ನವದೆಹಲಿ: ಜಮ್ಮು-ಕಾಶ್ಮೀರದಲ್ಲಿರುವ ಏಷ್ಯಾದ ಅತೀ ದೊಡ್ಡ ಆಕರ್ಷಕ ಟ್ಯೂಲಿಪ್ ಉದ್ಯಾನವನಕ್ಕೆ ಕಳೆದ ಏಳು ದಿನಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದಾರೆ.
ಇದನ್ನೂ ಓದಿ:ಕೋಟ ಡಾ. ಶಿವರಾಮ ಕಾರಂತರ ಆಪ್ತ ಸಹಾಯಕಿ ಮಾಲಿನಿ ಮಲ್ಯ ನಿಧನ
ಫ್ಲೋರಿ ಕಲ್ಚರ್ ಇಲಾಖೆಯ ಮಾಹಿತಿ ಪ್ರಕಾರ, ಮಾರ್ಚ್ 19ರಂದು ಟ್ಯೂಲಿಪ್ ಗಾರ್ಡನ್ ಪ್ರವಾಸಿಗರ ಭೇಟಿಗೆ ಮುಕ್ತವಾಗಿದ್ದು, ಅಂದಿನಿಂದ ಈವರೆಗೆ ಅಂದಾಜು 1,15,000 ಪ್ರವಾಸಿಗರು ಭೇಟಿ ನೀಡಿದ್ದಾರೆ. 2022ರಲ್ಲಿ ಟ್ಯೂಲಿಪ್ ಗಾರ್ಡನ್ ಗೆ ದಾಖಲೆ ಪ್ರಮಾಣದ 3.6 ಲಕ್ಷ ಪ್ರವಾಸಿಗರು ಭೇಟಿ ನೀಡಿರುವುದಾಗಿ ವರದಿ ತಿಳಿಸಿದೆ.
ಈ ಬಾರಿ ಕಳೆದ ವರ್ಷದ ಪ್ರವಾಸಿಗರ ಸಂಖ್ಯೆಯನ್ನು ಮೀರಿಸುವ ನಿರೀಕ್ಷೆ ಇದೆ ಎಂದು ಟ್ಯೂಲಿಪ್ ಗಾರ್ಡನ್ ಅಧಿಕಾರಿ ಶೇಕ್ ರಸೂಲ್ ತಿಳಿಸಿದ್ದಾರೆ. ಶ್ರೀನಗರದ ವಿಶ್ವಪ್ರಸಿದ್ಧ ದಾಲ್ ಲೇಕ್ ಮತ್ತು ಝಬ್ರಾವನ್ ಹಿಲ್ಸ್ ನಡುವೆ ಇರುವ 30 ಎಕರೆ ಪ್ರದೇಶದಲ್ಲಿ ಟ್ಯೂಲಿಪ್ ಗಾರ್ಡನ್ ಇದೆ.
ಉದ್ಯಾನವನದಲ್ಲಿ ಈ ವರ್ಷ 68 ಪ್ರಬೇಧಗಳ ಸುಮಾರು 16ಲಕ್ಷಕ್ಕೂ ಅಧಿಕ ಟ್ಯೂಲಿಪ್ ಹೂಗಳಿವೆ. ಟ್ಯೂಲಿಪ್ ಗಾರ್ಡನ್ ಸಿದ್ದಪಡಿಸಲು ಸುಮಾರು 500 ತೋಟಗಾರಿಕಾ ಸಿಬಂದಿಗಳು ಹಗಲು, ರಾತ್ರಿ ಶ್ರಮಿಸಿದ್ದರು.
ಒಂದು ತಿಂಗಳ ಕಾಲ ಟ್ಯೂಲಿಪ್ ಗಾರ್ಡನ್ ತೆರೆದಿರುತ್ತದೆ. ಪ್ರವಾಸಿಗರು ನೂರಾರು ಬಗೆಯ ಟ್ಯೂಲಿಪ್ ಹೂಗಳನ್ನು ವೀಕ್ಷಿಸಬಹುದಾಗಿದೆ. ಇದೊಂದು ವಿಶಿಷ್ಟ ಅನುಭವ ನೀಡಲಿದೆ. ಜೊತೆಗೆ ಪ್ರವಾಸಿಗರು ತಮ್ಮ ಖುಷಿಯನ್ನು ಹಂಚಿಕೊಂಡಿರುವುದಾಗಿ ರಸೂಲ್ ತಿಳಿಸಿದ್ದಾರೆ.