ನವದೆಹಲಿ: ಅಸ್ಸಾಂ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎನ್ನುವ ಕುತೂಹಲದ ನಡುವೆಯೇ ರಾಜ್ಯದ ಹಿರಿಯ ಬಿಜೆಪಿ ಮುಖಂಡರಾದ ಹಿಮಂತ ಬಿಸ್ವಾ ಶರ್ಮಾ ಹಾಗೂ ಸರ್ವಾನಂದ ಸೋನಾವಾಲ್ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಶನಿವಾರ ಇಲ್ಲಿ ಭೇಟಿಯಾದರು.
ಅಸ್ಸಾಂನ ಮುಂದಿನ ಸರ್ಕಾರದ ನಾಯಕತ್ವ ವಿಚಾರ ಕುರಿತು ಚರ್ಚಿಸಲು ಬಿಜೆಪಿಯ ರಾಷ್ಟ್ರೀಯ ನಾಯಕರು ಬಿಜೆಪಿ ನಾಯಕರಾದ ಸರ್ವಾನಂದ ಸೋನೊವಾಲ್ ಮತ್ತು ಹಿಮಂತ ಶರ್ಮಾ ಅವರನ್ನು ದೆಹಲಿಗೆ ಬರುವಂತೆ ಶುಕ್ರವಾರ ತಿಳಿಸಿದ್ದರು. ವರಿಷ್ಠರ ಸೂಚನೆ ಮೇರೆಗೆ, ಈ ಉಭಯ ನಾಯಕರು ಶನಿವಾರ ಬೆಳಿಗ್ಗೆಯೇ ದೆಹಲಿ ತಲುಪಿದ್ದಾರೆ.
ನಡ್ಡಾ, ಅಮಿತ್ ಶಾ ಹಾಗೂ ಬಿ.ಎಲ್ ಸಂತೋಷ ಅವರು ಉಭಯ ನಾಯಕರ ಜೊತೆ ಪ್ರತ್ಯೇಕವಾಗಿ ಎರಡು ಸುತ್ತಿನ ಮಾತುಕತೆ ನಡೆಸಿದ್ದಾರೆ. ಮೂರನೇ ಸುತ್ತಿನಲ್ಲಿ ಇಬ್ಬರೂ ನಾಯಕರನ್ನು ಜೊತೆಯಾಗಿಯೇ ಕುರಿಸಿಕೊಂಡು ಸಭೆ ನಡೆಸಿದ್ದಾರೆ.
ಸಭೆಯ ನಂತರ ಮಾತನಾಡಿರುವ ಶರ್ಮಾ, ಅಸ್ಸಾಂ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದನ್ನು ನಿರ್ಧರಿಸಲು ಭಾನುವಾರ ಅಸ್ಸಾಂನಲ್ಲಿ ಸಭೆ ನಡೆಯಲಿದೆ ಎಂದು ವರಿಷ್ಠರು ಎಂದಿದ್ದಾರೆ.
ಅಸ್ಸಾಂನ ಸ್ಥಳೀಯ ಸೋನೊವಾಲ್-ಕಚಾರಿ ಬುಡಕಟ್ಟು ಜನಾಂಗಕ್ಕೆ ಸೇರಿದ ಸರ್ವಾನಂದ ಸೋನೊವಾಲ್ ಮತ್ತು ಈಶಾನ್ಯ ಪ್ರಜಾಸತ್ತಾತ್ಮಕ ಒಕ್ಕೂಟದ ಸಂಚಾಲಕ ಹಿಮಂತ ಶರ್ಮಾ, ಈ ಇಬ್ಬರೂ ಅಸ್ಸಾಂ ರಾಜ್ಯದ ಮುಖ್ಯಮಂತ್ರಿ ಗಾದಿಯನ್ನು ಏರುವುದಕ್ಕಾಗಿ ಸ್ಪರ್ಧೆಯಲ್ಲಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಯಾರು ಎಂಬುದನ್ನು ಚುನಾವಣೆ ಪೂರ್ವದಲ್ಲಿ ಬಿಜೆಪಿ ನಾಯಕರು ಘೋಷಣೆ ಮಾಡಿರಲಿಲ್ಲ.