ಮೈಸೂರು :ಮೈಸೂರಿನ ವಿಜಯನಗರದ ಕಾಳಿದಾಸ ರಸ್ತೆಯಿಂದ ಹೆಬ್ಬಾಳು ರಿಂಗ್ ರಸ್ತೆ ಸಂಪರ್ಕಿಸುವ ನಡುವಿನ 3.5 ಕಿ ಮೀ ಉದ್ಧದ ರಸ್ತೆಗೆ ಅಂಬರೀಶ್ ರಸ್ತೆ ಎಂದು ನಾಮಕರಣ ಮಾಡಲಾಯಿತು.
ಅಂಬರೀಶ್ ಅವರ ಪತ್ನಿ, ಮಂಡ್ಯ ಸಂಸದೆ ಸುಮಲತಾ ಅವರು ನೂತನ ರಸ್ತೆಯ ನಾಮಫಲಕ ಅನಾವರಣ ಮಾಡಿದರು. ಅಂಬರೀಶ್ ಪುತ್ರ ಅಭಿಷೇಕ್, ಸ್ಥಳೀಯ ಶಾಸಕ ಎಲ್ ನಾಗೇಂದ್ರ, ಮೇಯರ್ ಶಿವಕುಮಾರ್ ಸೇರಿದಂತೆ ಮತ್ತಿತರ ಪ್ರಮುಖರು ಈ ವೇಳೆ ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಸುಮಲತಾ, ಎದೆ ತುಂಬಿ ಬರುವ ಕ್ಷಣ ಇದು.ಅಂಬರೀಶ್ ಅವರಿಗೆ ಮೈಸೂರು ತುಂಬಾ ಇಷ್ಟವಾದ ಸ್ಥಳ. 3.5 ಕಿಮೀ ಉದ್ದದ ರಸ್ತೆಗೆ ಅಂಬರೀಶ್ ಹೆಸರಿಟ್ಟಿದ್ದಾರೆ. ಅಂಬರೀಶ್ ಅವರ ಕುಟುಂಬದವರು ಮೈಸೂರಿನಲ್ಲಿದ್ದಾರೆ. ಅಭಿಮಾನಿಗಳ ಬೇಡಿಕೆಯಿಂದ ಈ ರಸ್ತೆಗೆ ಹೆಸರು ಬಂದಿದೆ ಎಂದರು.
ಮೈಸೂರು-ಬೆಂಗಳೂರು ಹೈವೇಗೆ ಅಂಬರೀಷ್ ಹೆಸರಿಡಬೇಕೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿಡುವಂತೆ ನಾನೇ ಪತ್ರ ಬರೆದಿದ್ದೇನೆ. ಹಳೆ ಮೈಸೂರು ಭಾಗ ಸೇರಿದಂತೆ ಇಡೀ ರಾಜ್ಯಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಅಪಾರ ಹಾಗಾಗಿ ಅವರ ಹೆಸರಿಡುವುದು ಸೂಕ್ತ ಎಂದು ಸುಮಲತಾ ಹೇಳಿದರು.
ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ವಿಚಾರಕ್ಕೆ ಸಂಬಂಧಿಸಿ, ನಾನು ಈವರೆಗೂ ತಟಸ್ಥವಾಗಿದ್ದೇನೆ. ಎಲ್ಲರೂ ಚುನಾವಣೆಗೆ ನಿಲ್ಲುವಂತೆ ಕೇಳುತ್ತಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತೇನೆ. ಬೆಂಬಲಿಗರು ಸಭೆ ನಡೆಸಿರುವ ಬಗ್ಗೆ ಗೊತ್ತಿಲ್ಲ.ಅಂಬರೀಶ್ ಬೆಂಬಲಿಗರು ಸಭೆ ನಡೆಸಿದ್ದಾರೆ. ಪುತ್ರ ಚುನಾವಣೆಗೆ ಸ್ಪರ್ಧೆ ಮಾಡುವುದು ಅವನಿಗೆ ಬಿಟ್ಟದ್ದು.ನಾನು ಚುನಾವಣೆಗೆ ಬಂದಿದ್ದೇ ಆಕಸ್ಮಿಕ.
ಹಣೆಯ ಬರಹ ಯಾವ ರೀತಿ ಆಗುತ್ತೋ ಆ ರೀತಿ ಆಗುತ್ತದೆ ಎಂದರು.
ಅಭಿಷೇಕ್ ಅಂಬರೀಶ್ ಮಾತನಾಡಿ, ನಮ್ಮ ತಂದೆಯ ಹೆಸರು ಮೈಸೂರಿನ ರಸ್ತೆಗೆ ಹೆಸರಿಟ್ಟಿರುವುದಕ್ಕೆ ತುಂಬಾ ಖುಷಿಯಾಗುತ್ತದೆ. ಈ ರೀತಿಯ ಕಾರ್ಯಕ್ರಮದಿಂದ ಅಂಬರೀಶ್ ಅವರ ಮೇಲೆ ಜನರು ಎಷ್ಟು ಪ್ರೀತಿ ಇಟ್ಟಿದ್ದಾರೆ ಎಂಬುದು ಗೊತ್ತಾಗುತ್ತದೆ. ನಾವು ಜನರ ಸೇವೆ ಮಾಡಲು ಬಂದಿದ್ದೇವೆ. ರಾಜಕಾರಣದಿಂದಲೇ ಜನರ ಸೇವೆ ಮಾಡಬೇಕಾ? ಅಭಿಮಾನಿಗಳಿಂತ ಹೆಚ್ಚು ಪವರ್ ಯಾವುದೂ ಇಲ್ಲ. ಜನರು ಅವಕಾಶ ಕೊಟ್ಟರೆ ಜನಸೇವೆ ಮಾಡುತ್ತೇವೆ. 2023ರ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಮದ್ದೂರಿನಲ್ಲಿ ನನ್ನ ಹೆಸರು ಕೇಳಿ ಬರುತ್ತಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತೇನೆ. ಹಲವಾರು ರೀತಿಯ ಸೇವೆ ಮಾಡಬಹುದು. ಚುನಾವಣೆ ರಾಜಕಾರಣದ ಮೂಲಕವೇ ಸೇವೆ ಮಾಡಬೇಕು ಅಂತೇನಿಲ್ಲಾ ಎಂದರು.