ಅಸ್ಸಾಂ : ಕೋವಿಡ್ ಸೋಂಕಿನಿಂದ ಇಡೀ ಜಗತ್ತೇ ಕಂಗೆಟ್ಟು ಹೋಗಿದೆ, ಜನರಿಗೆ ಕೋವಿಡ್ ರೋಗದ ಬಗ್ಗೆ ಇರುವ ಭಯ ಬೇರೆ ಯಾವ ರೋಗದ ಮೇಲು ಇರಲಿಕ್ಕಿಲ್ಲ ಅಷ್ಟರ ಮಟ್ಟಿಗೆ ಜನರಲ್ಲಿ ನಡುಕ ಹುಟ್ಟಿಸಿಬಿಟ್ಟಿದೆ, ಒಬ್ಬ ವ್ಯಕ್ತಿಗೆ ಕೋವಿಡ್ ಸೋಂಕು ದೃಢ ಪಟ್ಟಿದೆ ಎಂದು ಗೊತ್ತಾದರೆ ಆ ವ್ಯಕ್ತಿಯ ಕುಟುಂಬದವರೂ ಹತ್ತಿರ ಹೋಗಲು ಹೆದರುತ್ತಾರೆ ಅಷ್ಟೊಂದು ಭಯ ಹುಟ್ಟಿಸಿದೆ ಈ ಕೋವಿಡ್ ಪ್ರಕರಣ. ಆದರೆ ಅಸ್ಸಾಂ ನಲ್ಲೊಬ್ಬ ಅರೋಗ್ಯ ಸಿಬ್ಬಂದಿ ಕೋವಿಡ್ ಸೋಂಕಿಗೆ ತುತ್ತಾದ ವ್ಯಕ್ತಿಯನ್ನು ಸುಮಾರು ಅರ್ಧ ಕಿಲೋಮೀಟರ್ ದೂರದ ವರೆಗೆ ಆಂಬುಲೆನ್ಸ್ ಗಾಗಿ ತನ್ನ ಬೆನ್ನ ಮೇಲೆ ಹೊತ್ತು ತಂದು ಮಾನವೀಯತೆ ಮೆರೆದಿದ್ದಾನೆ.
108 ಆಂಬುಲೆನ್ಸ್ ನಲ್ಲಿ ಕೆಲಸ ನಿರ್ವಹಿಸುತ್ತಿರುವ ಗೋಪಾಲ್ ಸೈಕಿಯಾ ಅವರೇ ಕೋವಿಡ್ ಸೋಂಕಿತ ರೋಗಿಯನ್ನು ತನ್ನ ಆಂಬುಲೆನ್ಸ್ ಗೆ ಕರೆತರಲು ಬೆನ್ನ ಮೇಲೆ ಹೊತ್ತು ತಂದ ವ್ಯಕ್ತಿ.
ಇದನ್ನೂ ಓದಿ :ವಾಟ್ಸಾಪ್ ಕಾಲ್ ಗಳನ್ನು ರೆಕಾರ್ಡ್ ಮಾಡುವುದು ಹೇಗೆ? ಇಲ್ಲಿದೆ ಟಿಪ್ಸ್
ಕೋವಿಡ್ ಸೋಂಕಿತ ವ್ಯಕ್ತಿಯ ಮನೆಯ ಬಳಿಗೆ ಹೋಗಲು ಸರಿಯಾದ ಮಾರ್ಗ ಇಲ್ಲದ ಪರಿಣಾಮ ಪಿಪಿಇ ಕಿಟ್ ಧರಿಸಿದ್ದ ಅರೋಗ್ಯ ಸಿಬ್ಬಂದಿ ಗೋಪಾಲ್ ಸೈಕಿಯಾ ಅವರು ರೋಗಿಯ ಮನೆಯಿಂದ ಆಂಬುಲೆನ್ಸ್ ಇರುವಲ್ಲಿಗೆ ಸುಮಾರು 500 ಮೀಟರ್ ದೊರದವರೆಗೆ ಬೆನ್ನ ಮೇಲೆ ಹೊತ್ತು ತಂದು ನಂತರ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗೋಪಾಲ್ ಸೈಕಿಯಾ ಅವರು ರೋಗಿಯನ್ನು ಹೊತ್ತು ತರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ ಅಲ್ಲದೆ ಗೋಪಾಲ್ ಸೈಕಿಯಾ ಅವರ ಕಾರ್ಯಕ್ಕೆ ಪ್ರಶಂಸೆಯ ಮಹಾಪೂರವೇ ಹರಿದು ಬಂದಿದೆ.
ಅಸ್ಸಾಂನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಎರಡು ಲಕ್ಷದ ಗಡಿ ದಾಟಿದ್ದು, ಶೇಕಡಾ 89.61 ರಷ್ಟು ಮಂದಿ ಗುಣಮುಖರಾಗಿದ್ದಾರೆ ಎನ್ನಲಾಗಿದೆ. ಅಲ್ಲದೆ ಇದುವರೆಗೆ ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದ 902 ಮಂದಿ ಮೃತಪಟ್ಟಿದ್ದಾರೆ.