ ಮುಖ್ಯಮಂತ್ರಿ ಜನವರಿ 31ರಂದು ಗಡಿ ವಿವಾದ ಬಗೆಹರಿಸುವ ಕರಡು ನಿರ್ಣಯವನ್ನು ಕೇಂದ್ರ ಗೃಹ ಸಚಿವಾಲಯ ಪರಿಶೀಲಿಸಿ, ಪರಿಗಣಿಸುವಂತೆ ಕೋರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಲ್ಲಿಸಿರುವುದಾಗಿ ವರದಿ ತಿಳಿಸಿದೆ.
ಪ್ರಸ್ತಾವಿತ ಒಪ್ಪಂದದ ಶಿಫಾರಸಿನ ಪ್ರಕಾರ, ವಿವಾದಕ್ಕೆ ಕಾರಣವಾಗಿರುವ ಒಟ್ಟು ಆರು ಪ್ರದೇಶಗಳ 36.79 ಚದರ ಕಿಲೋ ಮೀಟರ್ ಭೂ ಪ್ರದೇಶಗಳ ಪೈಕಿ ಅಸ್ಸಾಂ 18.51 ಚದರ ಕಿಲೋ ಮೀಟರ್ ಭೂಪ್ರದೇಶ ಪಡೆಯಲಿದೆ. ಇನ್ನುಳಿದ 18.28 ಚದರ ಕಿಲೋ ಮೀಟರ್ ಭೂಪ್ರದೇಶ ಮೇಘಾಲಯಕ್ಕೆ ಸೇರ್ಪಡೆಗೊಳ್ಳಲಿದೆ.
1972ರಲ್ಲಿ ಮೇಘಾಲಯದಿಂದ ಅಸ್ಸಾಂ ಬೇರ್ಪಟ್ಟ ಸಂದರ್ಭದಿಂದ ವಿವಾದ ಹುಟ್ಟಿಕೊಂಡಿತ್ತು. ನೂತನ ರಾಜ್ಯಗಳ ರಚನೆ ಸಂದರ್ಭದಲ್ಲಿನ ಪ್ರಾಥಮಿಕ ಒಪ್ಪಂದದ ವೇಳೆಯಲ್ಲಾದ ಗಡಿ ಗುರುತಿನ ವ್ಯತ್ಯಾಸದ ನಂತರ ವಿವಾದ ಉಲ್ಬಣಗೊಳ್ಳಲು ಕಾರಣವಾಗಿತ್ತು ಎಂದು ವರದಿ ತಿಳಿಸಿದೆ.