ಕಾರ್ಕಳ: ಕೋವಿಡ್ ಮನುಷ್ಯತ್ವದ ಪರೀಕ್ಷೆ ಮಾಡುತ್ತಿದೆ. ಕೊರೊನಾದಿಂದ ತಮ್ಮವರೇ, ತಮಗೆ ಬೇಕಾದವರೇ ಮೃತಪಟ್ಟರೂ ಯಾರೂ ಹತ್ತಿರ ಸುಳಿದಾಡುವುದಿಲ್ಲ. ಇಂತಹ ವಿಚಿತ್ರ ಸನ್ನಿವೇಶದಲ್ಲಿ ಇಲ್ಲೊಬ್ಬರು ಕೋವಿಡ್ ಸೋಂಕಿತ ವ್ಯಕ್ತಿಯ ಶವವನ್ನು ಬಾವಿಯಿಂದ ಮೇಲಕ್ಕೆತ್ತಿ ಮಾನವೀಯತೆ ಜತೆಗೆ ಹೃದಯ ವೈಶಾಲ್ಯ ಮೆರೆದಿದ್ದಾರೆ. ಅವರೇ ಮಂಗಳೂರು ನಿವಾಸಿ ಆಸಿಫ್. ಆಪತ್ಭಾಂಧವ ಆಸಿಫ್ ಎಂದೇ ಅವರು ಉಭಯ ಜಿಲ್ಲೆಯಲ್ಲಿ ಹೆಸರುವಾಸಿ.
ಕಾರ್ಕಳದ ಮಾರುಕಟ್ಟೆ ಮಾರ್ಗ ನಿವಾಸಿ ವೀಡಿಯೋ ಗ್ರಾಫರ್ ಪ್ರಸನ್ನ (45) ಅವರು 2 ದಿನಗಳ ಹಿಂದೆಯಷ್ಟೇ ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕೋವಿಡ್ ತಪಾಸಣೆ ವೇಳೆ ವರದಿ ಪಾಸಿಟಿವ್ ಬಂದಿದ್ದರಿಂದ ಮನನೊಂದು ಅವರು ಈ ಕೃತ್ಯ ಮಾಡಿಕೊಂಡಿದ್ದರು. ಸೋಂಕಿತ ವ್ಯಕ್ತಿಯ ಶವವನ್ನು ಬಾವಿಯಿಂದ ಮೇಲೆತ್ತುವುದು ತಾ| ಆಡಳಿತಕ್ಕೆ ಮತ್ತು ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿತ್ತು. ಸ್ಥಳೀಯರು, ಪೊಲೀಸ್, ಅಗ್ನಿಶಾಮಕ ದಳ ಹೀಗೆ ಎಲ್ಲರೂ ಸ್ಥಳದಲ್ಲಿದ್ದರು. ಆದರೆ ಸೋಂಕಿತ ಶವ ಮೇಲಕ್ಕೆತ್ತುವ ಧೈರ್ಯ ಹಾಗೂ ಮನಸ್ಸು ಅವರ್ಯಾರಿಗೂ ಬಂದಿರಲಿಲ್ಲ. ಇದೇ ವೇಳೆ ಅಲ್ಲಿದ್ದ ಅಧಿಕಾರಿಗಳ ಕಣ್ಣಿಗೆ ಕಂಡಿದ್ದು ಆಪತ್ಭಾಂಧವ ಮಂಗಳೂರಿನ ನಿವಾಸಿ ಆಸಿಫ್ ಅವರು.
