Advertisement

ನೀರು, ವಿಳಾಸ ಕೇಳಿ ಸರ ಎಗರಿಸ್ತಾರೆ ಹುಷಾರ್‌!

02:44 PM Aug 31, 2021 | Team Udayavani |

ಬೆಂಗಳೂರು: ಮೂರು ವರ್ಷಕ್ಕೊಮ್ಮೆ ಒಂದೊಂದು ರಾಜಧಾನಿಗೆ ಎಂಟ್ರಿ ಕೊಡ್ತಾರೆ. ವಿಳಾಸ, ನೀರು, ದಾರಿ ಕೇಳ್ತಾರೆ. ಕ್ಷಣಾರ್ಧದಲ್ಲಿ ಸರ ಕಸಿದು ಪರಾರಿಯಾಗುತ್ತಾರೆ. ಬಂದ ಹಣದಲ್ಲಿ ಗೋವಾ, ಮುಂಬೈನಲ್ಲಿ ಮೋಜು- ಮಸ್ತಿ ಮಾಡ್ತಾರೆ. ಇದು, ಉತ್ತರ ಪ್ರದೇಶ ಮೂಲದ
ಶಾಮ್ಲಿ ಗ್ಯಾಂಗ್‌ನ ಅಪರಾಧ ಕೃತ್ಯದ ಮಾದರಿ ಹಾಗೂ ಜೀವನ ಶೈಲಿ. ಉತ್ತರ ಪ್ರದೇಶ, ಪಂಜಾಬ್‌ನಲ್ಲಿ ಈ ಗ್ಯಾಂಗ್‌ನದ್ದೇ ಹವಾ.

Advertisement

ಪೊಲೀಸರ ಕಾರ್ಯವೈಖರಿಯನ್ನು ಗಮನಿಸಿಯೇ ಸರ ಕಳವು ಮಾಡುವ ಈ ಗ್ಯಾಂಗ್‌, ಕಳೆದ ಆರೇಳು ವರ್ಷಗಳಿಂದ ಕರ್ನಾಟಕದ ಬೆಂಗಳೂರು ನಗರ, ಗ್ರಾಮಾಂತರ ಪ್ರದೇಶಗಳಲ್ಲಿ ಸಕ್ರಿಯವಾಗಿದ್ದು, ಈ ತಂಡದ ವಿರುದ್ಧ ಸುಮಾರು 60ಕ್ಕೂ ಅಧಿಕ ಸರ ಕಳವು ಪ್ರಕರಣಗಳು ದಾಖಲಾಗಿವೆ.

ಅಲ್ಲದೆ, ತಮಿಳುನಾಡು, ಉತ್ತರ ಪ್ರದೇಶದಲ್ಲೂ ತಮ್ಮ ಕೈಚಕಳ ತೋರಿಸಿರುವ ಈ ತಂಡದ ಇಬ್ಬರು ಆರೋಪಿಗಳನ್ನು ಹೊಸಕೋಟೆ ಪೊಲೀಸರು ಕಾರ್ಯಾಚರಣೆಯಲ್ಲಿ ಇತ್ತೀಚೆಗಷ್ಟೇ ಬಂಧಿಸಲಾಗಿತ್ತು. ಮೂರು ವರ್ಷಕ್ಕೊಮ್ಮೆ ಆಯ್ದ ರಾಜ್ಯಗಳ ರಾಜಧಾನಿಗಳಿಗೆ ವಿಮಾನದಲ್ಲಿ ಹೋಗುವ ಈ ಗ್ಯಾಂಗ್‌, ಎರಡು ದಿನ ಇದ್ದು, ಕನಿಷ್ಠ 10-15 ಚಿನ್ನದ ಸರ ಕಳವು ಮಾಡಿ ರೈಲಿನಲ್ಲಿ ಪರಾರಿಯಾಗುತ್ತಾರೆ.

ಇದನ್ನೂ ಓದಿ:ಕಾಂಗ್ರೆಸ್ ಮಾಡಿದ ಸಾರ್ವಜನಿಕ ಆಸ್ತಿಗಳನ್ನು BJP ಖಾಸಗಿ ಪಾಲಿಗೆ ನೀಡುತ್ತಿದೆ:ಎಚ್.ಕೆ.ಪಾಟೀಲ

