Advertisement

ಇಲ್ಲಿ ಎಲ್ಲವೂ ಒಪ್ಪಿತವಲ್ಲ. ತಪ್ಪುಗಳನ್ನು ಪ್ರಶ್ನಿಸುವುದು ನಮ್ಮ ಜವಾಬ್ದಾರಿ..!

02:31 PM Apr 03, 2021 | Team Udayavani |

ಪ್ರಶ್ನೆ ಮಾಡುವವರಿಗೆ ಅದೆಷ್ಟೋ ಮಂದಿ, ಅಯ್ಯೋ ಇವ್ನೇನಯ್ಯ..ಇಷ್ಟೊಂದು ಪ್ರಶ್ನೆ ಮಾಡ್ತಾನೆ.. ? ಎಂದು ಹೇಳುತ್ತಾರೆ ಆದರೇ, ಯಾವುದೇ ವಿಷಯವನ್ನು ಕಲಿಯಬೇಕಾದರೂ ಅದನ್ನು ನಾವು ಪ್ರಶ್ನಿಸುವ ಮೂಲಕವೇ ಪ್ರಾರಂಭ ಮಾಡಬೇಕು. ಪ್ರಶ್ನೆ ಮಾಡದೆ ಯಾವುದೇ ವಿಷಯದ ಬಗ್ಗೆ ನಿರ್ದಿಷ್ಟವಾದ ಜ್ಞಾನದ ಅರಿವು ಪಡೆಯುವುದು ಅಸಾಧ್ಯ.

Advertisement

ಪುಸ್ತಕವನ್ನು ಓದಿದರೆ ಜ್ಞಾನ ಬರುತ್ತದೆ, ಸಂಪನ್ಮೂಲ ವ್ಯಕ್ತಿಗಳ ಭಾಷಣ ಕೇಳಿದರೆ ಜ್ಞಾನ ಬರುತ್ತದೆ ಎಂದು ನಮಗೆ ತಿಳಿದೇ ಇದೆ. ಆದರೆ ಓದುತ್ತಿರುವ, ಕೇಳುತ್ತಿರುವ ವಿಷಯ ಎಷ್ಟು ಸತ್ಯ, ಎಷ್ಟು ಸುಳ್ಳು ಎಂದು ಪ್ರಶ್ನಿಸುವ ಮನೋಭಾವ ನಮ್ಮಲ್ಲಿ ಇರಬೇಕು. ಈ ಅಭ್ಯಾಸ ಮನುಷ್ಯನಲ್ಲಿ ಹುಟ್ಟಿನಿಂದಲೇ  ಬಂದಿರುತ್ತದೆ. ಆದರೆ ಅದಕ್ಕೆ ಪೂರಕ ವಾತಾವರಣ ಲಭಿಸದಿದ್ದರೆ ಅಥವಾ ಪ್ರಶ್ನಿಸಲು ಬೇಕಾದ ವಿಷಯದ ಬಗ್ಗೆ ನಾವು ಜ್ಞಾನಾರ್ಜನೆ ಮಾಡಿಕೊಳ್ಳದಿದ್ದರೆ ಪ್ರಶ್ನಿಸುವ ಅಭ್ಯಾಸ ನಮಲ್ಲಿ ಸತ್ತು ಹೊಗುತ್ತದೆ. ಒಂದು ವೇಳೆ ನಮ್ಮಲ್ಲಿ ಈ ಅಭ್ಯಾಸ ಸತ್ತೇ ಹೋಯಿತು ಎಂದಾದರೆ ನಾವು ನೋಡಿದ್ದನ್ನೆಲ್ಲ ನಿಜ ಮತ್ತು ಕೇಳಿದ್ದನ್ನೆಲ್ಲಾ ಸತ್ಯ ಎಂದು ನಂಬುವ ಮನಸ್ಥಿತಿಯನು ತಲುಪುತ್ತೇವೆ.

ಈಗಿನ ಯುವ ಜನರಲ್ಲಿ ಪ್ರಶ್ನಿಸುವ ಮನೋಭಾವ ಕಾಲ ಕ್ರಮೇಣ ಕಡಿಮೆಯಾಗುತ್ತಲೇ ಇದೆ. ಸಾಮಾಜಿಕ ಜಾಲತಾಣದಲ್ಲಿ ಬರುವ ಎಲ್ಲಾ ವಿಷಯಗಳನ್ನು ಒಂದು ಬಾರಿಯಾದರೂ ಸರಿಯೋ, ತಪ್ಪೋ ಎಂದು ಯೋಚಿಸದೆ ಕಣ್ಣಿಗೆ ಕಂಡದ್ದನ್ನು ಸತ್ಯವೆಂದು ಭಾವಿಸಿ ಲೈಕ್, ಕಮೆಂಟ್, ಶೇರ್ ಮಾಡುತ್ತಾರೆ.

