ಗುವಾಹಟಿ: ಅಸ್ಸಾಂ ಭಾರೀ ಪ್ರವಾಹದಿಂದಾಗಿ ನಲುಗಿ ಹೋಗಿದ್ದು, ನಾಲ್ವರು ಮಕ್ಕಳು ಸೇರಿದಂತೆ ಇನ್ನೂ ಹತ್ತು ಮಂದಿ ಸಾವನ್ನಪ್ಪಿದ್ದು, ಇದರೊಂದಿಗೆ ಸಾವಿನ ಸಂಖ್ಯೆ 118ಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಸಕಲೇಶಪುರ: ಅಪರಿಚಿತ ವಾಹನ ಢಿಕ್ಕಿ; ಶಾಲೆಗೆ ತೆರಳುತ್ತಿದ್ದ ದೈಹಿಕ ಶಿಕ್ಷಕ ಸ್ಥಳದಲ್ಲೇ ಸಾವು
ಅಸ್ಸಾಂನ 28 ಜಿಲ್ಲೆಗಳಲ್ಲಿನ ಸುಮಾರು 33.03 ಲಕ್ಷ ಜನರು ಇನ್ನೂ ಸೂಕ್ತ ನೆಲೆಯಿಲ್ಲದೆ ಪರದಾಡುವಂಥ ಪರಿಸ್ಥಿತಿ ಏರ್ಪಟ್ಟಿದೆ. ಬರಾಕ್ ಕಣಿವೆಯ ರಹದಾರಿ ಎಂದೇ ಕರೆಯಲ್ಪಡುವ ಸಿಲ್ಚಾರ್ ಪ್ರಾಂತ್ಯ ಸತತ ಐದನೇ ದಿನವೂ ಮುಳುಗಡೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾರ್ಪೆಟಾ, ಧುಬ್ರಿ, ಕರೀಂಗಂಜ್ ಮತ್ತು ಉದಾಲ್ ಗುರಿ ಜಿಲ್ಲೆಯಲ್ಲಿ ಒಟ್ಟು ಆರು ಮಂದಿ ಸಾವನ್ನಪ್ಪಿದ್ದು, ಕ್ಯಾಚಾರ್ ಮತ್ತು ಮೋರಿಗಾಂವ್ ನಲ್ಲಿ ತಲಾ ಒಬ್ಬರು ಸಾವನ್ನಪ್ಪಿರುವ ಘಟನೆ ಇಂದು ವರದಿಯಾಗಿದೆ.
ಅಸ್ಸಾಂನ 30 ಜಿಲ್ಲೆಗಳಲ್ಲಿ 45.34 ಲಕ್ಷ ಜನಸಂಖ್ಯೆ ಹೊಂದಿದ್ದು, ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಜನಜೀವನ ಅಸ್ತವ್ಯಸ್ತವಾಗಿರುವುದಾಗಿ ಅಸ್ಸಾಂ ರಾಜ್ಯದ ವಿಪತ್ತು ನಿರ್ವಹಣಾ ಪಡೆ ಬಿಡುಗಡೆಗೊಳಿಸಿದ ಬುಲೆಟಿನ್ ನಲ್ಲಿ ತಿಳಿಸಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 207 ಸಿಬ್ಬಂದಿಯನ್ನು ಇಟಾನಗರ ಮತ್ತು ಭುವನೇಶ್ವರದಿಂದ ಕರೆಯಿಸಿಕೊಳ್ಳಲಾಗಿದೆ. ಜೊತೆಗೆ ದಿಂಪುರದಿಂದ ಸೇನೆಯ 120 ಯೋಧರ ತಂಡವನ್ನು ರಕ್ಷಣಾ ಕಾರ್ಯಗಳಿಗಾಗಿ ನಿಯೋಜಿಸಲಾಗಿದೆ. ಸಿಲ್ಚಾರ್ ನ ಜಲಾವೃತ ಪ್ರದೇಶಗಳಲ್ಲಿನ ಕಾರ್ಯಾಚರಣೆಗೆ 9 ದೋಣಿಗಳನ್ನು ನಿಯೋಜಿಸಲಾಗಿದೆ ಎಂದು ವರದಿ ವಿವರಿಸಿದೆ.