ಆರೋಪಿಗಳ ಕೃತ್ಯಹೇಗೆ?:ವಿಮಾನದಲ್ಲಿ ಒಂದು ಬಾರಿ ಬರುವ ಈ ಗ್ಯಾಂಗ್‌ನ ಸದಸ್ಯರು, ಬೆಂ. ಗ್ರಾಮಾಂತರ ಪ್ರದೇಶಗಳಲ್ಲಿಯೇ ಸ್ನೇಹಿತರ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಾರೆ. ಇಲ್ಲವಾದಲ್ಲಿ ಲಾಡ್ಜ್ಗಳಲ್ಲಿ ಉಳಿದುಕೊಳ್ಳುತ್ತಾರೆ. ಇದೇ ವೇಳೆ ಕಪ್ಪು ಬಣ್ಣದ ಪಲ್ಸರ್‌ ಬೈಕ್‌ಗಳನ್ನು ಕಳವು ಮಾಡುತ್ತಾರೆ. ಒಂಟಿಯಾಗಿ ಓಡಾಡುವ ಮಹಿಳೆಯರು, ವೃದ್ಧೆಯರನ್ನೇ ಟಾರ್ಗೆಟ್‌ ಮಾಡಿಕೊಂಡಿರುವ ಈ ಗ್ಯಾಂಗ್‌ ಸದಸ್ಯರು, ವಿಳಾಸ, ನೀರು, ದಾರಿ ಕೇಳುವುದು ಅಥವಾ ಅಂಗಡಿಗಳಲ್ಲಿ ವಸ್ತು ಖರೀದಿಸುವ ನೆಪದಲ್ಲಿ ಮಹಿಳೆಯರ ಸರ ಕಸಿದು ಪರಾರಿಯಾಗುತ್ತಾರೆ.
ನಂತರ ಕಳವು ಮಾಡಿ ಬೈಕ್‌ಗಳನ್ನು ರೈಲು ನಿಲ್ದಾಣ, ವಿಮಾನ ನಿಲ್ದಾಣ, ಇತರೆ ಪಾರ್ಕಿಂಗ್‌ ಸ್ಥಳ ಗಳಲ್ಲಿ ನಿಲ್ಲಿಸಿ ಪರಾರಿಯಾಗುತ್ತಾರೆ. ಆದರೆ ಇತ್ತೀಚೆಗೆ ವಿಮಾನದಲ್ಲಿ ತೆರಳಿದರೆ, ಕಸ್ಟಮ್ಸ್‌ ಅಧಿಕಾರಿಗಳ ತಪಾಸಣೆಗೆಯಲ್ಲಿ ಸಿಕ್ಕಿ ಹಾಕಬಹುದೆಂದು ಹೆದರಿ ರೈಲಿನಲ್ಲಿ ಪ್ರಯಾಣಿಸುತ್ತಾರೆ.

Advertisement

ಪೊಲೀಸರ ಮೇಲೆ ನಿಗಾ: ನಗರಕ್ಕೆ ಬರುವ ಗ್ಯಾಂಗ್‌, ಎರಡು ದಿನ ಮಾತ್ರ ಉಳಿದುಕೊಳ್ಳುತ್ತದೆ ‌ .ಈ ವೇಳೆ ಕಳವು ದ್ವಿಚಕ್ರ ವಾಹನಗಳ ಮೂಲಕ ಕೃತ್ಯಕ್ಕೆ ಪ್ರದೇಶಗಳನ್ನು ಆಯ್ಕೆ ಮಾಡುತ್ತಾರೆ. ಬಳಿಕ ಆ ವ್ಯಾಪ್ತಿಯಲ್ಲಿ ಸದ್ಯದಲ್ಲೇ ಯಾವುದಾದರೂ ಸರ್ಕಾರಿ ಕಾರ್ಯಕ್ರಮಗಳು ನಡೆ
ಯುತ್ತವೆಯೇ? ಅದಕ್ಕೆ ಪೊಲೀಸರ ಭದ್ರತೆ ಹೇಗೆ? ಅಥವಾ ಅಲ್ಲಿನ ಪೊಲೀಸರ ಕಾರ್ಯಾಚರಣೆ ಹೇಗಿದೆ ಎಂದು ಸ್ಥಳೀಯ ಸ್ನೇಹಿತರ ಮೂಲಕ ಮಾಹಿತಿ ಪಡೆದು ಕೊಳ್ಳುತ್ತಾರೆ. ಬಳಿಕ ಕೃತ್ಯ ಎಸಗಿ ನೇರವಾಗಿ ರೈಲು ನಿಲ್ದಾಣಗಳಿಗೆ ಹೋಗಿ ಪರಾರಿಯಾಗತ್ತಾರೆ.

ಮೋಜು ಮಸ್ತಿಗಾಗಿ ಕಳ್ಳತನ
ಸರ ಕಳವು ಮಾಡಿ ರೈಲುಗಳಲ್ಲಿ ತೆರಳುವ ಗ್ಯಾಂಗ್‌, ಮುಂಬೈ ಅಥವಾ ಗೋವಾ ಕಡೆಗೆ ಹೋಗಿ ಮೋಜು-ಮಸ್ತಿ ಮಾಡಿಕೊಂಡು ಜೀವನ ಕಳೆಯುತ್ತಾರೆ. ಉಳಿದ ಹಣದಲ್ಲಿ ತಮ್ಮ ಗ್ರಾಮಕ್ಕೆ ತೆರಳುತ್ತಾರೆ.ಕೆಲ ತಿಂಗಳ ಬಳಿಕ ಮತ್ತೊಂದು ರಾಜಧಾನಿಗೆ ಹೋಗಿ ಕೃತ್ಯ ಎಸಗುತ್ತಾರೆ. ಪೊಲೀಸರ ಭಯದಿಂದ ಒಂದು ರಾಜಧಾನಿಯಲ್ಲಿ ಕೃತ್ಯ ಎಸಗಿದರೆ,ಕನಿಷ್ಠ ಮೂರು ವರ್ಷಗಳ ಕಾಲ ಆ ಕಡೆ ಹೋಗುವುದಿಲ್ಲ.

-ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next