ಎಲ್ಲಾ ಕ್ಷೇತ್ರಗಳ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಜನಸಾಮಾನ್ಯರಿಂದ ಪ್ರಶ್ನೆಗಳ ಸುರಿಮಳೆಯೇ ಕಾಣಸಿಗುತ್ತದೆ. ಹೆಚ್ಚಾಗಿ ಸಿನಿ ಕ್ಷೇತ್ರದ ನಟ, ನಟಿಯರ ಬಗ್ಗೆ ಅಥವಾ ಟ್ರೆಂಡ್‌ನಲ್ಲಿರುವ ವಿಷಯಗಳ ಬಗ್ಗೆಯೇ ಇರುತ್ತದೆ. ಆದರೆ ಅದೇ ಜನಸಾಮಾನ್ಯ ಎಷ್ಟು ಮಂದಿ ರಾಜಕಾರಣಿಗಳನ್ನು, ಅವರ ಆಡಳಿತದ ತಪ್ಪು ಸರಿಗಳ ಕುರಿತು ಪ್ರಶ್ನೆ ಮಾಡುತ್ತಾನೆ..? ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕು.

ಇಂದಿನ ಯುವಜನತೆ ರಾಜಕೀಯದಲ್ಲಿ ಆಸಕ್ತಿ ಕಳೆದುಕೊಳ್ಳುವುದಕ್ಕೆ ಅವರಿಗೆ ರಾಜಕೀಯದ ಬಗ್ಗೆ ಹೆಚ್ಚು ವಿಷಯ ತಿಳಿಯದೆ ಇರುವುದು ಒಂದು ಕಾರಣ ಎಂದರೆ ತಪ್ಪಾಗಲಾರದು. ಅವರಲ್ಲಿನ ಕುರುಡು ಸಿದ್ಧಾಂತವೂ ಇದಕ್ಕೆ ಕಾರಣವಾಗಿರಬಹುದು.  ನಮ್ಮನ್ನು ಆಳುವವರು ತಪ್ಪು ಮಾಡಿದಾಗ ಅವರನ್ನು ಪ್ರಶ್ನಿಸುವುದು ನಮ್ಮ ಹಕ್ಕಲ್ಲವೇ? ಸಾಮಾನ್ಯವಾಗಿ ರಾಜಕೀಯ ನಾಯಕರನ್ನು ಓರ್ವ  ಪತ್ರಕರ್ತನೋ, ಮಾಧ್ಯಮಗಳೋ, ವಿರೋಧಪಕ್ಷದ ನಾಯಕರೋ, ಅಥವಾ ಪಕ್ಷದ ಸದಸ್ಯರೋ ಪ್ರಶ್ನೆ ಮಾಡುತ್ತಾರೆ ಹೊರತಾಗಿ ಒಬ್ಬ ಸಾಮಾನ್ಯ ಯುವಕ,  ಓರ್ವ ಸಾಮಾನ್ಯ ಪ್ರಜೆ ಪ್ರಶ್ನಿಸುವುದನ್ನು ಕಾಣಸಿಗುವುದು ನಮಗೆ ಬಹಳ ಅಪರೂಪ.

Advertisement

ಹೆಚ್ಚಿನ ಯುವ ಜನತೆಯಲ್ಲಿ ರಾಜಕೀಯ ಅಡಳಿತದಲ್ಲಿ ಹಾಗೂ ರಾಜಕೀಯದಲ್ಲಿ ಆಸಕ್ತಿ ಇಲ್ಲದೆ ಇರುವುದು ದೇಶದ ಬೆಳವಣಿಗೆ ಕುತ್ತಾಗುವುದೆಂದರೆ ತಪ್ಪಾಗಲಾರದು. ಹಿಂದಿನಿಂದ ಬಂದಿರುವ ಕುಟುಂಬ ರಾಜಕೀಯವನ್ನು ಪ್ರಶ್ನಿಸುವ ಮೂಲಕ ಅಲೋಚನೆಗಳಿಗೆ ದಾರಿಮಾಡಿಕೊಳ್ಳಬೇಕಿದೆ.

