ಆಳಂದ: ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಮತ್ತು ಜಿಲ್ಲಾಡಳಿತ ಜಾರಿಗೆ ತಂದಿರುವ ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂಗೆ ಜನರು ಗೊಂದಲಕ್ಕೆ ಒಳಗಾಗಿ ಮದುವೆ ಸೇರಿದಂತೆ ಇನ್ನಿತರ ಕುಟುಂಬಗಳ ಶುಭ ಕಾರ್ಯಕ್ಕೆ ಅನುಮತಿ ಪಡೆಯಲು ಕಚೇರಿಗಳತ್ತ ಅಲೆದಾಡುತ್ತಿದ್ದಾರೆ.
ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಏ. 21ರಿಂದ ರಾತ್ರಿ 9 ಗಂಟೆಯಿಂದ ಮೇ 4ರ ಬೆಳಗ್ಗೆ 6 ಗಂಟೆ ವರೆಗೆ ನೈಟ್ ಕರ್ಫ್ಯೂ, ಶುಕ್ರವಾರ ರಾತ್ರಿ 9ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆ ವರೆಗೆ ವಿಕೆಂಡ್ ಕರ್ಫ್ಯೂ ಜಾರಿ ಮಾಡಿ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲು ಮುಂದಾದ ಪ್ರಯುಕ್ತ ಜನ ಸಾಮಾನ್ಯರು ಗೊಂದಲಕ್ಕಿಡಾಗಿ ತಮ್ಮ ಎಲ್ಲ ಚಟುವಟಿಕೆಗಳನ್ನು ಮೊಟುಕುಗೊಳಿಸ ತೊಡಗಿದ್ದಾರೆ. ವರ್ಷದ ಏಪ್ರಿಲ್ ಮತ್ತು ಮೇ ತಿಂಗಳಲ್ಲೇ ಅತಿ ಹೆಚ್ಚಾಗಿ ನಡೆಯುವ ಮದುವೆ, ಕುಪ್ಪಸ, ನಿಶ್ಚಿತಾರ್ಥ ಕಾರ್ಯಕ್ರಮಗಳಿಗೆ ಮುಂದಾದವರಿಗೆ ನುಂಗದ ತುತ್ತಾಗಿ ಪರಿಣಮಿಸಿದೆ.
ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಜಿಲ್ಲಾಡಳಿತ ಆದೇಶಿಸಿರುವುದಿಂದ ವಧು-ವರನ ಕುಟುಂಬಸ್ಥರು ತಹಶೀಲ್ದಾರ್ ಕಚೇರಿಗೆ ವಿವಾಹ ಆಮಂತ್ರಣ ಪತ್ರಿಕೆಯೊಂದಿಗೆ ಅಲೆದಾಡುತ್ತಿದ್ದಾರೆ. ಹೀಗಾಗಿ ಜನದಟ್ಟಣೆಯೂ ಹೆಚ್ಚಾಗುತ್ತಿದೆ. ಮದುವೆ ಮಾಡಿಕೊಳ್ಳಲೇ ಬೇಕಾದಲ್ಲಿ ಸರ್ಕಾರದ ನಿಯಮಾವಳಿಯಂತೆ ತಾಲೂಕು ತಹಶೀಲ್ದಾರ್ ಅವರಿಂದ ಅನುಮತಿ ಪಡೆದು 50 ಜನರು ಪಾಲ್ಗೊಳ್ಳಲು ಮಾತ್ರ ಅನುಮತಿ ನೀಡಲಾಗುತ್ತಿದೆ. ಇದುವರೆಗೂ ತಾಲೂಕಿನಲ್ಲಿ ಮದುವೆ ಮಾಡಿಕೊಳ್ಳಲು 120 ಅರ್ಜಿ ಸಲ್ಲಿಕೆಯಾಗಿವೆ.
ಎಲ್ಲ ಅರ್ಜಿಗಳಿಗೆ ತಹಶೀಲ್ದಾರರು ನಿಯಮಾವಳಿಯಂತೆ ವಿವಾಹ ಕೈಗೊಳ್ಳಬೇಕು ಎಂದು ಷರತ್ತು ವಿಧಿ ಸಿ, ಅನುಮತಿ ನೀಡಿದ್ದಾರೆ. ಇನ್ನು ಸಾರ್ವಜನಿಕರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಂದುವರಿದಿದೆ. ದಾಂಪತ್ಯ ಜೀವನಕ್ಕೆ ಕಾಲಿಡಬೇಕಾದ ಜೋಡಿಗಳ ಕನಸು ಕಮರಿ ಹೋಗಲು ನೈಟ್ ಕರ್ಫ್ಯೂ, ವಿಕೆಂಡ್ ಕರ್ಫ್ಯೂ ಅಡ್ಡಿಯಾಗಿದ್ದರಿಂದ ವಧು-ವರರ ಎರಡು ಕುಟುಂಬಸ್ಥರಿಗೆ ದಿಕ್ಕು ತೋಚದಾಗಿದೆ.
ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಪಟ್ಟಣದ ಎ.ವಿ.ಪಾಟೀಲ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮವೊಂದರ ಕುಟುಂಬಸ್ಥರಿಗೆ ದಂಡ ವಿಧಿಸಲಾಗಿದೆ. ಇದರಿಂದಾಗಿ ಅನೇಕರು ಮದುವೆಗಳನ್ನು ಮುಂದೂಡುವ ಯೋಚನೆಯಲ್ಲಿದ್ದಾರೆ. ಶುಭ ಸಮಾರಂಭಗಳಿಗೆ ಅನುಮತಿ ಪಡೆಯಲು ಮುಂದಾಗುವ ಜನರಿಗೆ ದಾಖಲೆ ಸಂಗ್ರಹ, ಸಾರಿಗೆ ವೆಚ್ಚ ಮತ್ತು ಮಧ್ಯವರ್ತಿಗಳಿಗೆ ಹಣ ಹೀಗೆ ಜೇಬಿಗೆ ಕತ್ತರಿಯೂ ಬೀಳತೊಡಗಿದೆ ಎಂದು ಜನರು ಅಳಲು ತೋಡಿಕೊಂಡಿದ್ದಾರೆ.