ಗುವಾಹಟಿ: ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ 5 ರೂಪಾಯಿ ಕಡಿತಗೊಳಿಸಿರುವುದಾಗಿ ಅಸ್ಸಾಂ ಸರ್ಕಾರ ಶುಕ್ರವಾರ(ಫೆ.12, 2021) ಘೊಷಿಸಿದ್ದು, ಮದ್ಯದ ಮೇಲಿನ ಸುಂಕವನ್ನು ಶೇ.25ರಷ್ಟು ಇಳಿಕೆ ಮಾಡಿರುವುದಾಗಿ ತಿಳಿಸಿದೆ.
ಇದನ್ನೂ ಓದಿ:ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್ ಇದ್ದಂತೆ: ಎಚ್.ವಿಶ್ವನಾಥ್ ವಾಗ್ದಾಳಿ
ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನಂದಿತ ದಿನಕ್ಕೆ ಏರಿಕೆಯಾಗುತ್ತಿದೆ. ಈಗಾಗಲೇ ಮುಂಬೈ, ಬೆಂಗಳೂರು ಸೇರಿದಂತೆ ಪ್ರಮುಖ ಮಹಾನಗರಗಳಲ್ಲಿ ಪೆಟ್ರೋಲ್ ಲೀಟರ್ ಗೆ 90 ರೂಪಾಯಿ ದಾಟಿರುವುದಾಗಿ ವರದಿ ವಿವರಿಸಿದೆ.
ಪೆಟ್ರೋಲ್ ಡೀಸೆಲ್ ಬೆಲೆಯನ್ನು 5 ರೂಪಾಯಿ ಇಳಿಕೆ ಮಾಡಿರುವುದಾಗಿ ರಾಜ್ಯದ ವಿಧಾನಸಭೆಯಲ್ಲಿ ವಿತ್ತ ಸಚಿವ ಹಿಮಂತ್ ಬಿಸ್ವಾಸ್ ಘೋಷಿಸಿದ್ದಾರೆ.
ಸ್ಪೀಕರ್ ಸರ್, ಕೋವಿಡ್ 19 ಸೋಂಕು ಹೆಚ್ಚಳವಾದ ಸಂದರ್ಭದಲ್ಲಿ ನಾವು ಪೆಟ್ರೋಲ್, ಡೀಸೆಲ್ ಮತ್ತು ಮದ್ಯದ ಮೇಲೆ ಹೆಚ್ಚುವರಿಯಾಗಿ ಸುಂಕ ವಿಧಿಸಿದ್ದೇವು. ಇದೀಗ ಕೋವಿಡ್ ಸೋಂಕಿತರ ಸಂಖ್ಯೆ ಇಳಿ ಮುಖವಾಗಿದೆ. ಆ ನಿಟ್ಟಿನಲ್ಲಿ ಹೆಚ್ಚುವರಿಯಾಗಿ ವಿಧಿಸಿದ ಸುಂಕವನ್ನು ಇಳಿಕೆ ಮಾಡುವ ನನ್ನ ಪ್ರಸ್ತಾಪಕ್ಕೆ ಸಚಿವ ಸಂಪುಟದ ಸಹೋದ್ಯೋಗಿಗಳು ಬೆಂಬಲ ವ್ಯಕ್ತಪಡಿಸಿದ್ದರು.
ಇದರ ಪರಿಣಾಮ ಪೆಟ್ರೋಲ್, ಡೀಸೆಲ್ ಪ್ರತಿ ಲೀಟರ್ ಗೆ 5 ರೂಪಾಯಿ ಕಡಿಮೆಯಾಗಲಿದ್ದು, ಇಂದು ರಾತ್ರಿಯಿಂದಲೇ ಜಾರಿಯಾಗಲಿದ್ದು, ಇದರಿಂದ ಅಸ್ಸಾಂನ ಲಕ್ಷಾಂತರ ಗ್ರಾಹಕರಿಗೆ ಲಾಭವಾಗಲಿದೆ ಎಂದು ಹೇಳಿದರು.
ಮಾರ್ಚ್-ಏಪ್ರಿಲ್ ನಲ್ಲಿ ಅಸ್ಸಾಂ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮುಖ್ಯಮಂತ್ರಿ ಸರ್ಬಾನಂದಾ ಸೋನಾವಾಲ್ ನೇತೃತ್ವದ ಬಿಜೆಪಿ ಸರ್ಕಾರ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿಯುವ ನಿರೀಕ್ಷೆಯಲ್ಲಿದೆ.