Advertisement

ಕೇಂದ್ರ ಸಚಿವ ತೇಲಿ ಹಾಜರಿದ್ದ ಕಾರ್ಯಕ್ರಮದ ವೇಳೆ ನೀಲಿ ಚಿತ್ರ ಪ್ರಸಾರ; ಅಧಿಕಾರಿಗಳು ಕಂಗಾಲು

01:01 PM May 03, 2022 | Team Udayavani |

ದೀಬ್ರುಗಢ್:ಪ್ರಮುಖ ತೈಲ ಕಂಪನಿಯಾದ ಇಂಡಿಯನ್ ಆಯಿಲ್ ಕಂಪನಿ ಅಸ್ಸಾಂನ ಟಿನ್ಸುಕಿಯಾದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಈ ಸಂದರ್ಭದಲ್ಲಿ ವೇದಿಕೆ ಹಿಂಬದಿಯ ಸ್ಕ್ರೀನ್ ನಲ್ಲಿ ಪೋರ್ನ್ ವಿಡಿಯೋ ತುಣುಕು ಪ್ರಸಾರವಾದ ಪರಿಣಾಮ ಕೇಂದ್ರ ಸಚಿವ ರಾಮೇಶ್ವರ್ ತೇಲಿ, ಸಚಿವ ಸಂಜಯ್ ಕಿಸಾನ್ ಹಾಗೂ ಇಂಡಿಯನ್ ಆಯಿಲ್ ಕಂಪನಿಯ ಹಿರಿಯ ಅಧಿಕಾರಿಗಳು ಮುಜುಗರಕ್ಕೊಳಗಾದ ಘಟನೆ ನಡೆದಿತ್ತು. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಘಟನೆಗೆ ಸಂಬಂಧಿಸಿದಂತೆ ಕೆಲವು ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಿದ್ದು, ತನಿಖೆ ಮುಂದುವರಿದಿರುವುದಾಗಿ ಮಾಹಿತಿ ನೀಡಿರುವುದಾಗಿ ವರದಿ ವಿವರಿಸಿದೆ.

ಏನಿದು ಘಟನೆ:

ಇಂಡಿಯನ್ ಆಯಿಲ್ ಟಿನ್ಸುಕಿಯಾದಲ್ಲಿ ಆಯೋಜಿಸಿದ್ದ ಮೆಥನಾಲ್ ಸಂಯೋಜನೆಯ ಎಂ-15 ಪೆಟ್ರೋಲ್ ನ ಪ್ರಾಯೋಗಿಕ ಬಳಕೆಯ ಕಾರ್ಯಕ್ರಮದ ವೇಳೆ ಈ ಅಚಾತುರ್ಯ ನಡೆದಿದೆ ಎಂದು ವರದಿ ತಿಳಿಸಿದೆ.

ಕೇಂದ್ರ ಸಚಿವ ರಾಮೇಶ್ವರ್ ತೇಲಿ ಅವರು ಎಂ-15 ಪೆಟ್ರೋಲ್ ಪ್ರಾಯೋಗಿಕ ಬಳಕೆಯನ್ನು ಉದ್ಘಾಟಿಸಿದ್ದರು. ಈ ಸಂದರ್ಭದಲ್ಲಿ ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಸರಸ್ವತ್, ಅಸ್ಸಾಂ ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ ಅಧ್ಯಕ್ಷ ಬಿಕುಲ್ ಡೇಕಾ ಹಾಗೂ ತೈಲ ಕಂಪನಿಯ ಹಿರಿಯ ಅಧಿಕಾರಿಗಳು ಹಾಜರಿದ್ದರು.

Advertisement

ನಗರದ ಹೋಟೆಲ್ ವೊಂದರಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೂಲಗಳ ಪ್ರಕಾರ ಇಂಡಿಯನ್ ಆಯಿಲ್ ಅಧಿಕಾರಿಯೊಬ್ಬರು ಭಾಷಣ ಮಾಡುತ್ತಿದ್ದ ವೇಳೆ, ವೇದಿಕೆಯ ಹಿಂಭಾಗದಲ್ಲಿದ್ದ ಸ್ಕ್ರೀನ್ ನಲ್ಲಿ ಇದ್ದಕ್ಕಿದ್ದಂತೆ ನೀಲಿ ಚಿತ್ರದ ತುಣುಕು ಪ್ರಸಾರವಾಗಿತ್ತು. ಆಪರೇಟರ್ ಗಮನಕ್ಕೆ ಬಂದ ಕೂಡಲೇ ಪ್ರಸಾರ ಸ್ಥಗಿತಗೊಳಿಸುವ ಮುನ್ನ 3-4 ಸೆಕೆಂಡ್ಸ್ ಗಳ ತುಣುಕು ಪ್ರಸಾರವಾಗಿ ಗಣ್ಯರು ಹಾಗೂ ಆಹ್ವಾನಿತರು ಮುಜುಗರಕ್ಕೊಳಗಾಗಿರುವ ಘಟನೆ ನಡೆದಿರುವುದಾಗಿ ವರದಿ ವಿವರಿಸಿದೆ.

ಸಚಿವ ತೇಲಿ ಆಕ್ರೋಶ:

ಇಂಡಿಯನ್ ಆಯಿಲ್ ಅಧಿಕಾರಿ ಮಾತನಾಡುವ ವೇಳೆ ನಾನು ಅವರ ಭಾಷಣವನ್ನು ಆಲಿಸುತ್ತಿದ್ದೆ. ನನಗೆ ಹಿಂಬದಿಯ ಸ್ಕ್ರೀನ್ ನಲ್ಲಿ ಏನು ಪ್ರಸಾರವಾಗಿತ್ತು ಎಂಬ ಬಗ್ಗೆ ತಿಳಿಯಲಿಲ್ಲ. ಆದರೆ ನಂತರ ನನ್ನ ಕಾರ್ಯದರ್ಶಿ ಘಟನೆ ಬಗ್ಗೆ ಮಾಹಿತಿ ನೀಡಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೂಡಾ ಹಾಜರಿದ್ದು, ಈ ಬಗ್ಗೆ ಕೂಡಲೇ ತನಿಖೆ ನಡೆಸಿ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿರುವುದಾಗಿ ಕೇಂದ್ರ ಸಚಿವ ರಾಮೇಶ್ವರ ತೇಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next