ತಹಶೀದ್ದಾರ್ ಪುರಂದರ ಹೆಗ್ಡೆ ಅವರು ಮೂಲ್ಕಿ ಕಾರ್ನಾಡು ಮೈಮೂನಾ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದ ಸ್ಥಾಪಕ ಆಸಿಫ್ ಆಪತ್ಭಾಂಧವ ಅವರಿಗೆ ಕರೆ ಮಾಡಿ ಸಹಾಯ ಕೋರಿದ್ದರು. ತತ್‌ಕ್ಷಣವೇ ಮಂಗಳೂರಿನಿಂದ ಆಗಮಿಸಿದ ಆಸಿಫ್ ಸ್ಥಳೀಯರ ನೆರವಿನಿಂದ ಬಾವಿಗಿಳಿದು ಕೈಯಲ್ಲಿಯೇ ಶವ ಮೇಲಕ್ಕೆತ್ತಿದರು. ಬಳಿಕ ಸ್ಯಾನಿಟೈಸರ್, ಸೋಪ್‌ಗ್ಳನ್ನು ಬಳಸಿ ಸ್ನಾನ ಮಾಡಿ ಶುಚಿಯಾದರು. ಅವರ ಮಾನವೀಯತೆ, ಹೃದಯ ವೈಶಾಲ್ಯತೆಗೆ ಎಲ್ಲೆಡೆಯಿಂದಲೂ ಮೆಚ್ಚುಗೆ ವ್ಯಕ್ತಗೊಂಡಿತ್ತು. ಯಾವುದೇ ಸಂಭಾವನೆ, ಫಲಾಪೇಕ್ಷೆ ಪಡೆಯದೆ ಈ ಸೇವೆಯನ್ನು ಉಚಿತವಾಗಿ ನೀಡಿದ್ದರು.
ಆಸಿಫ್ ಈ ಹಿಂದೆ ಸುರತ್ಕಲ್‌ನಲ್ಲಿ ಸೋಂಕಿತ ವ್ಯಕ್ತಿಯನ್ನು ಆತ ವಾಸವಿದ್ದ ಪ್ಲಾಟ್‌ನಿಂದ ಎತ್ತಿಕೊಂಡು ಬಂದಿದ್ದರು. ಅಷ್ಟೇ ಅಲ್ಲ ಮಂಗಳೂರು ಹಾಗೂ ಸುತ್ತಮುತ್ತ ಯಾರಿಗೂ ಎಷ್ಟೇ ಕಷ್ಟ ಎದುರಾದರೂ ತತ್‌ಕ್ಷಣಕ್ಕೆ ಆಸಿಫ್ ಧಾವಿಸಿ ಬರುತ್ತಾರೆ. ರಸ್ತೆ ಬದಿ ಅನಾಥವಾಗಿ ಇದ್ದ ಅದೆಷ್ಟೋ ಮಂದಿಯನ್ನು ಸ್ವತಃ ಆರೈಕೆ ಮಾಡಿ, ಚಿಕಿತ್ಸೆ ಕೊಡಿಸಿ ಸಂರಕ್ಷಿಸಿ ಮನೆ ಹಾಗೂ ಆಶ್ರಮಗಳಿಗೆ ಸೇರಿಸುತ್ತಾರೆ. ಆಸ್ಪತ್ರೆಯಲ್ಲಿ ಬಿಲ್ ಕಟ್ಟಲಾಗದೆ ತೊಂದರೆ ಅನುಭವಿಸುತ್ತಿರುವ ಬಡವರಿಗೆ ದಾನಿಗಳಿಂದ ಹಣ ಸಂಗ್ರಹಿಸಿ ನೆರವಾಗುತ್ತಾರೆ. ಬಡವರ ಕಣ್ಣೀರು ಒರೆಸುವಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ. ಕಷ್ಟ ಕಾಲದಲ್ಲಿ ಜನರಿಗೆ ದೇವರಂತೆ ಬಂದು ಸಹಾಯ ಮಾಡುವ ಅವರ ಗುಣ ಶ್ಲಾಘನೆಗೆ ಕಾರಣವಾಗಿದೆ. ಇದು ದೇವರಿಗೆ ಇಷ್ಟವಾದ ಕೆಲಸ ಎಂದು ಮಾಡುತ್ತೇನೆ ಎಂಬುದು ಆಸಿಫ್ ಅವರ ಮಾತು. ಕೊರೊನಾ ಸೋಂಕಿತ ವ್ಯಕ್ತಿಯ ಶವವನ್ನು ಬಾವಿಯಿಂದ ಮೇಲಕ್ಕೆತ್ತುವುದು ದೊಡ್ಡ ಸವಾಲಾಗಿತ್ತು. ವ್ಯಕ್ತಿ ಸೋಂಕಿತ ಎನ್ನುವುದೇ ಇದಕ್ಕೆ ಕಾರಣವಾಗಿತ್ತು. ಆಗ ಮುಂದೆ ಬಂದವರು ಆಸಿಫ್. ಅವರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ಅವರ ಸೇವೆಯನ್ನು ಸ್ಮರಿಸಿಕೊಂಡರು.