ಏನೇ ಅಗಲಿ ಒಂದಂತೂ ನಿಜ ಎಲ್ಲಿ ಯಾರೂ ಯಾವುದನ್ನು ಪ್ರಶ್ನಿಸುವುದಿಲ್ಲವೋ ಅಲ್ಲಿ ತಪ್ಪುಗಳು ಸರ್ವೇಸಾಮಾನ್ಯವಾಗಿ ಜರುಗುತ್ತಲೇ ಇರುತ್ತದೆ. ಶಾಲೆಯಲ್ಲಿ ಟೀಚರ್ ಹೇಳುವುದೇ ಪರಮಸತ್ಯ ಎಂದು ನಂಬುವ ವಿದ್ಯಾರ್ಥಿಗೆ ವೇದಿಕೆ ಮೇಲೆ ನಿಂತು ಭಾಷಣ ಮಾಡುವ ರಾಜಕೀಯ ನಾಯಕನ ಮಾತು ಕೂಡ ಪರಮಸತ್ಯವೆಂದೇ ಅನ್ನಿಸುತ್ತದೆ, ಆದ್ದರಿಂದ ನಾವು ಯಾವುದೇ ವಿಷಯವನ್ನು ಕಲಿಯುವಾಗಲೇ ತಪ್ಪನ್ನು ಪ್ರಶ್ನಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಪ್ರಶ್ನೆಯ ಮೂಲಕವೇ ನಮ್ಮ ಮುಂದೆ ಸಮಸ್ಯೆಗಳು ತೆರೆದುಕೊಳ್ಳಲು ಸಾಧ್ಯ.

ಪ್ರಶ್ನೆಯ ಮೂಲಕವೇ ಇರುವ ಸಮಸ್ಯೆಗಳಿಗೆ ಪರಿಹಾರ ಹುಡುಕುವ ದಾರಿಯನ್ನು ತೆರೆಯಲು ಸಾಧ್ಯ. ಉತ್ತರವಿಲ್ಲದ ಸಮಸ್ಯೆ ಇಲ್ಲ ಎಂಬಂತೆ ಪ್ರಶ್ನೆ ಒಂದೇ ಸರ್ವ ಸಮಸ್ಯೆಗೂ ಪರಿಹಾರ ಹುಡುಕುವ ಮೊದಲ ಹೆಜ್ಜೆಯಾಗಿದೆ. ಅಷ್ಟೇ ಏಕೆ ನಾವು ನಂಬಿರುವ ವಿಜ್ಞಾನದ ತಳಪಾಯವೇ ಪ್ರಶ್ನೆಯೇ ಆಗಿದೆ. ಯಾವುದೇ ವಿಷಯದ ಸತ್ಯ ಹಾಗೂ ಅಸತ್ಯತೆಯನ್ನು ತಿಳಿದುಕೊಳ್ಳುವ ಮನಸ್ಥಿತಿಯನ್ನು ಬೆಳೆಸಿಕೊಂಡು ವಿಷಯವನ್ನು ಪ್ರಶ್ನಿಸುವ ಮೂಲಕವೇ ಎಲ್ಲವನ್ನು ಕಲಿಯಲು ಪ್ರಾರಂಭಿಸಬೇಕಾಗಿದೆ. ಈ ಮೂಲಕ ನಿಜವಾದ ಬೆಳವಣಿಗೆಯತ್ತ  ಹೆಜ್ಜೆ ಹಾಕಬೇಕಾಗಿದೆ. ಪ್ರಶ್ನೆ ಮಾಡುವುದು ಕೇವಲ ಸಂದೇಹಕ್ಕಷ್ಟೇ ಅಲ್ಲ. ಅದು ಒಳ್ಳೆಯದಕ್ಕೂ ಹೌದು. ಇಲ್ಲಿ ಎಲ್ಲವೂ ಒಪ್ಪಿತವಲ್ಲ.  ತಪ್ಪುಗಳನ್ನು ಪ್ರಶ್ನಿಸುವುದು ನಮ್ಮ ಜವಾಬ್ದಾರಿ..!

ತೇಜಸ್ವಿನಿ

ಆಳ್ವಾಸ್ ಕಾಲೇಜು, ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next